ಲಕ್ನೊ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಮಗನನ್ನು ಅಪಹರಿಸಿ ಕೊಂದ ಆರೋಪಿ ಬಂಧನ

Update: 2022-10-24 07:36 GMT
Photo: PTI

ಆಗ್ರಾ: ಕ್ಷುಲ್ಲಕ ಕಾರಣಕ್ಕೆ  ತನ್ನ ಸ್ನೇಹಿತನ ನಾಲ್ಕು ವರ್ಷದ ಬಾಲಕನನ್ನು ಅಪಹರಿಸಿ ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಹಿಂದೆ ನಡೆದ ‘ಭಂಡಾರ’ದ ಸಂಘಟಕರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದು ಇಬ್ಬರ ನಡುವಿನ ವೈಮನಸ್ಸಿಗೆ ಕಾರಣವಾದ ವಿಷಯಗಳಲ್ಲಿ ಒಂದು ಎಂದು ಆರೋಪಿ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

"ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಂಟಿ (23) ಎಂದು ಗುರುತಿಸಲಾದ ಆರೋಪಿ ಬಾಲಕನನ್ನು ಅಪಹರಿಸಿದ್ದಾನೆ. ಆರೋಪಿ ಬಾಲಕನ ತಂದೆಯ  ಸ್ನೇಹಿತನಾಗಿದ್ದ’’ ಎಂದು ಆಗ್ರಾದ ಛಟ್ಟಾ ವೃತ್ತ ಅಧಿಕಾರಿ ಸುಕನ್ಯಾ ಶರ್ಮಾ ಹೇಳಿದ್ದಾರೆ.

ಆರೋಪಿ ತನ್ನ ಸ್ನೇಹಿತನ ಮೇಲಿನ ಸೇಡು ತೀರಿಸಿಕೊಳ್ಳಲು ಆತನ ಮಗನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟಿ ಶನಿವಾರ ಬಾಲಕನನ್ನು ಅಪಹರಿಸಿದ್ದಾನೆ. ಬಾಲಕ ಪತ್ತೆಯಾಗದಿದ್ದಾಗ ಕುಟುಂಬಸ್ಥರು ಬಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬಾಲಕನ ಹುಡುಕಾಟದ ವೇಳೆ  ಆರೋಪಿಯೂ ಕುಟುಂಬದ ಜತೆಗಿದ್ದ. ಬಾಲಕ ಇರುವ ಸ್ಥಳದ ಬಗ್ಗೆ 'ಬಾಬಾ' ತನಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದ ಆರೋಪಿ ಬಾಲಕನ ಶವ ಬಿದ್ದಿರುವ ಸ್ಥಳಕ್ಕೆ ಎಲ್ಲರನ್ನು ಕರೆದುಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಂಟಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ವಿಚಾರಣೆಯ ಸಮಯದಲ್ಲಿ ಆರೋಪಿಯು ಬಾಲಕನ ತಂದೆಯೊಂದಿಗೆ ಸಣ್ಣ ವಿವಾದವನ್ನು ಹೊಂದಿದ್ದೆನೆಂದು ಬಹಿರಂಗಪಡಿಸಿದ್ದ. ವಿವಾದಕ್ಕೆ ಕಾರಣವಾದ ವಿಷಯವೆಂದರೆ ಈ ಹಿಂದೆ ಆಯೋಜಿಸಿದ್ದ 'ಭಂಡಾರ'ದ ಸಂಘಟಕರ ಪಟ್ಟಿಯಿಂದ ಆತನ ಹೆಸರನ್ನು ತೆಗೆದುಹಾಕಲಾಗಿದೆ" ಎಂದು ಸುಕನ್ಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News