ಸೋದೆ ಮಠದ ಶ್ರೀಗಳಿಂದ ಮಟ್ಟುಗುಳ್ಳ ಕೃಷಿಗೆ ಚಾಲನೆ
ಉಡುಪಿ, ಅ.21: ಉಡುಪಿಯ ಶ್ರೀಸೋದೆ ವಾದಿರಾಜ ಮಠದ ಗುರುಪರಂಪರೆಯ ಗುರುಶ್ರೇಷ್ಠರೆನಿಸಿದ ಶ್ರೀವಾದಿರಾಜರಿಂದ ಪಡೆದ ಗುಳ್ಳದ ಬೀಜದಿಂದ ಹುಟ್ಟಿಕೊಂಡಿದೆ ಎಂಬ ಪ್ರತೀತಿ ಇರುವ ಮಟ್ಟುಗುಳ್ಳದ ಬೆಳೆಯನ್ನು ಉತ್ತೇಜಿಸುವ ನಿಟ್ಟಿಸುವ ಸೋದೆ ಶ್ರೀವಾದಿರಾಜ ಮಠದ ಯತಿಗಳಾದ ಶ್ರೀವಿಶ್ವವಲ್ಲಭ ತೀರ್ಥರು ಶ್ರೀಮಠದ ವತಿಯಿಂದ ಮಟ್ಟುಗುಳ್ಳ ಕೃಷಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ವತಃ ತಾವೇ ಈಗಲೂ ಬೆಳೆ ಬೆಳೆಯುವ ಮಟ್ಟು ಗ್ರಾಮಕ್ಕೆ ಆಗಮಿಸಿದ ಸೋದೆಶ್ರೀಗಳು, ಮಟ್ಟು ಗ್ರಾಮದ ನಾಗಪಾತ್ರಿಗಳಾದ ಲಕ್ಷ್ಮಣ ರಾಯರ ಗದ್ದೆಯಲ್ಲಿ ಮಟ್ಟು ಗುಳ್ಳದ ಸಸಿಯನ್ನು ನೆಟ್ಟು 2022ನೇ ಸಾಲಿನ ಗುಳ್ಳದ ಬೆಳೆಗೆ ಚಾಲನೆ ನೀಡಿದರು.
ಸೋದೆ ಶ್ರೀವಾದಿರಾಜ ಮಠದ ಗುರುಪರಂಪರೆಯಲ್ಲಿ ಕ್ರಾಂತಿಕಾರರೆನಿಸಿದ ಭಾವಿಸಮೀರ ಶ್ರೀವಾದಿರಾಜ ಗುರು ಸಾರ್ವಭೌಮರು 500 ವರ್ಷಗಳ ಹಿಂದೆ ಉಡುಪಿ ಸಮೀಪದ ಮಟ್ಟು ಗ್ರಾಮದ ಬ್ರಾಹ್ಮಣರಿಗೆ ಶ್ರೀಹಯಗ್ರೀವ ದೇವರ ಪ್ರೇರಣೆಯಿಂದ ಗುಳ್ಳದ ಬೀಜವನ್ನು ಕೊಟ್ಟು ಅವರ ಉದ್ದಾರಕ್ಕೆ ಕಾರಣೀಕರ್ತರಾಗಿ ಮಟ್ಟು ಗುಳ್ಳವನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ ಎಂಬ ಪ್ರತೀತಿ ಇದೆ.
ಔಷಧೀಯ ಗುಣವುಳ್ಳ ಈ ಮಟ್ಟು ಗುಳ್ಳವನ್ನು ಮಟ್ಟು ಗ್ರಾಮದ ಅನೇಕ ಕೃಷಿಕರು ಇಂದಿಗೂ ಬೆಳೆಸಿ ಉಳಿಸಿಕೊಂಡು ಬಂದಿದ್ದಾರೆ. ಇದೀಗ ಸ್ವಾಮೀಜಿ, ಮಠದ ವತಿಯಿಂದ ಮಟ್ಟುಗುಳ್ಳ ಬೆಳೆಯುವ ಯೋಜನೆ ಹಾಕಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಪಾದರೊಂದಿಗೆ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ, ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿಗಳಾದ ರತ್ನಕುಮಾರ್, ಮಟ್ಟು ಗುಳ್ಳ ಬೆಳೆಗಾರರ ಸಂಘದ ಪದಾಧಿಕಾರಿಗಳು, ಮಟ್ಟು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.