ಕರ್ನಾಟಕವನ್ನು ಬಿಜೆಪಿಯ ಪ್ರಯೋಗಶಾಲೆ ಆಗಲು ಕಾಂಗ್ರೆಸ್ ಬಿಡುವುದಿಲ್ಲ: ರಾಹುಲ್ ಗಾಂಧಿ

Update: 2022-10-23 13:08 GMT
Photo: PTI

ಬೆಂಗಳೂರು: ‘ಶಾಂತಿಯ ತೋಟವಾದ ಕರ್ನಾಟಕವನ್ನು (Karnataka) ಬಿಜೆಪಿಯ(BJP) ದ್ವೇಷ ಮತ್ತು ದುರಾಡಳಿತದ ಪ್ರಯೋಗಾಲಯವನ್ನಾಗಿ ಮಾಡಲು ಕಾಂಗ್ರೆಸ್ (Congress) ಪಕ್ಷ ಎಂದಿಗೂ ಬಿಡುವುದಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

ರವಿವಾರ ರಾಜ್ಯದಲ್ಲಿ ಐಕ್ಯತಾ ಯಾತ್ರೆ ಮುಕ್ತಾಯಗೊಳಿಸಿ ನೆರೆಯ ತೆಲಂಗಾಣಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ರಾಜ್ಯ ನಾಯಕರು, ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಕೋಟ್ಯಂತರ ಕನ್ನಡಿಗರ ಬೆಂಬಲದಿಂದ, ಅವಿರತ ಪ್ರಯತ್ನಗಳ ಮೂಲಕ ಪ್ರೀತಿ, ಶಾಂತಿ ಹಾಗೂ ಸೌಹಾರ್ದತೆಯ ಹಾದಿಯಲ್ಲಿ ಈ ಅದ್ಭುತ ರಾಜ್ಯದ ನಿಜವಾದ ಸಾಮರ್ಥ್ಯವನ್ನು ಅನಾವರಣಗೊಳಿಸುವ ದಿನಗಳು ಶೀಘ್ರದಲ್ಲೇ ಬರಲಿವೆ' ಎಂದು ಭರವಸೆ ವ್ಯಕ್ತಪಡಿಸಿದರು.

‘ಚಾಮರಾಜನಗರದ ಬಂಡೀಪುರ ಅರಣ್ಯದ ಹೊರವಲಯದಿಂದ ಹೊರಟ ಯಾತ್ರೆಯು ಸಾಂಸ್ಕೃತಿಕ ರಾಜಧಾನಿ ಮೈಸೂರು ಮೂಲಕ ಸಾಗಿ, ಕಾವೇರಿ, ತುಂಗಭದ್ರಾ, ಕೃಷ್ಣಾ ನದಿಗಳನ್ನು ದಾಟುತ್ತಾ ರಾಯಚೂರಿನ ಹತ್ತಿ ಗದ್ದೆಗಳ ಬಳಿ ಕರ್ನಾಟಕದಲ್ಲಿ ಸುಧೀರ್ಘ 22ನೆ ದಿನದಂದು ತನ್ನ ಪಯಣವನ್ನು ಪೂರ್ಣಗೊಳಿಸಿದೆ. ಮಹಾಕವಿ ಕುವೆಂಪು ಅವರು ಈ ಭೂಮಿಯನ್ನು ‘ಸರ್ವ ಜನಾಂಗದ ಶಾಂತಿಯ ತೋಟ' ಎಂದು ಬಣ್ಣಿಸಿದ್ದರು. ಇದು ಖಂಡಿತ ಶಾಂತಿ ಹಾಗೂ ಸಾಮರಸ್ಯದ ನಾಡು. ಯಾತ್ರೆಯ ಮೂಲಕ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕರ್ನಾಟಕದ ಜನರು ಈ ಯಾತ್ರೆಗೆ ಅಭೂತಪೂರ್ವ ಬೆಂಬಲ ನೀಡಿ ಸ್ಪಂದಿಸಿದ್ದಾರೆ. ಅದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ' ಎಂದರು.

‘ಯಾತ್ರೆಯು ಸಾಗುವ ವೇಳೆ, ಇಲ್ಲಿನ ಜನರ ಅಪರಿಮಿತ ಸಾಮಥ್ರ್ಯವನ್ನು ದುರ್ಬಲಗೊಳಿಸಲಾಗುತ್ತಿದೆ ಎನ್ನುವುದು ಸ್ಪಷ್ಟವಾಯಿತು. ವಿವಿಧ ಬೆಳೆ ಬೆಳೆಯುವ ಪ್ರತಿಯೊಂದು ಪ್ರದೇಶದ ರೈತರೂ ಹೆಚ್ಚುತ್ತಿರುವ ವೆಚ್ಚಗಳು, ಅನಿಶ್ಚಿತ ಇಳುವರಿ ಹಾಗೂ ಬೆಲೆ ಏರಿಳಿತದಿಂದ ತಮ್ಮ ಕುಟುಂಬಗಳನ್ನ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ನಾಡಿನ ಯುವಕರು ಎಷ್ಟೇ ಪ್ರಯತ್ನಿಸಿದರೂ, ತಮ್ಮ ಆಕಾಂಕ್ಷೆಗಳನ್ನು ಪೂರೈಸುವ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಣ್ಣ ಉದ್ಯಮಿಗಳು ಅಸಮರ್ಪಕ ಸಹಕಾರ ಅಥವಾ ಬೆಂಬಲವೇ ಇಲ್ಲದೆ, ಉದ್ಯಮವನ್ನು ಮುಚ್ಚುತ್ತಿದ್ದಾರೆ. ಹಾಗೇ ಮಾರುಕಟ್ಟೆಯನ್ನೂ ಈ ಸರಕಾರ ಕೇವಲ ಕೆಲವೇ ಕೆಲವು ಉದ್ಯಮಿಗಳ ಪರವಾಗಿ ಮಾಡಿದೆ' ಎಂದು ಅವರು ದೂರಿದರು.

‘ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು, ಮಹಿಳಾ ಕಾರ್ಮಿಕರು, ನೇಕಾರರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ಆದಾಯ ಗಳಿಕೆಯಲ್ಲಿ ಸೋಲುತ್ತಿದ್ದಾರೆ. ಸಮಾಜದ ಶೋಷಿತ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ದ್ವೇಷ ಮತ್ತು ಹಿಂಸೆಯನ್ನು ಎದುರಿಸುತ್ತಿದ್ದಾರೆ. ರಾಜ್ಯದ ಭಾಷೆಗಳನ್ನ, ವೈವಿಧ್ಯಮಯ ಸಂಸ್ಕೃತಿಯನ್ನ ಹಾಗೂ ಇತಿಹಾಸವನ್ನ ತಿರುಚಿ ನಾಶಪಡಿಸಲಾಗುತ್ತಿದೆ' ಎಂದು ರಾಹುಲ್ ಗಾಂಧಿ ದೂರಿದರು.

‘ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ’ ಎಂದು ಬಸವಣ್ಣನವರು ಹೇಳಿದ್ದರು. ಕರ್ನಾಟಕದಲ್ಲಿ ಅವರ ಬೋಧನೆಗಳಿಗೆ ತದ್ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ. ಇಡೀ ದೇಶಕ್ಕೆ ಬೆಳವಣಿಗೆಯ ದಾರಿದೀಪವಾಗಿದ್ದ ರಾಜ್ಯ ಇಂದು ‘ಶೇ.40ರಷ್ಟು ಕಮಿಷನ್’ ಸರಕಾರಕ್ಕೆ ಕುಖ್ಯಾತಿಗಳಿಸಿದ್ದು, ಬಿಜೆಪಿಯ ‘ಸೂಟು-ಬೂಟಿನ ಲೂಟಿ ಸರ್ಕಾರ'ಕ್ಕೆ ತಕ್ಕ ಉದಾಹರಣೆ. ಉದ್ಯೋಗಕ್ಕಾಗಿ ಲಂಚ, ಗುತ್ತಿಗೆಗೆ ಲಂಚ, ಜನಸಾಮಾನ್ಯರ ಕೆಲಸಕ್ಕೆ ಲಂಚ, ಕರ್ನಾಟಕದಲ್ಲಿ ಬಿಜೆಪಿಗೆ ಮಾರಾಟವಾಗದ ಉಳಿದ ಯಾವುದೇ ಸರಕಾರಿ ಸೇವೆ ಇಲ್ಲ. ಸೌಹಾರ್ದತೆ ಮತ್ತು ಸಾರ್ವಜನಿಕ ವಲಯದ ಬೆಳೆವಣಿಗೆ ಕುಂಠಿತವಾಗಿದ್ದು, ಅದು ಬಡವರು ಹಾಗೂ ದುರ್ಬಲರನ್ನು ಹೆಚ್ಚು ಭಾದಿಸುತ್ತಿದೆ ಮತ್ತು ಆರ್ಥಿಕ ಪ್ರಗತಿಗೆ ಪಾಶ್ರ್ವವಾಯು ಹಿಡಿಯುವಂತೆ ಮಾಡಿದೆ' ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕಾಣಿಯೂರಿನಲ್ಲಿ ಬಟ್ಟೆ ವ್ಯಾಪಾರಿಗಳ ಮೇಲೆ ಹಲ್ಲೆ ಪ್ರಕರಣ: ಆರು ಮಂದಿ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News