×
Ad

ನಿಮಗೆ ಬಿಜೆಪಿಯೊಂದಿಗೆ ಸಂಬಂಧವಿಲ್ಲದಿದ್ದರೆ, ನಿಮ್ಮ ಸಂಸದರನ್ನು ರಾಜ್ಯಸಭಾ ಉಪಸಭಾಪತಿ ಸ್ಥಾನ ತೊರೆಯುವಂತೆ ಸೂಚಿಸಿ

Update: 2022-10-22 18:21 IST
Photo: PTI

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ (Prashant Kishor), ಇದೀಗ ನಿತೀಶ್‌ ಅವರಿಗೆ ಒಂದು ಸವಾಲೆಸೆದಿದ್ದಾರೆ. ನಿತೀಶ್‌ ಅವರ ಪಕ್ಷವಾದ ಜೆಡಿ(ಯು)ವಿನಿಂದ ಆಯ್ಕೆಯಾದ ಸಂಸದರಾಗಿರುವ ಹರಿವಂಶ್‌ ನಾರಾಯಣ್‌ ಸಿಂಗ್‌ ಅವರಿಗೆ ರಾಜ್ಯಸಭಾ ಉಪಸಭಾಪತಿ ಸ್ಥಾನ ತೊರೆಯುವಂತೆ ಸೂಚಿಸಿ ಎಂದು ನಿತೀಶ್‌ ಅವರಿಗೆ ಪ್ರಶಾಂತ್‌ ಕಿಶೋರ್‌ ಸವಾಲೊಡ್ಡಿದ್ದಾರೆ.

"ನಿತೀಶ್‌ ಕುಮಾರ್‌ ಜೀ, ಬಿಜೆಪಿ/ಎನ್‌ಡಿಎ ಗೂ ನಿಮಗೂ ಯಾವುದೇ ಸಂಬಂಧವಿಲ್ಲವೆಂದಾದರೆ ನಿಮ್ಮ ಸಂಸದರನ್ನು ರಾಜ್ಯಸಭಾ ಉಪಸಭಾಪತಿ ಸ್ಥಾನ ತೊರೆಯುವಂತೆ ಸೂಚಿಸಿ, ಪ್ರತಿ ಬಾರಿಯೂ ಎರಡು ದಾರಿಗಳನ್ನು ಹೊಂದಲು ಸಾಧ್ಯವಿಲ್ಲ,ʼʼ ಎಂದು ಪ್ರಶಾಂತ್‌ ಕಿಶೋರ್‌ ಟ್ವೀಟ್‌ ಮಾಡಿದ್ದಾರೆ.

"ನನಗೆ ತಿಳಿದಿರುವ ಮಟ್ಟಿಗೆ ನಿತೀಶ್‌ ಅವರು ಮಹಾಮೈತ್ರಿ ಜೊತೆಗಿದ್ದರೂ ಬಿಜೆಪಿ ಜೊತೆಗೆ ಪೂರ್ಣ ನಂಟು ಕಡಿತಗೊಳಿಸಿಲ್ಲ. ಅದಕ್ಕೆ ದೊಡ್ಡ ಪುರಾವೆ ರಾಜ್ಯಸಭಾ ಉಪಸಭಾಪತಿ ಹರಿವಂಶ್‌, ಅವರು ಜೆಡಿಯು ಸಂಸದರಾಗಿದ್ದಾರೆ, ಅವರು ರಾಜೀನಾಮೆ ನೀಡಿಲ್ಲ, ಅವರ ಪಕ್ಷವೂ ಅವರಿಗೆ ಹಾಗೆ ಸೂಚಿಸಿಲ್ಲ ಅಥವಾ ಹುದ್ದೆ ತೊರೆಯದೇ ಇರುವುದಕ್ಕೆ ಕ್ರಮಕೈಗೊಂಡಿಲ್ಲ,ʼʼ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ನಿನ್ನೆ ಕೂಡ ನಿತೀಶ್‌ ಅವರನ್ನು ಟಾರ್ಗೆಟ್‌ ಮಾಡಿದ್ದ ಪ್ರಶಾಂತ್‌ ಕಿಶೋರ್‌, ಬಿಹಾರ ಸೀಎಂ ಆಗಿ ನಿತೀಶ್‌ 17 ವರ್ಷ ಆಳ್ವಿಕೆ ನಡೆಸಿದ್ದರೆ ಈ 17 ವರ್ಷಗಳಲ್ಲಿ 14 ವರ್ಷ ಅವರು ಬಿಜೆಪಿ ಬೆಂಬಲದೊಂದಿಗೆ ಆಡಳಿತ ನಡೆಸಿದ್ದರು ಎಂದು ನೆನಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News