ಹರ್ಯಾಣ: ರ್‍ಯಾನ್ ಶಾಲೆಯ ವಿದ್ಯಾರ್ಥಿಯ ಹತ್ಯೆ ಪ್ರಕರಣ; ಆರೋಪಿಗೆ 5 ವರ್ಷದ ಬಳಿಕ ಜಾಮೀನು ನೀಡಿದ ಸುಪ್ರೀಂ
ಗುರುಗ್ರಾಮ, 20: ಏಳು ವರ್ಷ ಪ್ರಾಯದ ಪ್ರದ್ಯುಮ್ನ ಠಾಕೂರ್‌ನನ್ನು ಹತ್ಯೆಗೈದ ಪ್ರಕರಣದ ಆರೋಪಿಗೆ ಸುಪ್ರೀಂ ಕೋರ್ಟ್(Supreme Court) ಗುರುವಾರ ಜಾಮೀನು ಮಂಜೂರು ಮಾಡಿದೆ.
ಹತ್ಯೆಯಾದ ಪ್ರದ್ಯುಮ್ನ ಠಾಕೂರ್ ಹಾಗೂ ಆರೋಪಿ 16 ವರ್ಷದ ಬಾಲಕ ಗುರುಗ್ರಾಮದ ರ್‍ಯಾನ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾಗಿದ್ದರು.
ಇದಕ್ಕಿಂತ ಹಿಂದೆ ಬಾಲಾಪರಾಧಿ ನ್ಯಾಯ ಮಂಡಳಿ, ಆರೋಪಿ ವಿದ್ಯಾರ್ಥಿಯನ್ನು ಬಾಲಾಪರಾಧಿಯಂತೆ ಪರಿಗಣಿಸದೆ, ವಯಸ್ಕನಂತೆ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ಹೇಳಿತ್ತು.
ಆರೋಪಿ ಕಳೆದ ಐದು ವರ್ಷಗಳಿಂದ ಬಂಧನದಲ್ಲಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್(Supreme Court) ಜಾಮೀನು ನೀಡಿದೆ.
7 ವರ್ಷದ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್‌ನ ಮೃತದೇಹ ಗುರುಗಾಂವ್‌ನ ರ್ಯಾನ್ ಇಂಟರ್‌ನ್ಯಾಷನಲ್ ಶಾಲೆಯ ವಾಷ್‌ರೂಮ್‌ನ ಹೊರಗೆ ಕತ್ತು ಸೀಳಲಾದ ಸ್ಥಿತಿಯಲ್ಲಿ 2017 ಸೆಪ್ಟಂಬರ್ 8ರಂದು ಪತ್ತೆಯಾಗಿತ್ತು. ಗುರುಗ್ರಾಮ ಪೊಲೀಸರು ಕೂಡಲೇ ಬಸ್ ನಿರ್ವಾಹಕನನ್ನು ಬಂಧಿಸಿದ್ದರು. ಆದರೆ, ತಿಂಗಳ ಬಳಿಕ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಸಿಬಿಐ 11ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಿತ್ತು. ಅನಂತರ ಪ್ರದ್ಯುಮ್ನ ಠಾಕೂರ್‌ನನ್ನು ಹತ್ಯೆಗೈಯ್ದಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಅದು ಹೇಳಿತ್ತು.