ತನ್ನ ಮೇಲೆ ಹೇರಲಾದ ರೂ. 1337.76 ಕೋಟಿ ದಂಡವು ಭಾರತೀಯ ಗ್ರಾಹಕರು ಹಾಗೂ ಉದ್ಯಮಗಳಿಗೆ ದೊಡ್ಡ ಹಿನ್ನಡೆ ಎಂದ ಗೂಗಲ್

Update: 2022-10-22 10:16 GMT

ಹೊಸದಿಲ್ಲಿ: ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ ತನ್ನ ಮೇಲೆ ಹೇರಿರುವ ರೂ 1,337.76 ಕೋಟಿ ದಂಡವು ಭಾರತದ "ಗ್ರಾಹಕರು ಹಾಗೂ ಉದ್ಯಮಗಳಿಗೆ ದೊಡ್ಡ ಹಿನ್ನಡೆ'' ಎಂದು ಗೂಗಲ್ (Google) ಹೇಳಿದೆ.

"ಸಿಸಿಐ ನಿರ್ಧಾರದಿಂದ ಭಾರತೀಯ ಗ್ರಾಹಕರು ಮತ್ತು ಉದ್ಯಮಗಳಿಗೆ ಹಿನ್ನಡೆಯಾಗಿದೆ, ಆಂಡ್ರಾಯ್ಡ್ ನ ಭದ್ರತಾ ವೈಶಿಷ್ಟ್ಯದ ಮೇಲೆ ನಂಬಿಕೆಯಿರಿಸಿರುವ ಭಾರತೀಯರನ್ನು ಗಂಭೀರ ಭದ್ರತಾ ಅಪಾಯಗಳಿಗೆ ಅದು ತೆರೆದೊಡ್ಡುತ್ತದೆ ಹಾಗೂ ಭಾರತೀಯರಿಗೆ ಮೊಬೈಲ್ ಸಾಧನಗಳ ವೆಚ್ಚ ಹೆಚ್ಚಾಗುವಂತೆ ಮಾಡುತ್ತದೆ,'' ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರಲ್ಲದೆ ಮುಂದಿನ ಕ್ರಮಗಳ ಕುರಿತು ಪರಿಶೀಲಿಸುವುದಾಗಿಯೂ ತಿಳಿಸಿದ್ದಾರೆ.

ಆಂಡ್ರಾಯ್ಡ್ ಮೊಬೈಲ್ ಸಾಧನ ಪರಿಸರವ್ಯವಸ್ಥೆಯಲ್ಲಿ ಹಲವು ಮಾರುಕಟ್ಟೆಗಳಲ್ಲಿ ತನಗಿರುವ ಪಾರಮ್ಯವನ್ನು ದುರ್ಬಳಕೆ ಮಾಡುತ್ತಿದೆ ಎಂದು ಹೇಳಿ ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ ಗುರುವಾರ ಗೂಗಲ್ ಮೇಲೆ ದಂಡ ವಿಧಿಸಿತ್ತು.

ಗೂಗಲ್‍ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಒಪ್ಪಂದಗಳ ಕುರಿತಂತೆ ಗ್ರಾಹಕರಿಂದ ದೂರುಗಳು ಬಂದ ನಂತರ ಸಂಸ್ಥೆಯು 2019 ರಲ್ಲಿ ಗೂಗಲ್ ವಿರುದ್ಧ ತನಿಖೆ ಆರಂಭಿಸಿತ್ತು.

ಸ್ಮಾರ್ಟ್‍ಫೋನ್‍ಗಳಲ್ಲಿ ಅಪ್ಲಿಕೇಶನ್ ಮತ್ತು ಪ್ರೋಗ್ರಾಂಗಳನ್ನು ಚಲಾಯಿಸುವ ಆಂಡ್ರಾಯ್ಡ್ ಅನ್ನು ಗೂಗಲ್ 2005 ರಲ್ಲಿ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು.

ಗೂಗಲ್ ಅಪ್ಲಿಕೇಶನ್‍ಗಳ ಒಂದು ಸಂಗ್ರಹವಾಗಿರುವ ಸಂಪೂರ್ಣ ಗೂಗಲ್ ಮೊಬೈಲ್ ಸೂಟ್ ಅನ್ನು ಪೂರ್ವಭಾವಿಯಾಗಿಯೇ ಸ್ಥಾಪನೆಗೊಳಿಸುವುದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್‍ಗಳಿಗೆ ಕಡ್ಡಾಯವಾಗಿದೆ ಹಾಗೂ ಈ ಗೂಗಲ್ ಮೊಬೈಲ್ ಸೂಟ್ ಅನ್ನು ಅಸ್ಥಾಪನೆಗೊಳಿಸುವ ಆಯ್ಕೆಯಿಲ್ಲವೆಂದು ತನಿಖೆಯಿಂದ ಕಂಡುಬಂದಿದೆ ಎಂದು ಕಾಂಪಿಟೀಶನ್ ಕಮಿಷನ್ ಹೇಳಿದೆ.

"ಅವರು ಪಾರಮ್ಯ ಹೊಂದಿದ್ದಾರೆಂಬ ಮಾತ್ರಕ್ಕೆ ಸಾಧನ ತಯಾರಕರ ಮೇಲೆ ಇಂತಹ ಅನ್ಯಾಯಯುತ ಷರತ್ತನ್ನು ಹೇರುವಂತಿಲ್ಲವಾಗಿರುವುದರಿಂದ ಗೂಗಲ್ ಕ್ರಮವು ಕಾಂಪಿಟೀಶನ್ ಕಾನೂನಿಗೆ ವಿರುದ್ಧವಾಗಿದೆ,'' ಎಂದು ಅದು ಹೇಳಿದೆ.

ಆಂಡ್ರಾಯ್ಡ್ ಸಾಧನಗಳಲ್ಲಿ ಸರ್ಚ್ ಆ್ಯಪ್‍ಗಳು, ವಿಜೆಟ್‍ಗಳು ಹಾಗೂ ಕ್ರೋಮ್ ಬ್ರೌಸರ್ ಕೂಡ ಪೂರ್ವಭಾವಿಯಾಗಿಯೇ ಸ್ಥಾಪನೆಯಾಗಿರುವುದರಿಂದ ತನ್ನ ಸ್ಪರ್ಧಿಗಳಿಗಿಂತ ಗೂಗಲ್ ಹೆಚ್ಚಿನ ಪ್ರಯೋಜನ ಪಡೆಯುತ್ತಿದೆ ಎಂದೂ ಕಾಂಪಿಟೀಶನ್ ಕಮಿಷನ್ ಹೇಳಿದೆ.

ಇದನ್ನೂ ಓದಿ:  ನವವಿವಾಹಿತ ವೈದ್ಯ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News