ನ.14ರಂದು ಉಡುಪಿ ಜಿಲ್ಲಾ ಸಹಕಾರಿಗಳಿಂದ ಡಾ.ಎಂಎನ್‌ಆರ್‌ಗೆ ಅಭಿನಂದನೆ
ಉಡುಪಿ, ಅ.21: ಈ ಬಾರಿಯ ಉಡುಪಿ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹ ಮುಂದಿನ ನ.14ರಿಂದ 20ರವರೆಗೆ ಜಿಲ್ಲೆಯಲ್ಲಿ ನಡೆಯಲಿದ್ದು, ಉಚ್ಚಿಲದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಜಿಲ್ಲೆಯ ಎಲ್ಲಾ ಸಹಕಾರಿಗಳ ಪರವಾಗಿ ಬೃಹತ್ ಅಭಿನಂದನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಡಯಾನ ಹೊಟೇಲ್ ಸಭಾಂಗಣದಲ್ಲಿ ಇಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಇವರಿಗೆ ಅಭಿನಂದನಾ ಸಮಾರಂಭದ ಆಯೋಜನೆ ಹಾಗೂ ಉಡುಪಿ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕರ್ನಾಟಕ ರಾಜ್ಯ ಸಹಕಾರಮಾರಾಟ ಮಹಾ ಮಂಡಲದ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾಗಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಇವರಿಗೆ ಉಡುಪಿ ಜಿಲ್ಲೆಯ ಸಮಸ್ತ ಸಹಕಾರಿಗಳ ವತಿಯಿಂದ ಅಭಿನಂದನ ಕಾರ್ಯಕ್ರಮ ವನ್ನು ಜಿಲ್ಲಾ ಮಟ್ಟದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಜಿಲ್ಲಾ ಮಟ್ಟದ ಕಾರ್ಯಕ್ರಮದ ವೇಳೆ ಆಯೋಜಿಸಲಾಗುವುದು ಎಂದರು.
ರಾಜೇಂದ್ರ ಕುಮಾರ್ ಸನ್ಮಾನವನ್ನು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಆಯೋಜಿಸಲಾಗುವುದು. ಇದರಲ್ಲಿ ಸಹಕಾರಿಗಳಿಂದ ಉಡುಪಿ ಹಾಗೂ ವಿವಿದೆಡೆಗಳಿಂದ ಉಚ್ಚಿಲದವರೆಗೆ ಬೈಕ್ ರ್ಯಾಲಿಯನ್ನು ಆಯೋಜಿಸಲಾಗು ವುದು. ಅಲ್ಲದೇ ಆಕರ್ಷಕ ಮೆರವಣಿಗೆಯನ್ನು ಸಹ ಆಯೋಜಿಸಲು ಉದ್ದೇಶಿಸಲಾಗಿದೆ, ಎಲ್ಲಿಂದ ಎಂಬುದನ್ನು ಮುಂದೆ ನಿರ್ಧರಿಸಲಾಗುವುದು ಎಂದರು.
ನ.14ರಂದು ಜಿಲ್ಲೆಯ ಸಮಸ್ತ ಸಹಕಾರಿಗಳುದೊಡ್ಡ ಸಂಖ್ಯೆಯಲ್ಲಿ ಉಚ್ಚಿಲದಲ್ಲಿ ಸಮಾಗಮಗೊಳ್ಳುವಂತೆ ಮನವಿ ಮಾಡಿದ ಅವರು, ಅಂದು ಸಹಕಾರಿಗಳ ಬಲವನ್ನು ತೋರಿಸಬೇಕು. ಇದಕ್ಕಾಗಿ ಸಹಕಾರಿ ಸಂಸ್ಥೆಗಳಿಗೆ ಅರ್ಧ ದಿನದ ರಜೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.
ಈ ಬಾರಿಯ ಜಿಲ್ಲಾ ಮಟ್ಟದ ಸಹಕಾರಿ ಸಪ್ತಾಹ ನ.14ರಿಂದ 20ರವರೆಗೆ ನಡೆಯಲಿದೆ. ಉಚ್ಚಿಲದಲ್ಲಿ ಸಪ್ತಾಹದ ಉದ್ಘಾಟನೆ ನಡೆಯಲಿದೆ. 15ರಂದು ಉಡುಪಿಯಲ್ಲಿ, 16ರಂದು ಕಾರ್ಕಳದಲ್ಲಿ, 17ರಂದು ಪಡುಬಿದ್ರಿಯಲ್ಲಿ ಸಪ್ತಾಹವು ನಡೆಯಲಿದೆ. 18ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಯಾಗಿದ್ದು, ಉಡುಪಿ ಜಿಲ್ಲೆಯ ಸಹಕಾರಿಗಳೂ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ನ.19ರಂದು ನಡೆಯುವ ಸಪ್ತಾಹವನ್ನು ಕೆಎಂಎಫ್ ಆಯೋಜಿಸಲಿದೆ. ನ.20ರಂದು ಸಪ್ತಾಹದ ಸಮಾರೋಪ ಸಮಾರಂಭ ಕುಂದಾಪುರ ತಾಲೂಕಿನ ಕಂಬದಕೋಣೆಯಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆಎಂಎಫ್ ಮಣಿಪಾಲದ ನಿರ್ದೇಶಕ ಕೆ.ರವಿರಾಜ್ ಹೆಗ್ಡೆ ಕೊಡವೂರು, ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್. ಅವರು ಕಾರ್ಯಕ್ರಮಗಳ ಆಯೋಜನೆ ಕುರಿತು ಸಲಹೆಗಳನ್ನು ನೀಡಿದರು.
ಜಿಲ್ಲೆಯ ಸಹಕಾರಿ ಪ್ರಮುಖರಾದ ಯಶ್ಪಾಲ್ ಸುವರ್ಣ, ರಾಜೇಶ್‌ರಾವ್ ಪಾಂಗಾಳ, ಅಶೋಕ್‌ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಅಶೋಕ್‌ಕುಮಾರ್ ಬಲ್ಲಾಳ್, ಕಟಪಾಡಿ ಶಂಕರ ಪೂಜಾರಿ, ಕೆ.ಕೊರಗ ಪೂಜಾರಿ, ಹರೀಶ್ ಶೆಟ್ಟಿ, ಹರೀಶ್ ಕಿಣಿ, ಸುರೇಶ್ ರಾವ್, ಮನೋಜ್ ಕರ್ಕೇರಾ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಶಾಖೆಯ ಪ್ರಬಾರ ಉಪನಿರ್ದೇಶಕ ಗಣೇಶ ಮಯ್ಯ ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಬಿ.ಬಿ. ಸ್ವಾಗತಿಸಿದರೆ, ಪ್ರಾಸ್ತಾವಿಕ ವಾಗಿ ಮಾತನಾಡಿದ ಯೂನಿಯನ್ ನಿರ್ದೇಶಕ ಶ್ರೀಧರ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.