×
Ad

ರಕ್ತದ ನಡುವೆ ನೋವಿನಿಂದ ನರಳುತ್ತಿದ್ದ ಬಾಲಕಿ: ಸುತ್ತಲೂ ನಿಂತು ವೀಡಿಯೋ ಮಾಡುತ್ತಿದ್ದ ಜನರು !

Update: 2022-10-25 15:41 IST
Twitter video screengrab

ಲಕ್ನೋ: ಉತ್ತರ ಪ್ರದೇಶದ ಕನೌಜ್‌ನ ಸರ್ಕಾರಿ ಅತಿಥಿ ಗೃಹದ ಬಳಿ ಬಾಲಕಿಯೊಬ್ಬಳು ಗಾಯಗೊಂಡು ರಕ್ತಸ್ರಾವವಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 13 ವರ್ಷದ ಬಾಲಕಿ ಪ್ರಜ್ಞಾಹೀನಳಾಗಿದ್ದು, ರವಿವಾರ ಮನೆಯಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ಆಕೆ ರಕ್ತದಲ್ಲಿ ಮಡುವಿನಲ್ಲಿ ಮುಳುಗಿದ್ದಳು ಎಂದು ndtv.com ವರದಿ ಮಾಡಿದೆ.

ಆಕೆಯ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ ಆದರೆ ವೈದ್ಯಕೀಯ ವರದಿ ಇನ್ನೂ ಲಭ್ಯವಾಗಿಲ್ಲ.

 
ಹುಡುಗಿ ನೋವಿನಿಂದ ತೊಳಲಾಡುತ್ತಿರುವ ವಿಡಿಯೋ ವೈರಲ್‌ ಆಗಿದ್ದು,  ಜನರ ಗುಂಪು ಆಕೆಯ ಸುತ್ತಲೂ ನಿಂತು ಫೋನ್‌ಗಳಲ್ಲಿ ವಿಡಿಯೋ ಚಿತ್ರೀಕರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. 25 ಸೆಕೆಂಡುಗಳ ಆ ವೀಡಿಯೊದಲ್ಲಿ, ಅಲ್ಲಿ ನೆರೆದಿದ್ದವರು ಹುಡುಗಿಗೆ ಸಹಾಯ ಮಾಡುವ ಯಾವುದೇ ಪ್ರಯತ್ನ ಕಂಡು ಬಂದಿಲ್ಲ.

ವೈರಲ್ ಆಗಿರುವ ಎರಡನೇ ವೀಡಿಯೊದಲ್ಲಿ, ಗಾಯಗೊಂಡ ಹುಡುಗಿಯನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ಪೊಲೀಸ್ ಸಿಬ್ಬಂದಿಯೊಬ್ಬರು ಆಟೋರಿಕ್ಷಾಕ್ಕೆ ಓಡುತ್ತಿರುವುದನ್ನು ತೋರಿಸಿದೆ.

ಬಾಲಕಿ, ರವಿವಾರ ಮಧ್ಯಾಹ್ನ ಪಿಗ್ಗಿ ಬ್ಯಾಂಕ್ ಅನ್ನು ಬದಲಾಯಿಸಲು ಮನೆಯಿಂದ ಹೊರಟಿದ್ದು, ಐದು ಗಂಟೆಗಳ ಕಾಲ ಹಿಂತಿರುಗಲಿಲ್ಲ ಎಂದು ಆಕೆಯ ಚಿಕ್ಕಪ್ಪ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಅತಿಥಿ ಗೃಹದ ಬಳಿಯ ಪೊದೆಯಲ್ಲಿ ಆಕೆಯನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅವಳು ಪ್ರಜ್ಞಾಹೀನಳಾಗಿದ್ದಳು ಮತ್ತು ತಲೆಗೆ ಗಂಭೀರವಾದ ಗಾಯ ಸೇರಿದಂತೆ ಅನೇಕ ಗಾಯಗಳು ದೇಹದ ಮೇಲಿದ್ದವು. ಆಕೆಯ ಕುಟುಂಬದವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರಬಹುದು ಎಂದು ಶಂಕಿಸಿದ್ದಾರೆ.

ಸಿಸಿಟಿವಿಯಲ್ಲಿ ಕಂಡು ಬಂದ ದೃಶ್ಯದಲ್ಲಿ ಆಕೆಯೊಂದಿಗೆ ಒಬ್ಬ ವ್ಯಕ್ತಿ ಮಾತನಾಡುತ್ತಿರುವುದು ಕಂಡು ಬಂದಿದೆ. ಸದ್ಯ ಆ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಆತ ಆಕೆಯನ್ನು ಅತಿಥಿ ಗೃಹಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ.

"ಅಪ್ರಾಪ್ತ ಬಾಲಕಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯ ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News