ಹೊನ್ನಾವರದ ರಾಮ ಮಂಜರಿಗೆ ‘ಜನಪದ ವೈದ್ಯಸಿರಿ’ ಪ್ರಶಸ್ತಿ ಪ್ರದಾನ
ಉಡುಪಿ: ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದು ನಡೆದ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಸಂದರ್ಭದಲ್ಲಿ ಕಾಲೇಜಿನ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ನೀಡಲಾಗುವ ‘ಜನಪದ ವೈದ್ಯಸಿರಿ’ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಜನಪದ ವೈದ್ಯ ರಾಮ ಮಂಜ ಮರಾಠಿ ಅವರಿಗೆ ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿಯು 25,000 ರೂ. ನಗದು ಹಾಗೂ ಸನ್ಮಾನ ಪತ್ರವನ್ನೊಳ ಗೊಂಡಿದೆ.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರಾಮ ಮಂಜರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ ಕಾರ್ಣಿಕ್, ಮಾನವ ಪ್ರಕೃತಿ ಯೊಂದಿಗೆ ಜೀವನ ನಡೆಸಬೇಕು. ಇದಕ್ಕಾಗಿ ಆಯುರ್ವೇದ ಜೀವನ ಶೈಲಿಯು ಅತ್ಯಂತ ಪೂರಕವಾಗಿರುವುದು. ಆಯುರ್ವೇದದಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಮಾತನಾಡಿ, ಆಯುರ್ವೇದವೇ ಜೀವನದ ಸಂಸ್ಕೃತಿ ಮತ್ತು ಸಂಸ್ಕಾರವಾಗಿರ ಬೇಕು ಎಂದು ನುಡಿದರು.
‘ಹರ್ ದಿನ್ ಹರ್ ಘರ್ ಆಯುರ್ವೇದ’ ಎಂಬ ಧ್ಯೇಯ್ಯೋದ್ಧೇಶದೊಂದಿಗೆ ಒಂದು ತಿಂಗಳ ಕಾಲ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಸ್ಥೆಯು ಆಯೋಜಿಸಿದ್ದು, ಇದರ ವರದಿಯನ್ನು ಶರೀರ ಕ್ರಿಯ ವಿಭಾಗದ ಮುಖ್ಯಸ್ಥ ಡಾ. ಎಸ್. ಆರ್. ಮೊಹರೆರ್ ನೀಡಿದರು. ಕಾಲೇಜಿನ ಕಲಾ ಹಾಗೂ ಸಾಂಸ್ಕೃತಿಕ ವಿಭಾಗದ ವತಿಯಿಂದ ‘ನಿದಿರೆ’ ಶೀರ್ಷಿಕೆಯ ಆಯುರ್ವೇದದ ಹಾಡನ್ನು ಬಿಡುಗಡೆಗೊಳಿಸಲಾುತು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.ನಿರಂಜನ್ ರಾವ್ ಸ್ವಾಗತಿಸಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ವಂದಿಸಿದರು. ಎಸ್‌ಡಿಎಂ ಆಯುರ್ವೇದ ಔಷಧ ತಯಾರಿಕಾ ಘಟಕದ ಜಿಎಂ ಡಾ. ಮುರಳೀಧರ್ ಬಲ್ಲಾಳ್ ಉಪಸ್ಥಿತರಿದ್ದರು. ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಸದಸ್ಯೆ ಡಾ.ನಾಗರತ್ನ ಎಸ್.ಜೆ. ನಿರೂಪಿಸಿದರು.
ಕಾರ್ಯಕ್ರಮದ ನಂತರ 100 ಕ್ಕೂ ಅಧಿಕ ಆರೋಗ್ಯ ಆಸಕ್ತರಿಗೆ ಬದಲಾದ ಜೀವನ ಶೈಲಿಯಿಂದ ಉಂಟಾಗುವ ಖಾಯಿಲೆಗಳು ಹಾಗೂ ಅವುಗಳನ್ನು ಪ್ರತಿಬಂಧಿಸುವಲ್ಲಿ ಆಯುರ್ವೇದದ ಪಾತ್ರ ಎಂಬುವುದರ ಬಗ್ಗೆ ಮಾಹಿತಿಯನ್ನು ಕಾಲೇಜಿನ ವೈದ್ಯರುಗಳು ನೀಡಿದರು.