ಕಳವು ಪ್ರಕರಣದ ಬಂಧಿತ ಆರೋಪಿ ಪರಾರಿ: ಪ್ರಕರಣ ದಾಖಲು
ಕುಂದಾಪುರ: ತಾಲೂಕಿನ ಬೀಜಾಡಿ ರಾ.ಹೆದ್ದಾರಿ ಬಳಿಯ ಮೊಬೈಲ್ ಅಂಗಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ನಗರ ಠಾಣೆ ಪೊಲೀಸರಿಂದ ಬಂಧಿಸಲಾಗಿದ್ದ ಆರೋಪಿ ಮೊಹಮ್ಮದ್ ರಾಹೀಕ್ (22) ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಪೊಲೀಸರನ್ನು ತಳ್ಳಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಠಾಣೆ ಹೆಡ್ ಕಾನ್‌ಸ್ಟೇಬಲ್ ಮಂಜುನಾಥ ಎಚ್. ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ: ಕುಂದಾಪುರ ನಗರ ಠಾಣೆ ವ್ಯಾಪ್ತಿಗೊಳಪಡುವ ಬೀಜಾಡಿಯ ಮೊಬೈಲ್ ಅಂಗಡಿ ಕಳವು ಪ್ರಕರಣವೊಂದರ ತನಿಖೆ ನಡೆಸಿದ ಪೊಲೀಸರ ತಂಡ ಆರೋಪಿ ಮೊಹಮ್ಮದ್ ರಾಹೀಕ್‌ರನ್ನು ಅ.19ರಂದು ಬಂಧಿಸಿದ್ದು, ಅ.20ರಂದು ಆತನನ್ನು ಕುಂದಾಪುರದ ಎ.ಸಿ.ಜೆ ಮತ್ತು ಜೆ.ಎಂ.ಎಪ್.ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಹೆಡ್‌ಕಾನ್‌ಸ್ಟೇಬಲ್ ಮಂಜುನಾಥ್ ಹಾಗೂ ಸಿಬ್ಬಂದಿ ಬಸನಗೌಡ ಅವರು ಆರೋಪಿಯನ್ನು ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವಂತೆ ಆದೇಶಿಸಿದ್ದರು.
ಅದರಂತೆ ಪೊಲೀಸರಿಬ್ಬರು ಆರೋಪಿಯ ಜೊತೆಗೆ ಕುಂದಾಪುರದಿಂದ ಹೊರಟು ಗುರುವಾರ ರಾತ್ರಿ 8.25ಕ್ಕೆ ಹಿರಿಯಡ್ಕ ಅಂಜಾರು ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗೃಹದ ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ ಆರೋಪಿಯನ್ನು ಇಳಿಸುತ್ತಿದ್ದಂತೆ ಅರೋಪಿ ರಾಹೀಕ್, ಮಂಜುನಾಥ್ ಹಾಗೂ ಬಸನಗೌಡ ಅವರನ್ನು ತಳ್ಳಿ, ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಹೋಗಿ ತಲೆಮರೆಸಿಕೊಂಡಿದ್ದಾನೆ.
ಈ ಬಗ್ಗೆ ಹಿರಿಯಡಕ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಆರೋಪಿ ಮೊಹಮ್ಮದ್ ರಾಹೀಕ್‌ನ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.