ದೀಪಾವಳಿಯ ಬೆಳಗ್ಗೆ ಕುಸಿತ ಕಂಡ ದಿಲ್ಲಿಯ ವಾಯು ಗುಣಮಟ್ಟ

Update: 2022-10-24 10:37 GMT
Photo: PTI

ಹೊಸದಿಲ್ಲಿ : ದೀಪಾವಳಿ ಹಬ್ಬದ ದಿನವಾದ ಇಂದು ಮುಂಜಾನೆ ರಾಜಧಾನಿ ದಿಲ್ಲಿಯ ವಾಯು ಗುಣಮಟ್ಟ ಕುಸಿದಿದೆ. ಇಂದು ಬೆಳಿಗ್ಗೆ 10.45 ಕ್ಕೆ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 313 ದಾಖಲಾಗಿದೆ ಎಂದು ಕೇಂದ್ರ ಭೂವಿಜ್ಞಾನಗಳ ಸಚಿವಾಲಯದ ಸಿಸ್ಟಂ ಆಫ್ ಏರ್ ಕ್ವಾಲಿಟಿ ಎಂಡ್ ವೆದರ್ ಫೋರ್ಕಾಸ್ಟಿಂಗ್ ಎಂಡ್ ರಿಸರ್ಚ್ ಇದರ ನೈಜ ಸಮಯದ ಅಂಕಿಅಂಶಗಳಿಂದ ತಿಳಿದು ಬಂದಿದೆ.

ದಿಲ್ಲಿಯ ವಾಯು ಗುಣಮಟ್ಟ ಕುಸಿದಿದೆ ಎಂದು ಇಂದಿನ ಸೂಚ್ಯಂಕ ಸೂಚಿಸುತ್ತಿದ್ದು ದೀರ್ಘ ಸಮಯ ಇಂತಹ ವಾತಾವರಣದಲ್ಲಿದ್ದವರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳುಂಟಾಗುವ ಅಪಾಯ ಹೆಚ್ಚಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳಂತೆ ರವಿವಾರ ಸಂಜೆ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ದಿಲ್ಲಿಯಲ್ಲಿ 259 ಆಗಿತ್ತು. ದೀಪಾವಳಿ ಮುನ್ನಾ ದಿನದ ಅತ್ಯಂತ ಕನಿಷ್ಠ ವಾಯು ಗುಣಮಟ್ಟ ಇದಾಗಿದೆ.

ಆದರೆ ತಾಪಮಾನಗಳ ಇಳಿಕೆ ಹಾಗೂ ಗಾಳಿಯ ವೇಗ, ಜೊತೆಗೆ ಹಲವೆಡೆ ಪಟಾಕಿಗಳನ್ನು ಜನರು ಸಿಡಿಸುತ್ತಿದ್ದುದರಿಂದ  ವಾಯು ಗುಣಮಟ್ಟ ಕುಸಿದಿದೆ.

ವಾತಾವರಣದಲ್ಲಿರುವ ಅತ್ಯಂತ ಅಪಾಯಕಾರಿ ಅಂಶವಾದ ಪಿಎಂ2.5 ಇಂದು ಬೆಳಿಗ್ಗೆ ದಿಲ್ಲಿಯಲ್ಲಿ ತಲಾ ಕ್ಯೂಬಿಕ್ ಮೀಟರ್‍ಗೆ 137 ಮೈಕ್ರೋಗ್ರಾಂ ಆಗಿತ್ತು.

ಕಳೆದ ವರ್ಷದಂತೆ ಈ ವರ್ಷವೂ ಪಟಾಕಿಗಳನ್ನು ಸಿಡಿಸಿದರೆ ವಾಯು ಗುಣಮಟ್ಟ ಇನ್ನಷ್ಟು ಕುಸಿಯಬಹುದು ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ಎಂಡ್ ವೆದರ್ ಫೋರ್ಕಾಸ್ಟಿಂಗ್ ಎಂಡ್ ರಿಸರ್ಚ್ ಎಚ್ಚರಿಸಿದೆ.

ದಿಲ್ಲಿಯ ಆಪ್ ಸರಕಾರ ಈಗಾಗಲೇ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದು ಪಟಾಕಿ ಸಿಡಿಸುವವರು ರೂ 200 ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ಎದುರಿಸಲಿದ್ದಾರೆ ಹಾಗೂ ಪಟಾಕಿ ತಯಾರಿಸಿ ಸಂಗ್ರಹಿಸಿಡುವರು ರೂ 5,000 ದಂಡ ಹಾಗೂ ಮೂರು ವರ್ಷಗಳ ತನಕ ಜೈಲು ಶಿಕ್ಷೆ ಎದುರಿಸಲಿದ್ದಾರೆ ಎಂದು ಕಳೆದ ವಾರ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದರು.

ಆಪ್ ಸರಕಾರದ ನಿರ್ಧಾರ ಪ್ರಶ್ನಿಸಿ ಬಿಜೆಪಿ ನಾಯಕ ಮನೋಜ್ ತಿವಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರೂ ಅದನ್ನು ತಳ್ಳಿ ಹಾಕಿದ ಉನ್ನತ ನ್ಯಾಯಾಲಯ, ಜನರಿಗೆ ಶುದ್ಧ ಗಾಳಿಯ ಅಗತ್ಯವಿದೆ ಎಂದಿತ್ತು.

ಪಟಾಕಿ ನಿಷೇಧ ಆದೇಶ ಪರಿಣಾಮಕಾರಿ ಜಾರಿಗೆ ರಾಜಧಾನಿಯಲ್ಲಿ 400ಕ್ಕೂ ಅಧಿಕ ತಂಡಗಳನ್ನು ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News