×
Ad

ಜಾಗತಿಕ ಹಸಿವು ಸೂಚ್ಯಂಕ ವರದಿಗೆ ಕೇಂದ್ರ ಸರಕಾರದ ವಿರೋಧ ಸಮರ್ಥನೀಯವೇ?

Update: 2022-10-23 11:35 IST

ಜಾಗತಿಕ ಹಸಿವು ಸೂಚ್ಯಂಕವನ್ನು ಸಿದ್ಧಪಡಿಸಲು ಬಳಸಲಾದ ವಿಧಾನವನ್ನು ತಿರಸ್ಕರಿಸಿ ಮಹಿಳಾ ಹಾಗೂ ಶಿಶು ಕಲ್ಯಾಣ ಸಚಿವಾಲಯದ ಹೇಳಿಕೆಗಳನ್ನು ‘ಫ್ಯಾಕ್ಟ್‌ಚೆಕರ್’ ಎಂಬ ಸುದ್ದಿಗಳ ಹಿಂದಿನ ವಾಸ್ತವತೆಯನ್ನು ಪರಿಶೋಧಿಸುವ ಜಾಲತಾಣ ಪರಿಶೀಲಿಸಿದೆ. ಇಲಾಖೆಯು ಮಂಡಿಸಿದ ಒಂದು ವಾದವು ತಪ್ಪುದಾರಿಗೆಳೆಯುವಂತಹದ್ದಾಗಿದ್ದರೆ, ಇನ್ನೊಂದು ವಾದಕ್ಕೆ ಹೆಚ್ಚುವರಿಯಾದ ಗ್ರಹಿಕೆಯನ್ನು ಮಂಡಿಸಬೇಕಾದ ಅಗತ್ಯವಿದೆಯೆಂದು ಅದು ಅಭಿಪ್ರಾಯಿಸಿದೆ.

2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದಲ್ಲಿ 121 ರಾಷ್ಟ್ರಗಳ ಪೈಕಿ ಭಾರತವು 107ನೇ ಸ್ಥಾನದಲ್ಲಿದೆ ಎಂಬ ಸುದ್ದಿಗೆ ಭಾರತ ಸರಕಾರವು ತ್ವರಿತವಾಗಿ ಅಕ್ಟೋಬರ್ 15ರಂದು ಪ್ರತಿಕ್ರಿಯಿಸಿತ್ತು. ಜಾಗತಿಕ ಹಸಿವು ಸೂಚ್ಯಂಕವನ್ನು ಸರಕಾರೇತರ ಐರಿಶ್ ಸಂಘಟನೆಯಾದ ‘ಕನ್ಸರ್ನ್ ವರ್ಲ್ಡ್‌ವೈಡ್’ ಹಾಗೂ ಜರ್ಮನಿ ಮೂಲದ ಅಭಿವೃದ್ಧಿಪರ ಹಾಗೂ ಮಾನವೀಯ ನೆರವಿನ ಲಾಭೋದ್ದೇಶರಹಿತ ಸಂಸ್ಥೆಯಾದ ‘ವೆಲ್ದುಗೆರ್ ಲೈಫ್’ ಬಿಡುಗಡೆಗೊಳಿಸಿತ್ತು.

 ಭಾರತದಲ್ಲಿ ಹಸಿವಿನ ಸಮಸ್ಯೆಯು ಗಂಭೀರ ಮಟ್ಟದಲ್ಲಿದೆಯೆಂದು ಹಸಿವು ಸೂಚ್ಯಂಕದ ಈ ನೂತನ ಆವೃತ್ತಿಯು, ತನ್ನ ವಾರ್ಷಿಕ ದೇಶವಾರು ಹಸಿವು ಸೂಚ್ಯಂಕ ರ್ಯಾಂಕಿಂಗ್ ವರದಿಯಲ್ಲಿ ಬಹಿರಂಗಪಡಿಸಿತ್ತು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯವು ಆ ದಿನ ಸಂಜೆಯೇ ಹೇಳಿಕೆಯೊಂದನ್ನು ನೀಡಿ ಈ ಸೂಚ್ಯಂಕವು ದೋಷಪೂರಿತವಾಗಿದೆ ಹಾಗೂ ಸೂಚ್ಯಂಕದ ರಚನೆಗೆ ಅನುಸರಿಸಲಾದ ವಿಧಾನಗಳು ಗಂಭೀರವಾದ ಲೋಪಗಳಿಂದ ಕೂಡಿವೆ. ಅಲ್ಲದೆ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಅಪೌಷ್ಟಿಕತೆಯ ಪ್ರಮಾಣವನ್ನು ಲೆಕ್ಕಹಾಕಲು ಬಳಸಲಾದ ದತ್ತಾಂಶ ಮಾದರಿಗಳನ್ನು ಅತ್ಯಂತ ಅಲ್ಪ ಪ್ರಮಾಣದಲ್ಲಿ ಸಂಗ್ರಹಿಸಲಾಗಿತ್ತು ಎಂದು ಸಚಿವಾಲಯವು ತಿಳಿಸಿದೆ. ಹಸಿವು ಸೂಚ್ಯಂಕದಲ್ಲಿ ಬಳಸಲಾದ ನಾಲ್ಕು ಸೂಚಕಗಳ ಪೈಕಿ ಮೂರು ಸೂಚಕಗಳು ಶಿಶು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆಯೇ ಹೊರತು ಇಡೀ ದೇಶದ ಇಡೀ ಜನಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲವೆಂದು ಅದು ಹೇಳಿದೆ.

2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕವನ್ನು ಸಿದ್ಧಪಡಿಸಲು ಬಳಸಲಾದ ವಿಧಾನವನ್ನು ತಿರಸ್ಕರಿಸಿ ಮಹಿಳಾ ಹಾಗೂ ಶಿಶು ಕಲ್ಯಾಣ ಸಚಿವಾಲಯದ ಈ ಎರಡು ಹೇಳಿಕೆಗಳನ್ನು ‘ಫ್ಯಾಕ್ಟ್‌ಚೆಕರ್’ ಎಂಬ ಸುದ್ದಿಗಳ ಹಿಂದಿನ ವಾಸ್ತವತೆಯನ್ನು ಪರಿಶೋಧಿಸುವ ಜಾಲತಾಣ ಪರಿಶೀಲಿಸಿತು. ಇಲಾಖೆಯು ಮಂಡಿಸಿದ ಒಂದು ವಾದವು ತಪ್ಪುದಾರಿಗೆಳೆಯುವಂತಹದ್ದಾಗಿದ್ದರೆ, ಇನ್ನೊಂದು ವಾದಕ್ಕೆ ಹೆಚ್ಚುವರಿಯಾದ ಗ್ರಹಿಕೆಯನ್ನು ಮಂಡಿಸಬೇಕಾದ ಅಗತ್ಯವಿದೆಯೆಂದು ಅದು ಅಭಿಪ್ರಾಯಿಸಿತು.

 ‘‘ಈ ವರದಿಯು ವಾಸ್ತವಿಕ ತಳಹದಿಯೊಂದಿಗೆ ನಂಟು ಕಳೆದುಕೊಂಡಿದೆ ಮಾತ್ರವಲ್ಲದೆ, ದೇಶದ ಜನತೆಗೆ ಆಹಾರ ಭದ್ರತೆಯನ್ನು ಅದರಲ್ಲೂ ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಖಾತರಿಪಡಿಸಲು ಸರಕಾರ ನಡೆಸಿದ ಪ್ರಯತ್ನಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದೆ’’ ಎಂದು ಮಹಿಳಾ ಹಾಗೂ ಶಿಶು ಕಲ್ಯಾಣ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಆಹಾರದ ಭದ್ರತೆಯು ಶೋಚನೀಯವಾಗಿತ್ತೆಂದು ಇತ್ತೀಚೆಗೆ ಸ್ವತಂತ್ರವಾಗಿ ನಡೆಸಲಾದ ವಿವಿಧ ಸಮೀಕ್ಷೆಗಳು ಬೆಟ್ಟು ಮಾಡಿತೋರಿಸಿವೆ.

ಒಟ್ಟಾರೆ ಜಾಗತಿಕ ಹಸಿವಿನ ಸೂಚ್ಯಂಕದ ಆಧಾರದಲ್ಲಿ ಪ್ರತಿಯೊಂದು ದೇಶದ ರ್ಯಾಂಕಿಂಗ್ ನಿರ್ಧರಿಸಲಾಗುತ್ತದೆ. ನಾಲ್ಕು ಪೌಷ್ಟಿಕತೆಯ ಸೂಚ್ಯಂಕಗಳನ್ನು ಸಂಯೋಜಿಸುವ ಮೂಲಕ ಈ ರ್ಯಾಂಕಿಂಗ್ ನೀಡಲಾಗುತ್ತಿದೆ.

ಅವ್ಯಾವೆಂದರೆ: ಪೋಷಣೆಯ ಕೊರತೆ (ಅಸಮರ್ಪಕ ಕ್ಯಾಲೊರಿ ಸೇವನೆಯಲ್ಲಿ ಜನಸಂಖ್ಯೆಯ ಪಾಲು)

ಬಾಲ್ಯಕಾಲದ ಬೆಳವಣಿಗೆ ಕುಂಠಿತ (ತಮ್ಮ ವಯಸ್ಸಿಗೆ ತಕ್ಕಂತಹ ಎತ್ತರವನ್ನು ಹೊಂದಿರದ ಐದು ವರ್ಷದೊಳಗಿನ ಮಕ್ಕಳ ಪ್ರಮಾಣ)

 ಬಾಲ್ಯಕಾಲದ ದೇಹತೂಕದ ಕೊರತೆ (ತಮ್ಮ ಎತ್ತರಕ್ಕೆ ಅನುಗುಣವಾದ ದೇಹತೂಕವನ್ನು ಹೊಂದಿರದ ಐದು ವರ್ಷ ವಯಸ್ಸಿನೊಳಗಿನ ಮಕ್ಕಳ ಪ್ರಮಾಣ)

ಬಾಲ್ಯಕಾಲದಲ್ಲಿ ಸಾವು (ಐದು ವರ್ಷಕ್ಕಿಂತ ಮೊದಲು ಸಾವನ್ನಪ್ಪುವ ಮಕ್ಕಳ ಪ್ರಮಾಣ)

ಅಪೌಷ್ಟಿಕತೆ ಹಾಗೂ ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಶಿಶು ಮರಣದರಗಳು ದೇಶದ ಒಟ್ಟು ಹಸಿವಿನ ಸೂಚ್ಯಂಕದ ಮೂರನೇ ಒಂದರಷ್ಟನ್ನು ಒಳಗೊಂಡಿದೆ. ಇದೇ ವೇಳೆ ಬಾಲ್ಯಕಾಲದ ಕುಬ್ಜತೆ ಹಾಗೂ ಕಡಿಮೆ ದೇಹತೂಕದಲ್ಲಿ ಭಾರತದ ಪಾಲು ಆರನೇ ಒಂದರಷ್ಟಿದೆ.

ಜಾಗತಿಕ ಹಸಿವು ಸೂಚ್ಯಂಕದ ವರದಿ ತಯಾರಿಗಾಗಿ ಭಾರತೀಯರ ಪೌಷ್ಟಿಕತೆಯ ಕುರಿತ ದತ್ತಾಂಶಗಳನ್ನು ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯಿಂದ, ಆಹಾರ ಭದ್ರತೆಯ ಸೂಚಕಗಳು, ದೇಹದ ಬೆಳವಣಿಗೆ ಕುಂಠಿತ ಹಾಗೂ ದೇಹತೂಕದ ಕೊರತೆ ಕುರಿತ ದತ್ತಾಂಶಗಳನ್ನು ನೂತನ ರಾಷ್ಟ್ರೀಯ ಕುಟುಂಬ ಹಾಗೂ ಆರೋಗ್ಯ ಸಮೀಕ್ಷೆ-5, 2019-21ರಿಂದ ಪಡೆಯಲಾಗಿತ್ತು. ಹಾಗೆಯೇ 2021ರಿಂದ ಭಾರತದಲ್ಲಿನ ಶಿಶು ಮರಣದ ದರವನ್ನು ವಿಶ್ವಸಂಸ್ಥೆಯ ಅಂದಾಜು ವರದಿಗಳಿಂದ ಪಡೆದುಕೊಳ್ಳಲಾಗಿತ್ತು.

ಜಾಗತಿಕ ಹಸಿವು ಸೂಚ್ಯಂಕವನ್ನು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಸೂಚಕಗಳನ್ನು (ಕಡಿಮೆ ದೇಹತೂಕ, ದೇಹದ ಬೆಳವಣಿಗೆ ಕುಂಠಿತ, ಮರಣ) ಆಧರಿಸಿ ಲೆಕ್ಕಹಾಕುವುದು ಅವೈಜ್ಞಾನಿಕ ಹಾಗೂ ಅತಾರ್ಕಿಕವಾದುದೆಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯವು ಅಸಮಾಧಾನ ವ್ಯಕ್ತಪಡಿಸಿದೆ.

ಹಸಿವಿನ ಹೊರತಾಗಿ ಕುಡಿಯುವ ನೀರಿನ ಲಭ್ಯತೆ ಹಾಗೂ ನೈರ್ಮಲ್ಯ, ವಂಶವಾಹಿ, ಪರಿಸರ ಇತ್ಯಾದಿ ಸಂಕೀರ್ಣವಾದ ಅಂಶಗಳನ್ನು ಕೂಡಾ ಮಕ್ಕಳ ಪೌಷ್ಟಿಕತೆಯ ಸೂಚಕಗಳಾಗಿ ವರದಿಯಲ್ಲಿ ಬಳಸಿಕೊಂಡಿರುವುದಕ್ಕೂ ಕೇಂದ್ರ ಸರಕಾರ ಅಸಮಾಧಾನ ವಕ್ತಪಡಿಸಿದೆ.

ಅಪೌಷ್ಟಿಕತೆಯ ಮೇಲೆ ಇತರ ಅಂಶಗಳೂ ಪರಿಣಾಮ ಬೀರುತ್ತವೆಯೆಂಬುದು ನಿಜ. ಹಾಗೆಂದು ಅಪೌಷ್ಟಿಕತೆಗೆ ಆಹಾರವು ಯಾವುದೇ ರೀತಿಯಲ್ಲಿ ಪಾತ್ರವಿಲ್ಲವೆಂದು ಭಾವಿಸಬಾರದು ಎಂದು ಹೊಸದಿಲ್ಲಿಯ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರೊಫೆಸರ್ ದೀಪಾ ಸಿನ್ಹಾ ಅಭಿಪ್ರಾಯಿಸಿದ್ದಾರೆ.

 ಕೇವಲ ಕ್ಯಾಲೊರಿ ಕೊರತೆ ಮಾತ್ರವಲ್ಲದೆ ಹಸಿವಿನ ಬಗ್ಗೆ ವಿಸ್ತೃತವಾದ ವ್ಯಾಖ್ಯಾನವನ್ನು ತಾನು ಒಳಗೊಂಡಿರುವುದಾಗಿ ಜಾಗತಿಕ ಹಸಿವು ಸೂಚ್ಯಂಕದ ವರದಿಯು ಸ್ಪಷ್ಟವಾಗಿ ತಿಳಿಸಿದೆ.

ಜಾಗತಿಕ ಹಸಿವು ಸೂಚ್ಯಂಕದ ವರದಿಯು ಪಥ್ಯಾಹಾರದ ಗುಣಮಟ್ಟ ಹಾಗೂ ಬಳಕೆ ಮತ್ತು ಪೌಷ್ಟಿಕತೆಯ ಕೊರತೆಯ ಅಂಶಗಳನ್ನು ಕೂಡಾ ಮಾನದಂಡವಾಗಿ ಪರಿಗಣಿಸಿದೆ. ಸೋಂಕು ರೋಗಗಳಿಗೆ ತುತ್ತಾಗಿ ಸಾವಿಗೀಡಾಗುವ ಹಲವಾರು ಮಕ್ಕಳಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ರೋಗ ನಿರೋಧಕ ಶಕ್ತಿದುರ್ಬಲವಾಗಿರುತ್ತದೆ. ಪಥ್ಯಾಹಾರದಲ್ಲಿನ ಶಕ್ತಿ, ವಿಟಮಿನ್‌ಗಳು ಹಾಗೂ ಖನಿಜಾಂಶಗಳ ಕೊರತೆಯಿಂದಾಗಿಯೂ ರೋಗನಿರೋಧಕ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ. ಹೀಗಾಗಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ಪ್ರಮಾಣವನ್ನು ಕೂಡಾ ಜಾಗತಿಕ ಹಸಿವು ಸೂಚ್ಯಂಕದ ವರದಿಯು ಪರಿಗಣನೆಗೆ ತೆಗೆದುಕೊಂಡಿದೆ.

ಅಲ್ಲದೆ ಭಾರತ ಸೇರಿದಂತೆ ಅಂತರ್‌ರಾಷ್ಟ್ರೀಯ ಸಮುದಾಯವು ಸುಸ್ಥಿರವಾದ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಸುಸ್ಥಿರ ಅಭಿವೃದ್ಧಿಯ ಬೆಳವಣಿಗೆಯನ್ನು ಸಾಧಿಸುವಲ್ಲಿ ಭಾರತದ ಈವರೆಗಿನ ಪ್ರಗತಿಯನ್ನು ಕೂಡಾ ಈ ಜಾಗತಿಕ ಹಸಿವು ಸೂಚ್ಯಂಕವು ಮಾಪನ ಮಾಡಿದೆ.

ದೇಹದ ಬೆಳವಣಿಗೆ ಕುಂಠಿತ ಹಾಗೂ ಕಡಿಮೆ ದೇಹತೂಕದ ಮಕ್ಕಳ ಪ್ರಮಾಣವನ್ನು ಆಧರಿಸಿ ಸುಸ್ಥಿರವಾದ ಅಭಿವೃದ್ಧಿಯ ಗುರಿಯನ್ನು ಸಾಧಿಸುವಲ್ಲಿ ಆಯಾದೇಶಗಳ ಪ್ರಗತಿಯನ್ನು ಅಳೆಯಲಾಗುತ್ತದೆ.

ಜಾಗತಿಕ ಹಸಿವು ಸೂಚ್ಯಂಕಕ್ಕೆ ಸಂಬಂಧಿಸಿ ತನ್ನ ಶೋಧನೆಗಳ ಬಗ್ಗೆ ಫ್ಯಾಕ್ಟ್‌ಚೆಕರ್ ಸಂಸ್ಥೆಯು ಪ್ರತಿಕ್ರಿಯೆಗಾಗಿ ಕೇಂದ್ರ ಸರಕಾರದ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಹಾಯಕ ಸಚಿವ ಡಾ. ಮಹೇಂದ್ರ ಮುಂಜಪಾರಾ ಅವರನ್ನು ಸಂಪರ್ಕಿಸಲು ಯತ್ನಿಸಿತ್ತು. ಆದರೆ ಈ ಲೇಖನ ಪ್ರಕಟವಾಗುವತನಕ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲವೆಂದು ತಿಳಿದುಬಂದಿದೆ.

ಕೃಪೆ:factchecker.in(ಫ್ಯಾಕ್ಟ್‌ಚೆಕರ್. ಇನ್ ವಿವಿಧ ವ್ಯಕ್ತಿಗಳು ಹಾಗೂ ಸಂಘಟನೆಗಳು ನೀಡುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಶೋಧಿಸುವ ಜಾಲತಾಣವಾಗಿದೆ.)

Writer - ದಿವ್ಯಾನಿ ದುಬೆ

contributor

Editor - ದಿವ್ಯಾನಿ ದುಬೆ

contributor

Similar News