ರಾಮ ಇಂದು ರಾಜನಾಗಿದ್ದರೆ, ಹಿಂದೂಗಳನ್ನಷ್ಟೇ ಅಲ್ಲ, ಎಲ್ಲಾ ಧರ್ಮದವರನ್ನು ನೋಡಿಕೊಳ್ಳುತ್ತಿದ್ದ: ನ್ಯಾಯಮೂರ್ತಿ ಕಟ್ಜು
ಹೊಸದಿಲ್ಲಿ: Indicanews.com ಎಂಬ ವೆಬ್ ಮಾಧ್ಯಮದಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಜಸ್ಟೀಸ್ ಮಾರ್ಕಂಡೇಯ ಕಟ್ಜು ಅವರು ಭಾರತದಲ್ಲಿ 'ಜೈ ಶ್ರೀ ರಾಮ್' ಎಂದು ಹೇಳಲು ಅಲ್ಪಸಂಖ್ಯಾತರನ್ನು ಒತ್ತಾಯಿಸುವ ಬಲಪಂಥೀಯ ಗುಂಪುಗಳು ಮತ್ತು ಜನರನ್ನು ಕಟುವಾಗಿ ಟೀಕಿಸಿದ್ದಾರೆ.
ಬುಧವಾರ ವೆಬ್‌ಸೈಟ್‌ನಲ್ಲಿ ಪ್ರಕಟವಾದ “Lord Ram treated all citizens as his children”(ಲಾರ್ಡ್ ರಾಮ್ ಎಲ್ಲ ನಾಗರಿಕರನ್ನು ತನ್ನ ಮಕ್ಕಳಂತೆ ನೋಡಿಕೊಂಡಿದ್ದಾನೆ)” ಎಂಬ ಶೀರ್ಷಿಕೆಯ ಲೇಖನದಲ್ಲಿ, ಅಲ್ಪಸಂಖ್ಯಾತರನ್ನು ಜೈ ಶ್ರೀರಾಮ್ ಎಂದು ಹೇಳಲು ಒತ್ತಾಯಿಸುವವರನ್ನು “ಮತಾಂಧರು” ಎಂದು ಕರೆದಿದ್ದಾರೆ.
"ಕೆಲವು ಧರ್ಮಾಂಧರು ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು 'ಜೈ ಶ್ರೀ ರಾಮ್' ಎಂದು ಹೇಳಲು ಬಲವಂತ ಪಡಿಸುತ್ತಾರೆ. ಆದರೆ ಅಂತಹವರಿಗೆ ರಾಮನ ಬಗ್ಗೆ ನಿಜವಾಗಿಯೂ ತಿಳಿದಿದೆಯೇ?” ಎಂದು ಜಸ್ಟೀಸ್ ಕಟ್ಜು ಲೇಖನದಲ್ಲಿ ಪ್ರಶ್ನಿಸಿದ್ದಾರೆ.
"ರಾಮನು ಇಂದು ಭಾರತದ ರಾಜನಾಗಿದ್ದರೆ, ಅವನು ಹಿಂದೂಗಳನ್ನು ಮಾತ್ರವಲ್ಲದೆ ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಇತರರ ಬಗ್ಗೆ ಕಾಳಜಿ ವಹಿಸುತ್ತಿದ್ದನು ಹಾಗೂ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಅಥವಾ ದೌರ್ಜನ್ಯ ಎಸಗುವವರನ್ನು ಕಠಿಣವಾಗಿ ಶಿಕ್ಷಿಸುತ್ತಿದ್ದನು." ನ್ಯಾಯಮೂರ್ತಿ ಕಟ್ಜು ಅವರ ಲೇಖನದಲ್ಲಿ ಹೇಳಿದ್ದಾರೆ.
"ಇತ್ತೀಚೆಗೆ, ಕೆಲವು ಧರ್ಮಾಂಧರು ಆಗಾಗ್ಗೆ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು 'ಜೈ ಶ್ರೀ ರಾಮ್' ಎಂದು ಹೇಳಲು ಒತ್ತಾಯಿಸಿ, ಥಳಿಸಿದ್ದಾರೆ. ಈ ಜನರು ರಾಮ ಮಾನಹಾನಿ ಮಾಡಿದ್ದಾರೆ, ರಾಮ ಅವರ ಕಾರ್ಯಗಳನ್ನು ಎಂದಿಗೂ ಅನುಮೋದಿಸುತ್ತಿರಲಿಲ್ಲ, ಬದಲಾಗೊ ಅವರನ್ನು ಶಿಕ್ಷಿಸುತ್ತಿದ್ದ” ಎಂದು ಕಟ್ಜು ಬರೆದಿದ್ದಾರೆ.
"ದೌರ್ಭಾಗ್ಯವೆಂದರೆ ಈ ಭಗವಾನ್ ರಾಮನ ಹೆಚ್ಚಿನ ಭಕ್ತರು ವಾಲ್ಮೀಕಿಯ ಮೂಲ ರಾಮಾಯಣವನ್ನು ಓದಿಲ್ಲ ಮತ್ತು ಅವರಿಗೆ ರಾಮನ ಶ್ರೇಷ್ಠ ಗುಣಗಳ ಬಗ್ಗೆ ಚೂರೂ ತಿಳಿದಿಲ್ಲ." ಎಂದು ಅವರು ಬರೆದಿದ್ದಾರೆ.
“ದಬ್ಬಾಳಿಕೆಯಿಂದ ದೂರವಿರುವ ರಾಮನು ಜನರಿಗೆ ತಂದೆಯಂತೆ ಇದ್ದನು. ಒಳ್ಳೆಯ ತಂದೆ ತನ್ನ ಎಲ್ಲಾ ಮಕ್ಕಳನ್ನು ನೋಡಿಕೊಳ್ಳುತ್ತಾನೆ. ಅವನು ಸೆಲೆಕ್ಟಿವ್ ಅಲ್ಲ. ಇತರರನ್ನು ದಬ್ಬಾಳಿಕೆ ಮಾಡುವಾಗ ಅವನು ಸುಮ್ಮನೆ ನೋಡಿ ಕೂರುವುದಿಲ್ಲ.” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.