ಶಿವಸೇನೆಯ ಏಕನಾಥ್ ಶಿಂಧೆ ಬಣದ 22 ಶಾಸಕರು ಶೀಘ್ರ ಬಿಜೆಪಿಗೆ: ಉದ್ಧವ್ ಠಾಕ್ರೆ ಬಣ ಪ್ರತಿಪಾದನೆ
ಮುಂಬೈ, ಅ. 24: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ 22 ಶಾಸಕರು ಶೀಘ್ರದಲ್ಲಿ ಬಿಜೆಪಿಗೆ ಸೇರಲಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ರವಿವಾರ ಪ್ರತಿಪಾದಿಸಿದೆ. ಶಿವಸೇನೆಯ ಮುಖವಾಣಿಯಾದ ‘ಸಾಮ್ನಾ’ದ ವಾರದ ಕಾಲಂನಲ್ಲಿ ಶಿವಸೇನೆ, ಶಿಂಧೆ ಅವರ ಮುಖ್ಯಮಂತ್ರಿ ಸ್ಥಾನ ಬಿಜೆಪಿಯ ತಾತ್ಕಾಲಿಕ ವ್ಯವಸ್ಥೆ ಎಂದು ಹೇಳಿದೆ.
‘‘ಶಿಂಧೆ ಅವರ ಮುಖ್ಯಮಂತ್ರಿಯ ಸಮವಸ್ತ್ರವನ್ನು ಬಿಜೆಪಿ ಯಾವಾಗ ಬೇಕಾದರೂ ಕಿತ್ತುಕೊಳ್ಳಬಹುದು ಎಂಬುದನ್ನು ಈಗ ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡಿದ್ದಾರೆ’’ ಎಂದು ಶಿವಸೇನೆ ‘ರೋಕ್‌ಟಾಕ್’ ಕಾಲಂನಲ್ಲಿ ಹೇಳಿದೆ.
ಶಿಂಧೆ ಅವರು ಕೂಡ ಶೀಘ್ರದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಒಂದು ವೇಳೆ ಇದು ಸಂಭವಿಸಿದರೆ, ಶಿಂಧೆ ಅವರ ಸಾಧನೆ ಏನು ? ಎಂದು ಕಾಲಂ ಪ್ರಶ್ನಿಸಿದೆ. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಂಧೆ ಅವರ ಕೊಡುಗೆ ಯಾರೊಬ್ಬರಿಗೂ ಕಾಣುತ್ತಿಲ್ಲ. ಆದರೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರನ್ನು ಎಲ್ಲೆಡೆ ಕಾಣಬಹುದು ಎಂದು ಅದು ಹೇಳಿದೆ.
ಮುಂಬೈಯಲ್ಲಿರುವ ಧಾರಾವಿ ಪ್ರದೇಶವನ್ನು ಮರು ಅಭಿವೃದ್ಧಿಗೊಳಿಸಲು ಕೇಂದ್ರ ರೈಲ್ವೆ ಸಚಿವಾಲಯದಿಂದ ತುಂಡು ಭೂಮಿಗೆ ಫಡ್ನಾವಿಸ್ ಅವರು ಅನುಮೋದನೆ ಪಡೆದಿರುವುದನ್ನು ಉಲ್ಲೇಖಿಸಿದ ಕಾಲಂ, ಈ ಯೋಜನೆಯ ಎಲ್ಲ ಗೌರವ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿಗೆ ಸಲ್ಲುತ್ತದೆ ಎಂದು ಹೇಳಿದೆ.