ತಾಜ್‌ಮಹಲ್ ಕೊಠಡಿಗಳ ಪರಿಶೀಲನೆಗೆ ಆಗ್ರಹಿಸಿ ಸಲ್ಲಿಸಿದ ಪಿಐಎಲ್ ಸುಪ್ರೀಂ ಕೋರ್ಟ್ ನಿಂದ ತಿರಸ್ಕೃತ

Update: 2022-10-21 15:02 GMT
Photo: PTI

ಹೊಸದಿಲ್ಲಿ, ಅ. 21: ಹಿಂದೂ ಮೂರ್ತಿಗಳು ಅಥವಾ ಧರ್ಮಗ್ರಂಥಗಳು ಇವೆಯೇ ಎಂಬುದನ್ನು ಪರಿಶೀಲಿಸಲು ತಾಜ್‌ಮಹಲ್‌ನ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಅಯೋಧ್ಯೆಯಲ್ಲಿರುವ ಬಿಜೆಪಿಯ  ಮಾಧ್ಯಮ ಡೆಸ್ಕ್ ನ ಉಸ್ತುವಾರಿ ರಜನೀಶ್ ಸಿಂಗ್ ಅವರು ಈ ದೂರು ಸಲ್ಲಿಸಿದ್ದರು. ಅಲಹಬಾದ್ ಉಚ್ಚ ನ್ಯಾಯಾಲಯ ಮೇ 12ರಂದು ಈ ಮನವಿಯನ್ನು ತಿರಸ್ಕರಿಸಿದ ಬಳಿಕ  ಅವರು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು.

‘‘ಅರ್ಜಿಯನ್ನು ತಿರಸ್ಕರಿಸಿರುವುದರಲ್ಲಿ ಉಚ್ಚ ನ್ಯಾಯಾಲಯ ತಪ್ಪೆಸಗಿಲ್ಲ. ಇದು ಪ್ರಚಾರ ಬಯಸುವ ಅರ್ಜಿಯಾಗಿದೆ’’ ಎಂದು ಎಂ.ಆರ್. ಶಾ ಹಾಗೂ ಎಂ.ಎಂ. ಸುಂದರೇಶ್ ಅವರನ್ನು ಒಳಗೊಂಡ ಪೀಠ ಹೇಳಿದೆ.

ತಾಜ್ ಮಹಲ್ ಹಿಂದೂಗಳು ಆರಾಧಿಸುವ ಶಿವನ ಹಳೆಯ ದೇವಾಲಯ ಎಂದು ಹಲವು ಹಿಂದುತ್ವವಾದಿ ಸಂಘಟನೆಗಳು ಪ್ರತಿಪಾದಿಸಿವೆ. ಅದು  ತೇಜೋ ಮಹಾಲಯ ಎಂದು ಜನಪ್ರಿಯ ಎಂದು ಸಿಂಗ್ ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ಈ ಸಿದ್ಧಾಂತವನ್ನು ಹಲವು ಇತಿಹಾಸಕೂರರು ಕೂಡ ಬೆಂಬಲಿಸುತ್ತಾರೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು.

ಶಾಜಹಾನ್ ಅವರ ಪತ್ನಿ ಮುಮ್ತಾಝ್ ಮಹಲ್ ಹೆಸರನ್ನು ತಾಜ್‌ಮಹಲ್‌ಗೆ ಇರಿಸಲಾಗಿತ್ತು ಎಂದು ಅರ್ಜಿ ಹೇಳಿತ್ತು. ಆದರೂ ಹಲವು ಪುಸ್ತಕಗಳಲ್ಲಿ ಶಾಜಹಾನ್‌ಅವರ ಪತ್ನಿ ಹೆಸರು ಮುಮ್ತಾಝ್ ಮಹಲ್ ಬದಲು ಮುಮ್ತಾಝ್ ಉಲ್ ಝಮಾನಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಈ ಮಹಲಿನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು 22 ವರ್ಷ ಬೇಕಾಯಿತು ಎಂಬುದು  ಸತ್ಯಕ್ಕೆ ದೂರವಾದದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾಜ್‌ಮಹಲ್ ಇರುವ ಸ್ಥಳದಲ್ಲಿ ರಾಜ ಪ್ರಮಾರ್ದಿ ದೇವ್ ತೇಜೋ ಮಹಾಲಯ ದೇವಾಲಯವನ್ನು ಕ್ರಿ.ಶ. 1212ರಲ್ಲಿ ನಿರ್ಮಿಸಿದ್ದ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ಈ ದೇವಾಲಯ ಹಲವು ಆಡಳಿತಗಾರರಿಗೆ ಹಸ್ತಾಂತರವಾಯಿತು. 1632ರಲ್ಲಿ ಶಾಜಹಾನ್ ಈ ದೇವಾಲಯವನ್ನು ರಾಜ ಜೈ ಸಿಂಗ್‌ನಿಂದ  ವಶಪಡಿಸಿಕೊಂಡ ಹಾಗೂ ಅದನ್ನು ತನ್ನ ಪತ್ನಿಯ ಸ್ಮಾರಕವಾಗಿ  ಪರಿವರ್ತಿಸಿದ ಎಂದು ಸಿಂಗ್ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News