ಕೊಯಮತ್ತೂರು ಸ್ಫೋಟ: ಮೃತ ವ್ಯಕ್ತಿಯ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ

Update: 2022-10-24 17:22 GMT
 Photo: PTI.

ಚೆನ್ನೈ,ಅ.24: ಕೊಯಮತ್ತೂರು ಜಿಲ್ಲೆಯ ಉಕ್ಕಡಂ(Ukkadam) ಎಂಬಲ್ಲಿ ರವಿವಾರ ಸಂಭವಿಸಿದ ಸ್ಫೋಟದಲ್ಲಿ ಮೃತ ವ್ಯಕ್ತಿಯನ್ನು ಜಾಮೇಶ್ ಮುಬಿನ್ (25) (Jamesh Mubin)ಎಂದು ಗುರುತಿಸಲಾಗಿದ್ದು,‌ ಆತನ ಮನೆಯಿಂದ ಸ್ಫೋಟಕಗಳನ್ನು ತಯಾರಿಸಲು ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆದರೆ ಸ್ಫೋಟದ ಹಿಂದಿನ ಕಾರಣ,ಅದು ಉದ್ದೇಶಪೂರ್ವಕವಾಗಿತ್ತೇ ಅಥವಾ ಆಕಸ್ಮಿಕವಾಗಿತ್ತೇ ಎನ್ನುವುದು ಈವರೆಗೆ ತಿಳಿದುಬಂದಿಲ್ಲ. ರವಿವಾರ ಉಕ್ಕಡಂ ಕೊಟ್ಟಾಯಿ ಈಶ್ವರನ್ (Kottay Iswaran)ದೇವಸ್ಥಾನದ ಹೊರಗೆ ಕಾರಿನಲ್ಲಿಯ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದು,ಅದರಲ್ಲಿದ್ದ ಮುಬಿನ್ ಸಾವನ್ನಪ್ಪಿದ್ದ. ಮುಬಿನ್ ಗುರುತು ಪತ್ತೆಯಾಗಿರುವ ಮತ್ತು ಸ್ಫೋಟವು ದೇವಸ್ಥಾನದ ಸಮೀಪ ಸಂಭವಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ.

‘ಘಟನಾ ಸ್ಥಳದ ಸಮೀಪ ಪೊಲೀಸ್ ತನಿಖಾ ಠಾಣೆಯಿದ್ದು,ಅದನ್ನು ದಾಟಿ ಹೋಗಲು ಆತನಿಗೆ ಸಾಧ್ಯವಾಗಿರಲಿಲ್ಲ. ಆತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಎಂದು ನಾವು ಭಾವಿಸಿದ್ದೇವೆ. ನಾವಿನ್ನೂ ತನಿಖೆ ನಡೆಸುತ್ತಿದ್ದೇವೆ ’ಎಂದು ತಮಿಳುನಾಡು ಡಿಜಿಪಿ ಶೈಲೇಂದ್ರ ಬಾಬು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ದಾಳಿಯ ಸಂಭವನೀಯ ಗುರಿಯ ಬಗ್ಗೆ ಇನ್ನೂ ತಿಳಿದುಬಂದಿಲ್ಲವಾದರೂ ಆತ ಭವಿಷ್ಯದಲ್ಲಿ ಏನನ್ನೋ ಯೋಜಿಸಿದ್ದ ಎನ್ನುವುದನ್ನು ಆತನ ಮನೆಯಲ್ಲಿ ಪತ್ತೆಯಾಗಿರುವ ಕಡಿಮೆ ತೀವ್ರತೆಯ ಸ್ಫೋಟಕಗಳು ಸೂಚಿಸಿವೆ. ಸುಧಾರಿತ ಸ್ಫೋಟಕಗಳ ತಯಾರಿಕೆಯಲ್ಲಿ ಬಳಕೆಯಾಗುವ ಗಂಧಕ,ಪೊಟ್ಯಾಷಿಯಂ ನೈಟ್ರೇಟ್(Potassium nitrate), ,ಅಲ್ಯುಮಿನಿಯಂ ಪುಡಿ (aluminum powder) ಮತ್ತು ಇದ್ದಿಲು(charcoal) ಆತನ ಮನೆಯಿಂದ ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ ಸೇರಿವೆ ಎಂದು ಡಿಜಿಪಿ ತಿಳಿಸಿದರು.

ಮುಬಿನ್ ಇಂಜಿನಿಯರಿಂಗ್ ಪದವೀಧರನಾಗಿದ್ದು, 2019ರಲ್ಲಿ ಶ್ರೀಲಂಕಾದಲ್ಲಿ ಈಸ್ಟರ್ (Easter)ರವಿವಾರದಂದು ಸಂಭವಿಸಿದ್ದ ಆತ್ಮಹತ್ಯಾ ಸ್ಫೋಟಗಳ ರೂವಾರಿ ಝಹ್ರಾನ್ ಹಾಶಿಂ ಜೊತೆ ನಂಟಿನ ಕುರಿತು ಆತನನ್ನು ಎನ್ಐಎ(NIA) ಪ್ರಶ್ನಿಸಿತ್ತು. ಆತ್ಮಹತ್ಯಾ ದಾಳಿಗಳಲ್ಲಿ ಸುಮಾರು 270 ಜನರು ಮೃತಪಟ್ಟಿದ್ದರು. ಆದರೆ,ಮುಬಿನ್ ವಿರುದ್ಧ ಎಂದೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ನಗರದಲ್ಲಿ ಸಂಭವಿಸಿದ ಕಾರು ಸ್ಫೋಟದಲ್ಲಿ ಮೃತಪಟ್ಟ ಜೆಮಿಶಾ ಮುಬೀನ್ ಮನೆಯಿಂದ ವ್ಯಕ್ತಿಗಳ ಗುಂಪೊಂದು ಗೋಣಿ ಚೀಲವೊಂದನ್ನು ಕೊಂಡೊಯ್ಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಕಾರು ಸ್ಫೋಟದ ಪ್ರಕರಣದ ತನಿಖೆಯನ್ನು ತಮಿಳುನಾಡು ಪೊಲೀಸರು ಸೋಮವಾರ ತೀವ್ರಗೊಳಿಸಿದ್ದಾರೆ.

ಮುಬೀನ್ ಮನೆಯಲ್ಲಿ ಪತ್ತೆಯಾಗಿರುವ ದೇಶಿ ನಿರ್ಮಿತ ಬಾಂಬ್‌ಗಳಲ್ಲಿ  ಪೊಟಾಶಿಯಂ ನೈಟ್ರೇಟ್(Potassium nitrate) ಸೇರಿದಂತೆ ಕಡಿಮೆ ತೀವ್ರತೆಯ ಸ್ಫೋಟ ಸಾಮಗ್ರಿಗಳು  ಸೇರಿದ್ದವು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಿ. ಶೈಲೇಂದ್ರ ಬಾಬು ಅವರು ರವಿವಾರ ಹೇಳಿದ್ದಾರೆ.

ಮನೆಯ ಸಮೀಪದ ಸಿಸಿಟಿವಿ(CCTV) ದೃಶ್ಯಾವಳಿಯಲ್ಲಿ ಶನಿವಾರ ರಾತ್ರಿ ಸುಮಾರು 11.25ಕ್ಕೆ ಐವರು ಮುಬೀನ್ ಮನೆಯಿಂದ ಗೋಣಿ ಚೀಲವೊಂದನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನನಿಬಿಡ ಹಾಗೂ ಕೋಮು ಸೂಕ್ಷ್ಮತೆಯ ಉಕ್ಕಡಂ ಪ್ರದೇಶದಲ್ಲಿರುವ ಕೊಟ್ಟಾಯಿ ಈಶ್ವರನ್ ದೇವಾಲಯದ ಸಮೀಪ ರವಿವಾರ ಬೆಳಗ್ಗೆ ಸುಮಾರು  4 ಗಂಟೆಗೆ ಕಾರಿನಲ್ಲಿ ಸಿಲಿಂಡರ್ ಸ್ಪೋಟ ಸಂಭವಿಸಿತ್ತು ಎಂದು ಅವರು ಹೇಳಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಓರ್ವ ಮುಬೀನ್ ಎಂದು ಗುರುತಿಸಲಾಗಿದೆ. ಉಳಿದ ಸದಸ್ಯರನ್ನು ಗುರುತಿಸಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಬೀನ್‌ನೊಂದಿಗೆ  ಸಂಪರ್ಕ ಹೊಂದಿದ್ದ ಆಧಾರದಲ್ಲಿ 7 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News