ಸರ್ವಧರ್ಮ ಸಮಭಾವದ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಶಿವರಾಜ್
ಉಡುಪಿ, ಅ.23: ಶಾಲಾ ಮಕ್ಕಳ ವಿದ್ಯಾಭ್ಯಾಸದ ಜೊತೆಯಲ್ಲಿಯೇ ದೇಶ ಪ್ರೇಮ, ರಾಷ್ಟ್ರೀಯ ಭಾವೈಕ್ಯತೆ, ಸರ್ವಧರ್ಮ ಸಮಭಾವದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ದೇಶದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರ ವಾಗಿ ಮಾಡುತ್ತಿರುವ ಭಾರತ ಸೇವಾದಳ ದೇಶ ಕಾರ್ಯಕ್ಕಾಗಿ ಸಮರ್ಪಿತವಾದ ಹೆಮ್ಮೆಯ ಸಂಸ್ಥೆ ಎಂದು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿದ್ಯಾಂಗ ಉಪನಿರ್ದೇಶಕ ಎನ್.ಕೆ.ಶಿವರಾಜ್ ಹೇಳಿದ್ದಾರೆ.
ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿಯಿಂದ ಉಡುಪಿ ಹೊಟೇಲ್ ಕಿದಿಯೂರು ಸಭಾಭವದಲ್ಲಿ ಇತ್ತೀಚೆಗೆ ಆಯೋಜಿಸಲಾದ ಜಿಲ್ಲಾ ಕಾರ್ಯ ಕಾರಿಣಿ ಸದಸ್ಯರು, ಶಿಕ್ಷಣ ಇಲಾಖಾ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿ ಗಳು, ಭಾರತ ಸೇವಾದಳದ ತಾಲೂಕು ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಭಾರತ ಸೇವಾದಳ ಕೇಂದ್ರೀಯ ಕಾರ್ಯಕಾರಿಣಿ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದ ಇತಿಹಾಸ ಇರುವ ಭಾರತ ಸೇವಾದಳ ಸರಕಾರದ ಒಂದು ಭಾಗವಾಗಿದ್ದು, ರಾಜ್ಯವ್ಯಾಪಿ ಶಿಕ್ಷಣ ಸಂಸ್ಥೆಗಳು, ವಿವಿಧಇಲಾಖೆಯ ಪ್ರತಿನಿಧಿಗಳಿಗೆ ರಾಷ್ಟ್ರಧ್ವಜದ ಇತಿಹಾಸ, ಧ್ವಜಸಂಹಿತೆ, ಧ್ವಜವಂದನೆ, ರಾಷ್ಟ್ರಗೀತೆ ಬಗ್ಗೆ ಅಧಿಕೃತವಾಗಿ ತರಬೇತಿ ನೀಡುವ ಏಕೈಕ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ತತ್ವಸಿದ್ಧಾಂತಗಳ ಅಡಿಯಲ್ಲಿ ದೇಶಪ್ರೇಮ, ಸೇವಾಭಾವನೆ, ರಾಷ್ಟ್ರೀಯ ಭಾವೈಕ್ಯತಾ ಮೇಳಗಳ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಸೇವಾದಳದ ಉಡುಪಿ ಜಿಲ್ಲಾಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ಸಂಜೀವ ದೇವಾಡಿಗ ಕಾರ್ಕಳ ಇವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಕಾರ್ಕಳ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಯ್ಯ ಜಿ., ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತರಾಜು, ಬೈಂದೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ, ಬ್ರಹ್ಮಾವರ ಸಿ.ಇ.ಒ ನಾಗಾರ್ಜುನ, ಜಿಲ್ಲಾ ಸಮಿತಿ ಸದಸ್ಯರುಗಳಾದ ನಿತ್ಯಾನಂದ ಶೆಟ್ಟಿ ಹಾರಾಡಿ, ಬಿ.ಪುಂಡಲೀಕ ಮರಾಠೆ ಶಿರ್ವ, ಎಂ.ಸಿ.ಆಚಾರ್ ಕಾರ್ಕಳ, ದಿನಕರ ಶೆಟ್ಟಿ ಮುದ್ದುಮನೆ, ಸೇವಾದಳದ ಹೆಬ್ರಿ ತಾಲೂಕು ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ, ಕಾಪು ತಾಲೂಕು ಅಧ್ಯಕ್ಷ ಮಧುಕರ್ ಯು., ಬ್ರಹ್ಮಾವರ ತಾಲೂಕು ಕಾರ್ಯದರ್ಶಿ ಎಚ್.ದಿನಕರ ಶೆಟ್ಟಿ ಹೆರಿಂಜೆ, ಸದಸ್ಯೆ ಜಯಲಕ್ಷ್ಮೀ ಉಪಸ್ಥಿತರಿದ್ದರು. ಜಿಲ್ಲಾ ಸಂಘಟಕ ಫಕ್ಕೀರ ಗೌಡ ವಂದಿಸಿದರು.