ಎಟಿಎಸ್ ಅಧಿಕಾರಿಗಳು ಮನೆಯ ಕೊಠಡಿಗೆ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿದ್ದರು: ತೀಸ್ತಾ ಸೆಟಲ್ವಾಡ್

Update: 2022-10-21 15:51 GMT

ಹೊಸದಿಲ್ಲಿ,ಅ.21: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್(Teesta Setalvad) ಅವರು ಈ ವರ್ಷದ ಜೂ.25ರಂದು ತನ್ನನ್ನು ತನ್ನ ಮುಂಬೈ ನಿವಾಸದಿಂದ ಬಂಧಿಸಿದ್ದ ಗುಜರಾತ್ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಅಹ್ಮದಾಬಾದ್ಗೆ ಕರೆದೊಯ್ಯುವ ಮುನ್ನ ಸಾಂತಾಕ್ರೂಝ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ತಾನು ದೂರಿನಲ್ಲಿ ಅಧಿಕಾರಿಗಳಿಂದ ಹಿಂಸಾಚಾರವನ್ನು ಆರೋಪಿಸಿದ್ದಾರೆ. ಬಂಧನಕ್ಕೆ ಮುನ್ನ ತನಗೆ ಬಂದಿದ್ದ ಕುತೂಹಲಕಾರಿ ದೂರವಾಣಿ ಕರೆಗಳನ್ನೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

2002ರ ಗುಜರಾತ್ ಗಲಭೆಗಳ ಸಂದರ್ಭ ಹತ್ಯೆಯಾಗಿದ್ದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ(Ehsan Jaffrey) ಅವರ ಪತ್ನಿ ಝಕಿಯಾ ಜಾಫ್ರಿ(Zakia Jaffrey)ಯವರು ಹೈಕೋರ್ಟ್ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದ ಮರುದಿನವೇ ಸೆಟಲ್ವಾಡ್ ರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಝಕಿಯಾರಿಗೆ ಸೆಟಲ್ವಾಡ್ ನೆರವಾಗಿದ್ದರು.

ಹಿರಿಯ ಪೊಲೀಸ್ ತನಿಖಾಧಿಕಾರಿ ಬಾಳಾಸಾಹೇಬ ತಾಂಬೆಯವರಿಗೆ ಸಲ್ಲಿಸಿದ್ದ ದೂರಿನಲ್ಲಿ ಸೆಟಲ್ವಾಡ್ ತನ್ನ ಬಂಧನಕ್ಕೆ ಮೊದಲಿನ ಕುತೂಹಲಕರ ಘಟನೆಗಳ ವಿವರಗಳನ್ನು ನೀಡಿದ್ದಾರೆ.

ಸೆಟಲ್ವಾಡ್ ತನ್ನ ದೂರಿನ ಪ್ರತಿಯನ್ನು ಈಗ ವರದಿಗಾರರೊಂದಿಗೆ ಹಂಚಿಕೊಂಡಿದ್ದಾರೆ. ಜೂನ್ 25ರಂದು ಅಪರಾಹ್ನ ಒಂದು ಗಂಟೆಯ ಸುಮಾರಿಗೆ ತನ್ನ ಕಚೇರಿಗೆ ನೊಯ್ಡಾದ ಸಿಐಎಸ್ಎಫ್ನಿಂದ ದೂರವಾಣಿ ಕರೆ ಬಂದಿದ್ದು,ತನ್ನ ಸಹೋದ್ಯೋಗಿ ಅದನ್ನು ಸ್ವೀಕರಿಸಿದ್ದರು. ತನ್ನ ಭದ್ರತೆಯಲ್ಲಿ ಎಷ್ಟು ಜನರು ತೊಡಗಿಕೊಂಡಿದ್ದಾರೆ ಮತ್ತು ಅವರು ಯಾರು ಎಂದು ಕರೆಯನ್ನು ಮಾಡಿದ್ದ ವ್ಯಕ್ತಿ ಪ್ರಶ್ನಿಸಿದ್ದ. ತನ್ನನ್ನೇ ನೇರವಾಗಿ ಸಂಪರ್ಕಿಸುವಂತೆ ಸಹೋದ್ಯೋಗಿ ತಿಳಿಸಿದಾಗ ಆ ವ್ಯಕ್ತಿ ತಾನು ‘ಸರ್’ಗೆ ಕೇಳುವುದಾಗಿ ಹೇಳಿದ್ದ ಎಂದು ಸೆಟಲ್ವಾಡ್ ದೂರಿನಲ್ಲಿ ತಿಳಿಸಿದ್ದಾರೆ.

ಶಂಕಾಸ್ಪದ ಕರೆಯ ಅರ್ಧ ಗಂಟೆಯ ಬಳಿಕ ಸಮೀಪದ ಬಿಜೆಪಿ ಸಂಸದ ನಾರಾಯಣ ರಾಣೆಯವರ ಬಂಗಲೆಯಿಂದ ಇಬ್ಬರು ಸಿಐಎಸ್ಎಫ್ ಭದ್ರತಾ ಅಧಿಕಾರಿಗಳು ತನ್ನ ನಿವಾಸದ ಪ್ರವೇಶದ್ವಾರದ ಬಳಿ ಬಂದು ತನ್ನ ಭದ್ರತಾ ಸಿಬ್ಬಂದಿಗಳ ಕುರಿತು ಆಕ್ರಮಣಕಾರಿಯಾಗಿ ಪ್ರಶ್ನಿಸಿದ್ದರು. ಅವರ ಭೇಟಿಯ ಕೆಲವೇ ಕ್ಷಣಗಳಲ್ಲಿ ಗುಜರಾತ ಎಟಿಎಸ್ನ 8-10 ಸಿಬ್ಬಂದಿಗಳು ತನ್ನ ಮನೆಯ ಕಂಪೌಂಡಿನಲ್ಲಿ ನುಗ್ಗಿದ್ದರು ಎಂದು ಸೆಟ್ಲವಾಡ್ ದೂರಿನಲ್ಲಿ ವಿವರಿಸಿದ್ದಾರೆ.

ತನ್ನ ವಕೀಲರು ಬರುವವರೆಗೆ ವಾರಂಟ್ ಅಥವಾ ಎಫ್ಐಆರ್ನ್ನು ತನಗೆ ತೋರಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ತನ್ನ ದೂರಿನಲ್ಲಿ ಎಟಿಎಸ್ ಅಹ್ಮದಾಬಾದ್ ನ ಇನ್ಸ್ಪೆಕ್ಟರ್ ಜೆ.ಎಂ.ಪಟೇಲ್ ಹಾಗೂ ಹಳದಿ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದ ಮಹಿಳಾ ಅಧಿಕಾರಿಯನ್ನು ಉಲ್ಲೇಖಿಸಿರುವ ಸೆಟ್ಲವಾಡ್,ಅವರೊಂದಿಗೆ ತೆರಳುವ ಮುನ್ನ ತನ್ನ ವಕೀಲರೊಂದಿಗೆ ಮಾತನಾಡಬೇಕು ಎಂದು ತಾನು ಹೇಳಿದಾಗ ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತನ್ನ ತೋಳಿಗೆ ತರಚಿದ ಗಾಯವಾಗಿತ್ತು ಎಂದು ಆರೋಪಿಸಿದ್ದಾರೆ.

ಗುಜರಾತ್ ಸರಕಾರ ಮತ್ತು ಪೊಲೀಸರ ದ್ವೇಷವನ್ನು ಪರಿಗಣಿಸಿದರೆ ತನ್ನ ಜೀವದ ಬಗ್ಗೆ ತನಗೆ ಗಂಭೀರ ಹೆದರಿಕೆಯಿದೆ ಎಂದು ಸೆಟಲ್ವಾಡ್ ದೂರಿನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಅ.12ರಂದು ದಿ ವೈರ್ ನ ಕರಣ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಸೆಟಲ್ವಾಡ್ ತನ್ನ ಬಂಧನದ ಅನುಭವಗಳನ್ನು ವಿವರಿಸಿದ್ದರು. ತನ್ನ ಬಂಧನಕ್ಕೆ ಕಾರಣಗಳನ್ನು ನೀಡಲು ಆರಂಭದಲ್ಲಿ ನಿರಾಕರಿಸಿದ್ದ ಎಟಿಎಸ್ ಅಧಿಕಾರಿಗಳು ಸಾಂತಾಕ್ರೂಝ್ ಠಾಣೆಗೆ ಕರೆದೊಯ್ದು ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ಬಿಟ್ಟು ಕಳುಹಿಸುವುದಾಗಿ ತನ್ನ ದಾರಿ ತಪ್ಪಿಸಿದ್ದರು ಎಂದು ಆರೋಪಿಸಿದ್ದರು.

ಸೆಟಲ್ವಾಡ್ ಕೊನೆಗೂ ಈ ವರ್ಷದ ಸೆ.2ರಂದು ಜಾಮೀನು ಲಭಿಸುವವರೆಗೆ ಗುಜರಾತಿನ ಮಹಿಳಾ ಜೈಲಿನಲ್ಲಿ 63 ದಿನಗಳ ಕಾಲ ಬಂಧನದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News