×
Ad

ಪ್ರಜಾಪ್ರಭುತ್ವ ವಿಶ್ವದ ಉತ್ತಮ ಆಡಳಿತ ವ್ಯವಸ್ಥೆ: ಕೆ.ಜಯಪ್ರಕಾಶ್ ಹೆಗ್ಡೆ

Update: 2022-10-21 21:41 IST

ಉಡುಪಿ, ಅ.21: ಪ್ರಜಾಪ್ರಭುತ್ವ ವ್ಯವಸ್ಥೆಯು ವಿಶ್ವದಲ್ಲಿ ಉತ್ತಮ ಆಡಳಿತ ವ್ಯವಸ್ಥೆಯಾಗಿದೆ. ಕಾನೂನನ್ನು ಜನತೆಗಾಗಿ ರೂಪಿಸಿದ್ದು, ಕಾನೂನಿನಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳು ವುದು ನೈಜ ಆಡಳಿತದ ಲಕ್ಷಣ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವಕೇಂದ್ರ ಹಾಗೂ ಪೂರ್ಣಪ್ರಜ್ಞ ಕಾಲೇಜುಗಳ  ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಯುವ ಉತ್ಸವ: ಯುವ ಸಂವಾದ-ಇಂಡಿಯಾ  ಎಟ್ 2047 ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿ ದರು.

ಮತದಾನ ಮಾಡುವುದು ಮಾತ್ರ ಜನಸಾಮಾನ್ಯರ ಹಕ್ಕಲ್ಲ. ಜನಪ್ರತಿನಿಧಿಗಳು ಸರಿಯಾಗಿ ತಮ್ಮ ಕೆಲಸ ನಿರ್ವಹಿಸದೇ ಇದ್ದಲ್ಲಿ ಪ್ರಶ್ನೆ ಮಾಡುವುದು ಕೂಡ ತಮ್ಮ ಹಕ್ಕು ಎಂದು ಸಾರ್ವಜನಿಕರು ತಿಳಿದಿರಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳಿಗಲ್ಲದೇ ಪ್ರತಿಯೊಬ್ಬ ಪ್ರಜೆಗೂ ಕೂಡ ಸಮಾಜದ ಜವಾಬ್ದಾರಿ ಗಳಿರುತ್ತವೆ. ದೇಶ ಹಾಗೂ ದೇಶದ ಸ್ವತ್ತು ಬಳಸುವ ಹಾಗೂ ಕಾಪಾಡುವ ಹೊಣೆ ನಮ್ಮದೇ ಆಗಿರುತ್ತದೆ. ಸಂವಿಧಾನ ನೀಡಿರುವ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದು,  ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಇಂದಿನ ಯುವಜನತೆಯೇ ಮುಂದಿನ ಆಡಳಿತಗಾರರು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜದ ಕುರಿತು ತಮ್ಮ ಕುಟುಂಬದ ಕುರಿತು ಕಾಳಜಿ ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಸುಲಭವಾಗಿ ಸಿಗುವ ಪ್ರತಿಯೊಂದು ವಸ್ತು, ಅವಕಾಶಗಳು ಬೇಗನೇ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ವಿದ್ಯಾರ್ಥಿಗಳು ತಮ್ಮೊಳಗೆ ತಾವೇ ಒತ್ತಡಗಳನ್ನು ಸೃಷ್ಟಿಸಿಕೊಳ್ಳದೇ ತಾಳ್ಮೆಯಿಂದ ತಮ್ಮ ಭವಿಷ್ಯದತ್ತ ಗಮನ ಹರಿಸಬೇಕು. ತಂತ್ರಜ್ಞಾನ ಅಭಿವೃದ್ಧಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಯೊಂದನ್ನು ಅತ್ಯಂತ ವೇಗವಾಗಿ ತಲುಪಿಸುತ್ತಿವೆ. ಆದರೆ ಅದೇ ತಂತ್ರಜ್ಞಾನದ ನಕಾರಾತ್ಮಕ ಸುಳಿಯಲ್ಲಿ ಯುವ ಪೀಳಿಗೆ ಸಿಲುಕಿ ಬಳಲುತ್ತಿರುವುದು ವಿಷಾಧನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ವಿದ್ಯಾರ್ಥಿಗಳೊಂದಿಗೆ ಜಿಲ್ಲೆಯ ಅಭಿವೃದ್ಧಿ, ರಕ್ಷಣಾ ವಿಧಾನದ ಕುರಿತು ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ, ಪೂರ್ಣಪ್ರಜ್ಞಾ ಕಾಲೇಜಿನ ನಿರ್ವಹಣಾ ಸಮಿತಿಯ ಖಜಾಂಜಿ ಪ್ರಶಾಂತ್ ಹೊಳ್ಳ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಎ, ಡಾ.ಗಣನಾಥ ಎಕ್ಕಾರು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿ ಸೋಜಾ ಸ್ವಾಗತಿಸಿ, ವಂದಿಸಿದರೆ, ಆದರ್ಶ ಪೆರ್ಡೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News