ಅ.27: ಹಾಲಿನ ಖರೀದಿ ದರ ಏರಿಸುವಂತೆ ಆಗ್ರಹಿಸಿ ರೈತ ಸಮಾವೇಶ
ಉಡುಪಿ : ಸಹಕಾರ ಭಾರತಿ ಹಾಗೂ ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಹಾಲಿನ ಖರೀದಿ ದರ ಏರಿಸು ವಂತೆ ಒತ್ತಾಯಿಸಿ ರೈತ ಸಮಾವೇಶವನ್ನು ಅ.27ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಹಕಾರ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಹಾಲು ಉತ್ಪಾದನೆ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಕನಿಷ್ಠ 10 ರೂ. ಏರಿಸುವಂತೆ ಒತ್ತಾಯಿಸಿ ಸರಕಾರಕ್ಕೆ ರಾಜ್ಯದ ರೈತ ಸಮು ದಾಯವು ಬೇಡಿಕೆ ಹಾಗೂ ಮನವಿಯನ್ನು ಸಲ್ಲಿಸಿದೆ. ಆದರೆ ಸರಕಾರ ಯಾವುದೇ ರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ದೂರಿದರು.
ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಲಿನ ದರ ಏರಿಸುವ ಬಗ್ಗೆ ಸಿಎಂ ಸೂಕ್ತ ಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಆದು ದರಿಂದ ರಾಜ್ಯದ ಲಕ್ಷಾಂತರ ಹೈನುಗಾರರ ನೆರವಿಗೆ ಮುಖ್ಯಮಂತ್ರಿ ಬರುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಅಂಚೆ ಕಾರ್ಡ್ ಚಳುವಳಿಯನ್ನು ಈ ಸಮಾವೇಶದ ಮೂಲಕ ಆರಂಭಿಸಲಾಗುವುದು ಇದರೊಂದಿಗೆ ಈ ರೈತ ಪರ ಹೋರಾಟವನ್ನು ಜಿಲ್ಲೆಯಿಂದ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದರು.
ಸಮಾವೇಶವನ್ನು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಕಡಂದಲೆ ಭಾಗವಹಿಸಲಿರುವರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಹಕಾರಿ ಭಾರತಿ ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಸಾಣೂರು ನರಸಿಂಹ ಕಾಮತ್, ಜಿಲ್ಲಾ ಸಂಚಾಲಕ ಕನ್ನಾರು ಕಮಲಾಕ್ಷ ಹೆಬ್ಬಾರ್, ಸಂಘಟನಾ ಕಾರ್ಯದರ್ಶಿ ಸುಜಿತ್ ಕುಮಾರ್, ಸಂಘಟನಾ ಪ್ರಮುಖ್ ಮೋಹನ್ ಕುಂಬ್ಳೆಕರ್ ಉಪಸ್ಥಿತರಿದ್ದರು.