×
Ad

ಅರುಣಾಚಲ ಪ್ರದೇಶ: ಮಾರ್ಕೆಟ್‌ನಲ್ಲಿ ಭಾರೀ ಅಗ್ನಿ ಅವಘಡ; 700 ಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮ

Update: 2022-10-25 17:36 IST
Twitter/@ndtv

ಇಟಾನಗರ್: ಅರುಣಾಚಲ ಪ್ರದೇಶದ (Arunachal Pradesh) ರಾಜಧಾನಿ ಇಟಾನಗರ್‌ (Itanagar) ಸಮೀಪದ ನಹರ್ಲಗುನ್‌ ಡೈಲಿ ಮಾರ್ಕೆಟ್‌ನಲ್ಲಿ ಇಂದು ಉಂಟಾದ ಭಾರೀ ಅಗ್ನಿ ಅವಘಡದಲ್ಲಿ 700 ಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಇಂದು ಮುಂಜಾನೆ ಸುಮಾರು 4 ಗಂಟೆಗೆ ಈ ಅವಘಡ ಸಂಭವಿಸಿದೆ ಆದರೆ ಯಾವುದೇ ಸಾವುನೋವು ಉಂಟಾದ ಬಗ್ಗೆ ವರದಿಯಾಗಿಲ್ಲ.

ಪಟಾಕಿಗಳು ಅಥವಾ ಹಣತೆಗಳಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಬೆಂಕಿ ನಂದಿಸಲು ಸಹಾಯಕ್ಕಾಗಿ ಹತ್ತಿರದಲ್ಲಿಯೇ ಇದ್ದ ಅಗ್ನಿಶಾಮಕ ಕಚೇರಿಗೆ ತೆರಳಿದರೂ ಅಲ್ಲಿ ಯಾವುದೇ ಅಧಿಕಾರಿ ಉಪಸ್ಥಿತರಿಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನಗಳಲ್ಲಿ ನೀರಿರಲಿಲ್ಲ ಎಂದು ಅಂಗಡಿ ಮಾಲೀಕರು ದೂರಿದ್ದಾರೆ.

ಅಗ್ನಿಶಾಮಕ ವಾಹನಗಳು 5 ಗಂಟೆ ಹೊತ್ತಿಗೆ ಆಗಮಿಸುವ ವೇಳೆ ಅಂಗಡಿಗಳೆಲ್ಲಾ ಸುಟ್ಟು ಭಸ್ಮವಾಗಿದ್ದವು. ಪೊಲೀಸರೂ ಯಾವುದೇ ಸಹಾಯ ಮಾಡಿಲ್ಲ ಎಂದು ತಮ್ಮ ಅಂಗಡಿಗಳನ್ನು ಕಳೆದುಕೊಂಡಿರುವ ವರ್ತಕರು ದೂರಿದ್ದಾರೆ.

ನಿರ್ಲಕ್ಷ್ಯಕ್ಕಾಗಿ ಅಗ್ನಿಶಾಮಕ ಕಚೇರಿಯ ಎಲ್ಲಾ ಸಿಬ್ಬಂದಿಯನ್ನೂ ಸೇವೆಯಿಂದ ವಜಾಗೊಳಿಸಬೇಕೆಂದು ಅರುಣಾಚಲ ಪ್ರದೇಶ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ತರ್ಹ್‌ ನಚುಂಗ್‌ ಆಗ್ರಹಿಸಿದ್ದಾರೆ.

ನಗರ್ಲಗುನ್‌ ಡೈಲಿ ಮಾರ್ಕೆಟ್‌ ಅರುಣಾಚಲ ಪ್ರದೇಶದ ಅತ್ಯಂತ ಹಳೆಯ ಮಾರುಕಟ್ಟೆಯಾಗಿದ್ದು ಇಲ್ಲಿನ ಮಳಿಗೆಗಳನ್ನು ಬಿದಿರು ಹಾಗೂ ಕಟ್ಟಿಗೆ  ಬಳಸಿ ನಿರ್ಮಿಸಲಾಗಿತ್ತು.

ಇದನ್ನೂ ಓದಿ: ಶಾಸಕ ಯತ್ನಾಳ್​ಗೆ​ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ: ಅಸದುದ್ದೀನ್ ಉವೈಸಿ ವಾಗ್ದಾಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News