ನಿಂತಿದ್ದ ರೈಲಿನ ಒಳಗೆ ನಮಾಝ್ ವೀಡಿಯೊ ಬಗ್ಗೆ ತನಿಖೆ ನಡೆಯುತ್ತಿದೆ: ಉತ್ತರಪ್ರದೇಶ ಪೊಲೀಸ್

Update: 2022-10-23 14:48 GMT

ಲಕ್ನೋ, ಅ. 23: ಉತ್ತರಪ್ರದೇಶದ ಕುಶಿನಗರದಲ್ಲಿ ರೈಲು ನಿಂತ ಸಂದರ್ಭ ಬೋಗಿಯಲ್ಲಿ ನಾಲ್ವರು ನಮಾಝ್ ಮಾಡಿದ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಾಜ್ಯ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ಹೇಳಿದೆ.

ಕುಶಿನಗರದ ಮಾಜಿ ಬಿಜೆಪಿ ಶಾಸಕ ದೀಪ್‌ಲಾಲ್ ಭಾರ್ತಿ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಸ್ಲೀಪರ್ ಕೋಚ್‌ನಲ್ಲಿ ನಾಲ್ವರು ಮುಸ್ಲಿಂ ವ್ಯಕ್ತಿಗಳು ನಮಾಝ್ ಮಾಡುತ್ತಿರುವುದು ಕಂಡು ಬಂದಿದೆ. ಸತ್ಯಾಗ್ರಹ ಎಕ್ಸ್‌ಪ್ರೆಸ್ ರೈಲು ಖಡ್ಡಾ ರೈಲ್ವೇ ನಿಲ್ದಾಣದಲ್ಲಿ ನಿಂತ ಸಂದರ್ಭದಲ್ಲಿ ಈ ವೀಡಿಯೂ ದಾಖಲಿಸಲಾಗಿದೆ.

ನಮಾಝ್ ಮಾಡುತ್ತಿದ್ದ ವ್ಯಕ್ತಿಯೋರ್ವನ ಹಿಂದ್ದಿದ್ದ ವ್ಯಕ್ತಿ ನಮಾಝ್ ಮುಗಿಸುವ ವರೆಗೆ ಕಾಯುವಂತೆ ಪ್ರಯಾಣಿಕರಿಗೆ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡುತ್ತಿರುವ ವಿಚಾರ ಈಗ ತೀವ್ರ  ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಮರನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸುವ ಮೂಲಕ ಇಂತಹ ಕೃತ್ಯಗಳನ್ನು ಮರೆಮಾಚಲಾಗುತ್ತದೆ ಎಂದು ಸಂಘ ಪರಿವಾರ ಹೇಳಿದೆ. 

ಈ ವರ್ಷ ಆರಂಭದಲ್ಲಿ ಹರ್ಯಾಣದಲ್ಲಿ ನಮಾಝ್‌ಗೆ ಪ್ರತ್ಯೇಕ ಸ್ಥಳ ಮೀಸಲಿರಿಸಿರುವುದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಸಂಘ ಪರಿವಾರದ ಬೆಂಬಲಿಗರು ಮುಸ್ಲಿಮರು ನಮಾಝ್ ಮಾಡುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು ಹಾಗೂ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದರು. ಈ ಸನ್ನಿವೇಶ ಕೋಮು ಹಿಂಸಾಚಾರಕ್ಕೆ ತಿರುಗದಂತೆ ತಡೆಯಲು ಪೊಲೀಸರು ಕ್ರಮಗಳನ್ನು ತೆಗೆದುಕೊಂಡಿದ್ದರು.

ಆಸ್ಪತ್ರೆಯೊಂದರಲ್ಲಿ ಮಹಿಳೆಯೋರ್ವರು ನಮಾಝ್ ಮಾಡುತ್ತಿರುವ ವೀಡಿಯೊ ವೈರಲ್ ಆದ ಬಳಿಕ ಕಳೆದ ತಿಂಗಳು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿವಾದ ಭುಗಿಲೆದ್ದಿತ್ತು. ಅನಂತರ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿ, ಈ ವೀಡಿಯೊ ತನ್ನ ಕುಟುಂಬ ಶೀಘ್ರ ಗುಣಮಖವಾಗಲಿ ಎಂದು ಮಹಿಳೆ ಪ್ರಾರ್ಥಿಸಿರುವುದು ಹಾಗೂ ಯಾವುದೇ ಅಡ್ಡಿ ಉಂಟು ಮಾಡಲು ಅಲ್ಲ. ಅವರ ನಡವಳಿಕೆ ಯಾವುದೇ ಅಪರಾಧದ ಅಡಿಯಲ್ಲಿ ಬರುವುದಿಲ್ಲ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News