ರಾಷ್ಟ್ರ ರಾಜಧಾನಿಯನ್ನು ಆವರಿಸಿದ ದಟ್ಟಹೊಗೆ: ದಿಲ್ಲಿಯಲ್ಲಿ ಕಳಪೆ ಶ್ರೇಣಿಗೆ ಇಳಿದ ವಾಯುಗುಣಮಟ್ಟ

Update: 2022-10-23 15:19 GMT
Delhi Pollution (ಸಾಂದರ್ಭಿಕ ಚಿತ್ರ: PTI)

ಹೊಸದಿಲ್ಲಿ,ಆ.23: ದೀಪಾವಳಿ ಹಬ್ಬದ ಆರಂಭಕ್ಕೆ ಒಂದು ದಿನ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರವಿವಾರ ವಾಯುವಿನ ಗುಣಮಟ್ಟವು ಕಳಪೆ ಶ್ರೇಣಿಗೆ ತಲುಪಿದೆ.ಇಂದು ಮುಂಜಾನೆ ವಾಯುವಿನ ಒಟ್ಟಾರೆ ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು 251 ಆಗಿರುವುದಾಗಿ ವಾಯು ಗುಣಮಟ್ಟ ವ್ಯವಸ್ಥೆ ಹಾಗೂ ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ಸಂಸ್ಥೆ ( ಸಫರ್)ಯ ವರದಿ ತಿಳಿಸಿದೆ.

 ಪೂರ್ವ ದಿಲ್ಲಿಯಲ್ಲಿರುವ ಅಕ್ಷರಧಾಮ ದೇವಾಲಯದ ಬಳಿ ಗೋಚರತೆಯ ಮಟ್ಟವು ಕಳಪೆಯಾಗಿದ್ದು, ವಾಹನಗಳು ದಟ್ಟ ಹೊಗೆಯ ನಡುವೆ ಸಂಚರಿಸುತ್ತಿರುವುದು ಕಂಡುಬಂತು.ಕಳೆದ ಎರಡು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟವು ಹದಗೆಡುತ್ತಾ ಬಂದಿದೆ. ಕಳೆದ ಸಂಜೆ ದಿಲ್ಲಿಯಲ್ಲಿ ವಾಯುವಿನ ಒಟ್ಟಾರೆ ಗುಣಮಟ್ಟವು 266 ಆಗಿದೆ. ದಿಲ್ಲಿ ವಿಶ್ವವಿದ್ಯಾನಿಲಯ ಪ್ರದೇಶದಲ್ಲಿ ವಾಯುವಿನ ಗುಣಮಟ್ಟವು 327 ಶ್ರೇಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ನಿಗದಿತ ಮಾನದಂಡಗಳ ಪ್ರಕಾರ ವಾಯುವಿನ ಗುಣಮಟ್ಟವು (ಎಕ್ಯೂಐ) ಶೂನ್ಯದಿಂದ 50ರ ಒಳಗಿದ್ದರೆ ಉತ್ತಮ. 51 ಹಾಗೂ 100 ನಡುವೆಯಿದ್ದರೆ ತೃಪ್ತಿಕರ, 100ರಿಂದ 200ರ ನಡುವೆ ಇದ್ದಲ್ಲಿ ಸಾಧಾರಣ, 201 ಹಾಗೂ 300ರ ನಡುವೆ ಇದ್ದರೆ ಕಳಪೆ, 301 ಹಾಗೂ400ರ ನಡುವೆ ಇದ್ದರೆ ಅತ್ಯಂತ ಕಳಪೆ 401 ಹಾಗೂ 500ರ ನಡುವೆ ಇದ್ದಲ್ಲಿ ಅತ್ಯಂತ ಗಂಭೀರ ಎನ್ನಲಾಗುತ್ತಿದೆ.

ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ನಿಭಾಯಿಸಲು 15 ಅಂಶಗಳ ಚಳಿಗಾಲದ ಕ್ರಿಯಾ ಯೋಜನೆಯನ್ನು ಸರಕಾರವು ಆರಂಭಿಸಿದೆ.ಧೂಳು ಮಾಲಿನ್ಯ, ಪೈರುಗಳ ಕೂಳೆಗಳ ನಿರ್ವಹಣೆ, ತೆರೆದ ಜಾಗದಲ್ಲಿ ತ್ಯಾಜ್ಯಗಳ ಸುಡುವಿಕೆ ಹಾಗೂ ಸುಡುಮದ್ದುಗಳ ನಿಯಂತ್ರಣದ ಬಗ್ಗೆ ಕ್ರಿಯಾ ಯೋಜನೆಯು ಗಮನಸೆಳೆಯಲಿದೆ. ದಿಲ್ಲಿಯಲ್ಲಿ ಒಟ್ಟು ವಾಯುಮಾಲಿನ್ಯದ ಶೇ.39ರಷ್ಟು ಸ್ಥಳಿಯವಾಗಿಯೇ ಸೃಷ್ಟಿಯಾಗುತ್ತದೆ ಹಾಗೂ ಉಳಿದವು ರಾಷ್ಟ್ರ ರಾಜಧಾನಿ ಪ್ರಾಂತ (ಎನ್‌ಸಿಆರ್)ದ ನೆರೆಹೊರೆಯ ಪ್ರದೇಶಗಳಿಂದ ಸೃಷ್ಟಿಯಾಗುತ್ತದೆ ಎಂದರು.

ದಿಲ್ಲಿ ಸರಕಾರವು ಈಗಾಗಲೇ ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳ ಉತ್ಪಾದನೆ,ದಾಸ್ತಾನು, ಮಾರಾಟ ಹಾಗೂ ಸಿಡಿಸುವಿಕೆಯನ್ನು ನಿಷೇಧಿಸಿದೆ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಲಸಿದಲ್ಲಿ ದಂಡ ಹಾಗೂ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.ನೆರೆಹೊರೆಯ ರಾಜ್ಯಗಳಾದ ಪಂಜಾಬ್, ಉತ್ತರಪ್ರದೇಶ, ಹರ್ಯಾಣ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ರೈತರು ತಮ್ಮ ಹೊಲಗಳಲ್ಲಿರುವ ಪೈರಿನ ಕೂಳೆಗಳನ್ನು ಸುಟ್ಟುಹಾಕುವುದರಿಂದ ಹೊರಹೊಮ್ಮುವ ದಟ್ಟ ಹೊಗೆ ಕೂಡಾ ರಾಜಧಾನಿ ದಿಲ್ಲಿಯ ವಾಯುವಿನ ಗುಣಮಟ್ಟದ ಮೇಲೆ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News