ಅಪಹೃತ ದಲಿತ ಬಾಲಕಿ ಶವವಾಗಿ ಪತ್ತೆ, ಬಂಧುಗಳಿಂದ ಪ್ರತಿಭಟನೆ; ಹಂತಕರ ಬಂಧನಕ್ಕೆ ಆಗ್ರಹ

Update: 2022-10-24 16:27 GMT

ಭಿಂಡ್,ಅ.24: ಮಧ್ಯಪ್ರದೇಶದ ಗುನಾ(Guna) ಜಿಲ್ಲೆಯ ತನ್ನ ಗ್ರಾಮದಿಂದ ಐದು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 16ರ ಹರೆಯದ ದಲಿತ ಬಾಲಕಿಯ ಕೊಳೆತ ಶವ ರವಿವಾರ ಹೊಲವೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ 11ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.

ಬಾಲಕಿಯ ಬಂಧುಗಳು ಸಂಚಾರ ನಿಬಿಡ ರಸ್ತೆಯನ್ನು ತಡೆದು ಪ್ರತಿಭಟನೆಯನ್ನು ನಡೆಸಿ ಹಂತಕರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಬಿಎಸ್ಪಿಯ ಗುನಾ ಜಿಲ್ಲಾಧ್ಯಕ್ಷ ದಿಲೀಪ್ ಬೌಧ್ (Dilip Boudh)ಆಗ್ರಹಿಸಿದ್ದಾರೆ. ತನ್ನ ಬೆಂಬಲಿಗರೊಂದಿಗೆ ಮೃತ ಬಾಲಕಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ ಅವರು,ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.‌

ಬಾಲಕಿ ನಿಗೂಢ ಸಂದರ್ಭದಲ್ಲಿ ಮೃತಪಟ್ಟಿದ್ದು,ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿ ಅ.19ರಂದು ಶಾಲೆಯಿಂದ ಮರಳುತ್ತಿದ್ದಾಗ ಆಕೆಯನ್ನು ಅಪಹರಿಸಲಾಗಿತ್ತು ಎನ್ನಲಾಗಿದೆ. ಆಕೆಯ ಅಜ್ಜ ಸಲ್ಲಿಸಿದ್ದ ದೂರಿನ ಮೇರೆಗೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಗ್ರಾಮದ ಸಮೀಪದ ಹೊಲದಲ್ಲಿ ಬಾಲಕಿಯ ಕೊಳೆತ ಶವ ಪತ್ತೆಯಾಗಿದೆ. ಆಕೆಯ ಶಾಲಾ ಬ್ಯಾಗ್ ಮತ್ತು ಸೈಕಲ್ ಸ್ಥಳದಲ್ಲಿ ಪತ್ತೆಯಾಗಿವೆ ಎಂದು ಹೆಚ್ಚುವರಿ ಎಸ್ಪಿ ಕಮಲೇಶ ಕುಮಾರ ಖರ್ಪುಸೆ ತಿಳಿಸಿದರು. ಬಾಲಕಿಯ ಬಂಧುಗಳು ಪ್ರತಿಭಟನೆ ನಡೆಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗ್ವಾಲಿಯರ್ ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News