ಕಳೆದ 5 ವರ್ಷಗಳಲ್ಲಿ ಶೂಟೌಟ್‍ಗಳಲ್ಲಿ 166 ಅಪರಾಧಿಗಳ ಸಾವು: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್

Update: 2022-10-22 09:20 GMT

ಲಕ್ನೋ: ಕಳೆದ ಐದು ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ (Uttar Pradesh) ಶೂಟೌಟ್‍ಗಳಲ್ಲಿ (Police shootouts) 166 ಅಪರಾಧಿಗಳನ್ನು ಸಾಯಿಸಲಾಗಿದೆ ಹಾಗೂ 4,453 ಮಂದಿಗೆ ಗಾಯಗಳುಂಟಾಗಿವೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ (Adityanath) ಹೇಳಿದ್ದಾರೆ.

ತಮ್ಮ ಸರಕಾರ ಅಪರಾಧಕ್ಕೆ ತೋರುವ ಶೂನ್ಯ ಸಹಿಷ್ಣುತೆಯ ಪರಿಣಾಮ ಇದು ಎಂದು ಹೇಳಿರುವ ಆದಿತ್ಯನಾಥ್, ರಾಜ್ಯದಲ್ಲಿ ಯಾವುದೇ ಅಪರಾಧಿ ಸ್ವಚ್ಛಂದವಾಗಿಲ್ಲ, ಅವರು ಒಂದೋ ಜೈಲಿನಲ್ಲಿದ್ದಾರೆ ಇಲ್ಲವೇ ಸಾಯಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಕ್ನೋದಲ್ಲಿ ಶುಕ್ರವಾರ ಪೊಲೀಸ್ ಹುತಾತ್ಮ  ದಿನದ ಸಂದರ್ಭ ಮಾತನಾಡಿದ ಅವರು ಕಳೆದ ಐದು ವರ್ಷಗಳಲ್ಲಿ ಕರ್ತವ್ಯದ ವೇಳೆ 13 ಪೊಲೀಸ್ ಸಿಬ್ಬಂದಿ ಮೃತರಾಗಿದ್ದರೆ ಒಂದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದರು.

"ಕರ್ತವ್ಯದ ವೇಳೆ ಹುತಾತ್ಮರಾದ ಎಲ್ಲಾ ಪೊಲೀಸ್ ಸಿಬ್ಬಂದಿಗಳ ಕುಟುಂಬಗಳ ಅಗತ್ಯತೆಗಳಿಗೆ ಸರಕಾರ ಸ್ಪಂದಿಸುತ್ತದೆ,'' ಎಂದು ಅವರು ಹೇಳಿದ್ದಾರೆ.

2017 ರಿಂದೀಚೆಗೆ ಉತ್ತರ ಪ್ರದೇಶದಲ್ಲಿ ಪೊಲೀಸರು ಮತ್ತು ಶಂಕಿತ ಆರೋಪಿಗಳ ನಡುವೆ ನೂರಾರು ಗುಂಡಿನ ಚಕಮಕಿಗಳು ನಡೆದಿವೆ. ಬಂಧನ ಅಗತ್ಯವಿರುವಾಗ ತಾವು ಆತ್ಮರಕ್ಷಣೆಗಾಗಿ ಮಾತ್ರ ಗುಂಡು ಹಾರಿಸುತ್ತೇವೆ ಎಂದು ಪೊಲೀಸರು ಹೇಳುತ್ತಾರಾದರೂ ಹೆಚ್ಚಿನ ಶೂಟೌಟ್‍ಗಳು ಪೂರ್ವನಿಯೋಜಿತ ಹಾಗೂ ಮುಖ್ಯಮಂತ್ರಿಯ ಅನುಮೋದನೆ ಮೇರೆಗೆ ನಡೆಯುತ್ತವೆ ಎಂಬುದು ಟೀಕಾಕಾರರ ಆರೋಪ.

ಪೊಲೀಸ್ ಕೇಸ್ ಡೈರಿಗಳ ಪ್ರಕಾರ ಆರೋಪಿಗಳು ಪೊಲೀಸರನ್ನು ಸಾಯಿಸಲು ಗುಂಡು ಹಾರಿಸಿದಾಗ ಅಥವಾ ಪರಾರಿಯಾಗಲು ಯತ್ನಿಸಿದಾಗ ಶೂಟೌಟ್‍ಗಳು ನಡೆಯುತ್ತವೆ.

ಜುಲೈ 2021 ರಲ್ಲಿ ಸುಮಾರು 87 ಮಂದಿ ಮಾಜಿ ಅಧಿಕಾರಿಗಳು ರಾಜ್ಯದ ಎನ್‍ಕೌಂಟರ್ ಅಭಿಯಾನವನ್ನು ಟೀಕಿಸಿ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದರು. ಮೇಲಾಗಿ ಇಂತಹ ಘಟನೆಗಳಲ್ಲಿ  ಸಾಯುವವರು ಹೆಚ್ಚಾಗಿ ಮುಸ್ಲಿಮರು, ದಲಿತರು ಮತ್ತು ಇತರ ಹಿಂದುಳಿದ ವರ್ಗಗಳವರು ಎಂದೂ ಅವರು ಆರೋಪಿಸಿದ್ದರು.

ರಾಜ್ಯದಲ್ಲಿ 2017 ಹಾಗೂ 2020 ನಡುವೆ ನಡೆದ ಪೊಲೀಸ್ ಎನ್‍ಕೌಂಟರ್ ಗಳಲ್ಲಿ ಮೃತಪಟ್ಟವರ ಪೈಕಿ ಶೇ 37ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ.

ಇದನ್ನೂ ಓದಿ: ತುಮಕೂರು : ವಿವಿಯ ಎಸ್ಸಿ- ಎಸ್ಟಿ ಹಾಸ್ಟೆಲ್ ನಲ್ಲಿ ಚಿಪ್ಪಿನಲ್ಲಿಯೇ ಊಟ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News