ರೋಗಿಗೆ ಪ್ಲೇಟ್‌ಲೆಟ್‌ಗಳ ಬದಲು ಮುಸಂಬಿ ಜ್ಯೂಸ್ ನೀಡಿದ ಉತ್ತರಪ್ರದೇಶದ ಆಸ್ಪತ್ರೆಗೆ ಸರಕಾರದಿಂದ ಬೀಗಮುದ್ರೆ
ಲಕ್ನೋ, ಅ. 21: ಡೆಂಗಿ ರೋಗಿಗೆ ಪ್ಲೇಟ್‌ಲೆಟ್‌ಗಳನ್ನು ನೀಡುವ ಬದಲು ಮುಸಂಬಿ ಜ್ಯೂಸ್ ನೀಡಿದ ಆರೋಪಕ್ಕೆ ಸಂಬಂಧಿಸಿ ಪ್ರಯಾಗ್‌ರಾಜ್ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಉತ್ತರಪ್ರದೇಶ ಸರಕಾರ ಗುರುವಾರ ಬೀಗ ಮುದ್ರೆ ಹಾಕಿದೆ.
ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಆದೇಶದಂತೆ ಪ್ರಯಾಗ್‌ರಾಜ್‌ನ ಝಲ್ವಾ ಪ್ರದೇಶದಲ್ಲಿರುವ ದಿ ಗ್ಲೋಬಲ್ ಆಸ್ಪತ್ರೆಗೆ ಬೀಗ ಮುದ್ರೆ ಹಾಕಲಾಗಿದೆ. ಅಲ್ಲದೆ, ಪ್ಲೇಟ್‌ಲೆಟ್ ಪ್ಯಾಕೇಟ್‌ಗಳನ್ನು ತನಿಖೆಗೆ ರವಾನಿಸಲಾಗಿದೆ. ಅಪರಾಧ ಸಾಬೀತಾದರೆ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಆದೇಶ ಹೇಳಿದೆ.
ಡೆಂಗಿ ಸೋಂಕಿತನಾಗಿದ್ದ ಪ್ರದೀಪ್ ಪಾಂಡೆ ಅವರನ್ನು ಅಕ್ಟೋಬರ್ 17ರಂದು ಈ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪ್ಲೇಟ್‌ಲೆಟ್‌ಗಳನ್ನು ಬೇರೆ ಆಸ್ಪತ್ರೆಯಿಂದ ತರಲಾಗಿತ್ತು. ರೋಗಿಗೆ ಮೂರು ಯೂನಿಟ್ ಪ್ಲೆಟಲೆಟ್‌ಗಳನ್ನು ನೀಡಿದ ಬಳಿಕ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಆಸ್ಪತ್ರೆಯ ಮಾಲಕ ಸೌರಭ್ ಮಿಶ್ರಾ ಅವರು ತಿಳಿಸಿದ್ದಾರೆ.
ಪಾಂಡೆಯ ಪ್ಲೆಟಲೆಟ್‌ಗಳ ಸಂಖ್ಯೆ 17,000ಕ್ಕೆ ಇಳಿದ ಬಳಿಕ ಬಳಿಕ ಪ್ಲೇಟ್‌ಲೆಟ್ ಗಳನ್ನು ಒದಗಿಸುವಂತೆ ಸಂಬಂಧಿಕರು ವಿನಂತಿಸಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ‘‘ಅವರು ಎಸ್‌ಆರ್‌ಎನ್ ಆಸ್ಪತ್ರೆಯಿಂದ 5 ಯೂನಿಟ್ ಪ್ಲೇಟ್‌ಲೆಟ್‌ಗಳನ್ನು ತಂದಿದ್ದರು’’ ಎಂದು ಅವರು ತಿಳಿಸಿದ್ದಾರೆ. ‘‘ಮೂರು ಯೂನಿಟ್ ವರ್ಗಾವಣೆ ಮಾಡಿದ ಬಳಿಕ, ರೋಗಿಯ ಮೇಲೆ ದುಷ್ಪರಿಣಾಮ ಉಂಟಾಯಿತು. ಆದುದರಿಂದ ನಾವು ಅದನ್ನು ನಿಲ್ಲಿಸಿದೆವು’’ ಎಂದು ಅವರು ಹೇಳಿದ್ದಾರೆ.
ಪಾಂಡೆ ಅವರನ್ನು ಅನಂತರ ಇನ್ನೊಂದು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರ ಆರೋಗ್ಯ ತೀವ್ರ ಹದಗೆಟ್ಟು ಮೃತಪಟ್ಟರು. ಅಕ್ಟೋಬರ್ 19ರಂದು ವ್ಯಕ್ತಿಯೋರ್ವ ಎಸ್‌ಆರ್‌ಎನ್ ಆಸ್ಪತ್ರೆಯ ಪ್ಯಾಕೆಟ್ ತೋರಿಸುತ್ತಿರುವ ಹಾಗೂ ಇದು ಪ್ಲಾಸ್ಮಾ ಬದಲು ಮುಸಂಬಿ ಜ್ಯೂಸ್ ಅನ್ನು ಒಳಗೊಂಡಿದೆ ಎಂದು ಹೇಳುತ್ತಿರುವ ವೀಡಿಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ಈ ಘಟನೆಯ ತನಿಖೆ ನಡೆಸಲು ತಂಡವನ್ನು ರೂಪಿಸಲಾಗಿದೆ ಹಾಗೂ ಕೆಲವು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಐಜಿ ರಾಕೇಶ್ ಸಿಂಗ್ ಅವರು ಹೇಳಿದ್ದಾರೆ. ‘‘ಕೆಲವು ದಿನಗಳ ಹಿಂದೆ ನಕಲಿ ಬ್ಲಡ್ ಬ್ಯಾಂಕ್ ಅನ್ನು ಬೇಧಿಸಲಾಗಿತ್ತು’’ ಎಂದು ಅವರು ಹೇಳಿದ್ದಾರೆ. ‘‘ಮುಸಂಬಿ ಜ್ಯೂಸ್ ಅನ್ನು ಪೂರೈಸಲಾಗಿದೆಯೇ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟಗೊಳ್ಳಬೇಕಿದೆ’’ ಎಂದು ಅವರು ತಿಳಿಸಿದ್ದಾರೆ.