ʼಆರೆಸ್ಸೆಸ್‌ ಟೂಲ್‌ನಂತೆʼ ಕೆಲಸ ಮಾಡುತ್ತಿದ್ದಾರೆ: ಗವರ್ನರ್‌ ಆರಿಫ್‌ ಮುಹಮ್ಮದ್‌ ಕುರಿತು ಪಿಣರಾಯಿ ವಿಜಯನ್ ಕಿಡಿ

Update: 2022-10-24 08:35 GMT

ತಿರುವನಂತಪುರಂ: ರಾಜ್ಯದ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ರಾಜೀನಾಮೆ ನೀಡುವಂತೆ ಆದೇಶ ಹೊರಡಿಸಿದ್ದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಆರೆಸ್ಸೆಸ್‌ನ ಟೂಲ್‌ ನಂತೆ ವರ್ತಿಸುತ್ತಿದ್ದಾರೆ ಮತ್ತು ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಹುದ್ದೆ ಸರ್ಕಾರದ ವಿರುದ್ಧ ನಡೆಯುವುದಲ್ಲ, ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವುದಾಗಿದೆ ಎಂದ ಅವರು, ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ವಿಸಿಗಳ ಅಧಿಕಾರದ ಮೇಲಿನ ಅತಿಕ್ರಮಣವಾಗಿದೆ ಎಂದು ಹೇಳಿದರು.

ಉಪಕುಲಪತಿಗಳು ರಾಜೀನಾಮೆ ನೀಡುವಂತೆ ರಾಜ್ಯಪಾಲರು ನಿರ್ದೇಶನ ನೀಡಿದ ಒಂದು ದಿನದ ನಂತರ ಮುಖ್ಯಮಂತ್ರಿಯವರ ಈ ಹೇಳಿಕೆ ಹೊರಬಿದ್ದಿದೆ.

ಕೇರಳ ವಿಶ್ವವಿದ್ಯಾಲಯ, ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯ, ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ, ಕಣ್ಣೂರು ವಿಶ್ವವಿದ್ಯಾಲಯ, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ, ಕ್ಯಾಲಿಕಟ್ ವಿಶ್ವವಿದ್ಯಾನಿಲಯ, ಮತ್ತು ತುಂಜತ್ ಎಝುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ರಾಜೀನಾಮೆ ನೀಡುವಂತೆ ಕೇಳಿಕೊಳ್ಳಲಾಗಿದೆ.

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ (ಕೆಟಿಯು) ಉಪಕುಲಪತಿಯಾಗಿ ಡಾ.ರಾಜಶ್ರೀ ಎಂಎಸ್ ಅವರ ನೇಮಕವನ್ನು ಸುಪ್ರೀಂ ಕೋರ್ಟ್ ಈ ಹಿಂದೆ ರದ್ದುಗೊಳಿಸಿತ್ತು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಪ್ರಕಾರ, ಶೋಧನಾ ಸಮಿತಿಯು ಉಪಕುಲಪತಿ ಹುದ್ದೆಗೆ ಮೂವರಿಗೆ ಕಡಿಮೆಯಿಲ್ಲದ ಅರ್ಹ ವ್ಯಕ್ತಿಗಳ ಸಮಿತಿಯನ್ನು ಶಿಫಾರಸು ಮಾಡಬೇಕಾಗಿತ್ತು ಆದರೆ ರಾಜಶ್ರೀ ಅವರ ಪ್ರಕರಣದಲ್ಲಿ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News