ಮುಂಬೈ: ಚಿರತೆ ದಾಳಿಯಲ್ಲಿ ಒಂದೂವರೆ ವರ್ಷದ ಮಗು ಸಾವು
ಮುಂಬೈ, ಅ. 24: ಇಲ್ಲಿನ ಗೊರೆಗಾಂವ್‌ನ ಪಶ್ಚಿಮ ಉಪ ನಗರದ ಆರೆ ಕಾಲನಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಚಿರತೆ ದಾಳಿಗೆ ಒಳಗಾಗಿ ಒಂದೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಆರೆಯಲ್ಲಿ ಬೆಳಗ್ಗೆ ಸುಮಾರು 6.30ಕ್ಕೆ ಸಂಭವಿಸಿದೆ. ಮನೆಯಿಂದ 30 ಅಡಿ ದೂರದಲ್ಲಿರುವ ದೇವಾಲಯಕ್ಕೆ ತೆರಳುತ್ತಿದ್ದ ತಾಯಿಯನ್ನು ಮಗು ಹಿಂಬಾಲಿಸಿದ ಸಂದರ್ಭ ಈ ಘಟನೆ ನಡೆದಿದೆ. ಎಂದು ಆರೇ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಚಿರತೆ ಮಗುವಿನ ಮೇಲೆ ದಾಳಿ ನಡೆಸಿದೆ ಹಾಗೂ ಗಾಯಗೊಳಿಸಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಆಧರಿಸಿ ನಾವು ಪ್ರಕರಣದಲ್ಲಿ ಆಕಸ್ಮಿಕ ಸಾವು ವರದಿ (ADR) ಎಂದು ದಾಖಲಿಸಿದ್ದೇವೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ನಡುವೆ ಈ ಪ್ರದೇಶದಲ್ಲಿ ಮಾನವ ಹಾಗೂ ವನ್ಯ ಜೀವಿ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆ ಕ್ರಿಯಾ ಯೋಜನೆಗಳನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.