ಕೇದಾರನಾಥದಲ್ಲಿ ಬೃಹತ್ ರೋಪ್‌ವೇ ಯೋಜನೆಗೆ ಪ್ರಧಾನಿ ಮೋದಿಯಿಂದ ಶಿಲಾನ್ಯಾಸ
ಡೆಹ್ರಾಡೂನ್,ಅ.21: ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಶುಕ್ರವಾರ ಉತ್ತರಾಖಂಡ(Uttarakhand)ದ ರುದ್ರಪ್ರಯಾಗ ಜಿಲ್ಲೆಯಲ್ಲಿನ ಕೇದಾರನಾಥ ಮಂದಿರಕ್ಕೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಗೌರಿಕುಂಡ-ಕೇದಾರನಾಥ ರೋಪ್ವೇ(Gaurikunda-Kedarnath Ropeway) ಅಥವಾ ಕೇಬಲ್ ಕಾರ್ (Cable car)ಯೋಜನೆಗೆ ಶಿಲಾನ್ಯಾಸವನ್ನು ನೆರವೇರಿಸಿದರು.
ನಂತರ ಬದರೀನಾಥ ಮಂದಿರಕ್ಕೂ ಪ್ರಧಾನಿ ಭೇಟಿ ನೀಡಿದರು.
ರಾಜ್ಯಕ್ಕೆ ತನ್ನ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಮೋದಿ,ಹಾಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಿದ್ದಾರೆ ಮತ್ತು ಕೆಲವು ನೂತನ ಯೋಜನೆಗಳಿಗೆ ಶಿಲಾನ್ಯಾಸಗಳನ್ನು ನೆರವೇರಿಸಲಿದ್ದಾರೆ.
ಬೆಳಿಗ್ಗೆ ಭಾರತೀಯ ವಾಯುಪಡೆಯ ವಿಮಾನದಲ್ಲಿ ಡೆಹ್ರಾಡೂನ್ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರನ್ನು ರಾಜ್ಯಪಾಲ ಲೆ.ಜ.ಗುರ್ಮಿತ್ ಸಿಂಗ್,ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಮತ್ತು ಕೇಂದ್ರಸಚಿವ ಅಜಯ್ ಭಟ್ ಅವರು ಸ್ವಾಗತಿಸಿದರು.
ನೂತನವಾಗಿ ನಿರ್ಮಾಣಗೊಳ್ಳಲಿರುವ 9.7 ಕಿ.ಮೀ.ಉದ್ದದ ಗೌರಿಕುಂಡ-ಕೇದಾರನಾಥ್ ರೋಪ್ವೇ ಮೂಲಕ ಭಕ್ತರು 30 ನಿಮಿಷಗಳಲ್ಲಿ ಗೌರಿಕುಂಡದಿಂದ ಕೇದಾರನಾಥ ಮಂದಿರವನ್ನು ತಲುಪಲು ಸಾಧ್ಯವಾಗಲಿದೆ.
ಆದಿಗುರು ಶಂಕರಾಚಾರ್ಯರ ಸಮಾಧಿ ಸ್ಥಳಕ್ಕೂ ಭೇಟಿ ನೀಡಿದ ಪ್ರಧಾನಿ ಅಲ್ಲಿ ಕೆಲವು ಸಮಯ ಕಳೆದರು.
ಬದರೀನಾಥ ಧಾಮದಲ್ಲಿ ಅವರು ನದಿತಟದಲ್ಲಿಯ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳ ಪ್ರಗತಿಯನ್ನು ಪುನರ್ಪರಿಶೀಲಿಸಿದರು.
ಅಪರಾಹ್ನ ಕೇದಾರನಾಥ ಮತ್ತು ಬದರೀನಾಥ ಮಂದಿರಗಳ ನಡುವೆ 3,400 ಕೋ.ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರೋಪ್ವೇ ಮತ್ತು ರಸ್ತೆ ನಿರ್ಮಾಣ ಯೋಜನೆಗಳಿಗೂ ಪ್ರಧಾನಿ ಶಿಲಾನ್ಯಾಸಗಳನ್ನು ನೆರವೇರಿಸಿದರು. ಮಾನಾ ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಅರಿವಲ್ ಪ್ಲಾಝಾ ಮತ್ತು ಪ್ರದೇಶದಲ್ಲಿಯ ಸರೋವರಗಳ ಸುಂದರೀಕರಣ ಯೋಜನೆಯ ಪ್ರಗತಿ ಪರಿಶೀಲನೆಯನ್ನೂ ನಡೆಸಿದರು.
ಇದು ಪ್ರಧಾನಿಯಾಗಿ ಕೇದಾರನಾಥಕ್ಕೆ ಆರನೇ ಭೇಟಿ ಮತ್ತು ಬದರೀನಾಥಕ್ಕೆ ಎರಡನೇ ಭೇಟಿಯಾಗಿದೆ.