ಪೆರೋಲ್‌ನಲ್ಲಿದ್ದರೂ ಧಾರ್ಮಿಕ ಸಭೆ ನಡೆಸಿದ ದೇರಾ ಮುಖ್ಯಸ್ಥ,ಬಿಜೆಪಿ ನಾಯಕರೂ ಭಾಗಿ
ಹೊಸದಿಲ್ಲಿ,ಅ.20: ಪೆರೋಲ್‌ನಲ್ಲಿ ಜೈಲಿನಿಂದ ಹೊರಗಿರುವ ದೇರಾ ಸಚ್ಚಾ ಸೌದಾ(Dera Sacha Sauda) ದ ಮುಖ್ಯಸ್ಥ ಗುರ್ಮೀತ್ ರಾಮ ರಹೀಂ ಸಿಂಗ್ (Gurmeet Ram Rahim Singh)ಬುಧವಾರ ವರ್ಚುವಲ್ ಸತ್ಸಂಗ ಅಥವಾ ಧಾರ್ಮಿಕ ಸಭೆಯನ್ನು ನಡೆಸಿದ್ದು,ಹಲವಾರು ಬಿಜೆಪಿ ನಾಯಕರು ಭಾಗಿಯಾಗಿದ್ದರು.
ಕೊಲೆ ಮತ್ತು ಅತ್ಯಾಚಾರಕ್ಕಾಗಿ ಜೈಲುಶಿಕ್ಷೆಯನ್ನು ಅನುಭವಿಸುತ್ತಿರುವ ಗುರ್ಮೀತ್‌ಗೆ 40 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ. ನ.3ರಂದು ಆದಮಪುರ ಉಪಚುನಾವಣೆ ಮತ್ತು ನ.12ರಂದು ಹರ್ಯಾಣಾ ಪಂಚಾಯತ್ ಚುನಾವಣೆಗಳು ನಡೆಯಲಿರುವ ಸಂದರ್ಭದಲ್ಲೇ ಗುರ್ಮೀತ್‌ಗೆ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ ತಾತ್ಕಾಲಿಕ ಬಿಡುಗಡೆ ದೊರಕಿದೆ.
ಕರ್ನಾಲ್ ನಗರದ ಮೇಯರ್ ರೇಣುಬಾಲಾ ಗುಪ್ತಾ,ಹಿರಿಯ ಉಪ ಮೇಯರ್ ರಾಜೇಶ ಅಗ್ಗಿ(Rajesh Aggie) ಮತ್ತು ಉಪಮೇಯರ್ ನವೀನ ಕುಮಾರ(Naveen Kumar) ಸಭೆಯಲ್ಲಿ ಪಾಲ್ಗೊಂಡಿದ್ದರು.
‘ನನ್ನ ವಾರ್ಡ್‌ನ ಅನೇಕ ನಿವಾಸಿಗಳು ಗುರ್ಮೀತ್ ಜೊತೆ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಸಂಪರ್ಕದಿಂದಾಗಿ ನಾವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು,ಇದಕ್ಕೆ ಮತ್ತು ಬಿಜೆಪಿಗೂ ಮುಂಬರುವ ಉಪ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಗ್ಗಿ ಹೇಳಿದರು.
ಈ ನಡುವೆ,ಗುರ್ಮೀತ್‌ಗೆ ಪೆರೋಲ್ ನೀಡಿದ್ದರಲ್ಲಿ ತನ್ನ ಪಾತ್ರವೇನೂ ಇಲ್ಲ ಮತ್ತು ಅದು ಜೈಲು ಇಲಾಖೆಯ ನಿರ್ಧಾರವಾಗಿದೆ ಎಂದು ಹೇಳಿದ ಹರ್ಯಾಣ ಗೃಹಸಚಿವ ಅನಿಲ್ ವಿಜ್ ಅವರು,ಕರ್ನಾಲ್‌ನ ಜನರು ಗುರ್ಮೀತ್ ಬಗ್ಗೆ ನಂಬಿಕೆ ಹೊಂದಿದ್ದರೆ ಮತ್ತು ನೋಡಲು ತೆರಳಿದ್ದರೆ ಅದಕ್ಕೂ ಆದಮಪುರ ಉಪಚುನಾವಣೆಗೂ ಏನು ಸಂಬಂಧವಿದೆ ಎಂದು ಪ್ರಶ್ನಿಸಿದರು.
ಇದು ಈ ವರ್ಷ ಗುರ್ಮೀತ್‌ಗೆ ನೀಡಲಾಗಿರುವ ಮೂರನೇ ಪೆರೋಲ್ ಆಗಿದೆ. ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಿಜೆಪಿ ನಾಯಕರನ್ನು ಪ್ರತಿಪಕ್ಷ ನಾಯಕರು ಟೀಕಿಸಿದ್ದಾರೆ.
ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿಗೆ ಕೊಲೆಗಡುಕರು ಮತ್ತು ಅತ್ಯಾಚಾರಿಗಳ ಆಶೀರ್ವಾದಗಳ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್ ವಕ್ತಾರರಾದ ಶಮಾ ಮುಹಮ್ಮದ್,ಪ್ರಧಾನಿ ಮೋದಿ ಇದನ್ನು ಒಪ್ಪುತ್ತಾರೆಯೇ? ಇದು ಬೇಟಿ ಬಚಾವೊ ಬೇಟಿ ಪಢಾವೊ ಅಭಿಯಾನದ ಸತ್ಯವಾಗಿದೆ ಎಂದರು.
ಬಿಜಪಿ ರಾಜಕೀಯ ಲಾಭಕ್ಕಾಗಿ ಗುರ್ಮೀತ್‌ನನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಉದಿತ ರಾಜ್,ಅವರು (ಬಿಜೆಪಿ) ಕಾನೂನನ್ನು ಲೆಕ್ಕಿಸುವುದಿಲ್ಲ ಮತ್ತು ಎಲ್ಲ ಕಾನೂನುಗಳನ್ನು ಚಾಪೆಯಡಿ ತೂರಲಾಗಿದೆ ಎಂದರು.
ಅಕ್ಟೋಬರ್‌ನಲ್ಲಿ ಹರ್ಯಾಣದ ಪಂಚಕುಲಾದಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ದೇರಾ ಪಂಥದ ಮಾಜಿ ಮ್ಯಾನೇಜರ್ ಹತ್ಯೆಗಾಗಿ ಗುರ್ಮೀತ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಅಲ್ಲದೆ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಗುರ್ಮೀತ್‌ಗೆ ಪ್ರತ್ಯೇಕ 20 ವರ್ಷಗಳ ಜೈಲುಶಿಕ್ಷೆಯನ್ನೂ ವಿಧಿಸಲಾಗಿದೆ.