ಬಿಜೆಪಿ, ಆರೆಸ್ಸೆಸ್ ದೇಶದಲ್ಲಿ ದ್ವೇಷ ಹರಡುತ್ತಿದೆ: ರಾಹುಲ್ ಗಾಂಧಿ
ಹೈದರಾಬಾದ್, ಅ. 24: ಬಿಜೆಪಿ ಹಾಗೂ ಆರೆಸ್ಸೆಸ್ ದೇಶದಲ್ಲಿ ದ್ವೇಷ ಹರಡುತ್ತಿದೆ ಎಂದು ರವಿವಾರ ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾಮರಸ್ಯ ಹಾಗೂ ಭ್ರಾತೃತ್ವವನ್ನು ಪ್ರಚಾರ ಮಾಡುವ ಉದ್ದೇಶವನ್ನು ‘ಭಾರತ್ ಜೋಡೊ ಯಾತ್ರೆ’ ಹೊಂದಿದೆ ಎಂದು ಹೇಳಿದ್ದಾರೆ.
‘ಭಾರತ್ ಜೋಡೊ ಯಾತ್ರೆ’ ರವಿವಾರ ಬೆಳಗ್ಗೆ ಕರ್ನಾಟಕದಿಂದ ತೆಲಂಗಾಣಕ್ಕೆ ಪ್ರವೇಶಿಸಿದ ಬಳಿಕ ರಾಹುಲ್ ಗಾಂಧಿ, ಈ ಪಾದ ಯಾತ್ರೆ ಬೆಲೆ ಏರಿಕೆ ಹಾಗೂ ನಿರುದ್ಯೋಗವನ್ನು ಕೂಡ ಪ್ರಶ್ನಿಸಲಿದೆ. ‘ಭಾರತ್ ಜೋಡೊ ಯಾತ್ರೆ’ ಬಿಜೆಪಿ-ಆರೆಸ್ಸೆಸ್‌ನ ಸಿದ್ಧಾಂತ, ದ್ವೇಷ ಹಾಗೂ ಹಿಂಸಾಚಾರಕ್ಕೆ ವಿರುದ್ಧವಾದದು ಎಂದು ಹೇಳಿದರು.
ಇಂದು ಎರಡು ಭಾರತ ಅಸ್ತಿತ್ವದಲ್ಲಿದೆ. ಒಂದು ಆಯ್ದ ಕೆಲವರ ಹಾಗೂ ಶ್ರೀಮಂತರ ಭಾರತ, ಇನ್ನೊಂದು ಲಕ್ಷಾಂತರ ಯುವಕರ, ರೈತರ, ಕಾರ್ಮಿಕರ ಹಾಗೂ ಸಣ್ಣ ಉದ್ಯಮಿಗಳ ಭಾರತ ಎಂದು ಅವರು ಹೇಳಿದರು.
‘‘ನಾವು ಎರಡು ಭಾರತವನ್ನು ಬಯಸುತ್ತಿಲ್ಲ. ನಾವು ಒಂದೇ ಭಾರತವನ್ನು ಬಯಸುತ್ತೇವೆ. ಅದರಲ್ಲಿ ಎಲ್ಲರಿಗೂ ನ್ಯಾಯ ಹಾಗೂ ಉದ್ಯೋಗ ದೊರೆಯಬೇಕು. ಅಲ್ಲಿ ಭ್ರಾತೃತ್ವ ಇರಬೇಕು’’ ಎಂದು ಅವರು ಹೇಳಿದರು.
ಇದಕ್ಕಿಂತ ಮೊದಲು ತೆಲಂಗಾಣ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯನ್ನು ಕರ್ನಾಟಕ-ತೆಲಂಗಾಣ ಗಡಿಯಲ್ಲಿ ತೆಲಂಗಾಣದ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.
ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಲೋಕಸಭಾ ಸದಸ್ಯ ಹಾಗೂ ತೆಲಂಗಾಣದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ಮಾಣಿಕ್ಕಂ ಠಾಗೋರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಹಾಗೂ ಪಕ್ಷದ ಹಲವು ನಾಯಕರು ಸ್ವಾಗತಿಸಿದರು.
‘ಭಾರತ್ ಜೋಡೊ ಯಾತ್ರೆ’ ತೆಲಂಗಾಣ ಜಿಲ್ಲೆಯ ನಾರಾಯಣ ಪೇಟೆ ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ಗಡಿಯಾಗಿರುವ ಕೃಷ್ಣಾ ನದಿಯ ಸೇತುವೆಯಲ್ಲಿ ಅಸಂಖ್ಯಾತ ಕಾರ್ಯಕರ್ತರು ಉಪಸ್ಥಿತರಿದ್ದರು.
ದೀಪಾವಳಿ ಹಿನ್ನೆಲೆಯಲ್ಲಿ ‘ಭಾರತ್ ಜೊಡೊ ಯಾತ್ರೆʼ ರವಿವಾರ ಮಧ್ಯಾಹ್ನದಿಂದ ಅಕ್ಟೋಬರ್ 26ರ ವರೆಗೆ ಮೂರು ದಿನಗಳ ಕಾಲ ಇರುವುದಿಲ್ಲ ಎಂದು ತೆಲಂಗಾಣ ಪಿಸಿಸಿ ಶನಿವಾರ ಹೇಳಿದೆ.