ನೋಟುಗಳಲ್ಲಿ ಲಕ್ಷ್ಮೀ ದೇವಿ, ಗಣೇಶ ಫೋಟೊಗಳನ್ನು ಅಳವಡಿಸುವಂತೆ ಪ್ರಧಾನಿ ಮೋದಿಗೆ ಕೇಜ್ರಿವಾಲ್‌ ಮನವಿ

Update: 2022-10-26 07:14 GMT

ಹೊಸದಿಲ್ಲಿ: ಹೊಸ ನೋಟುಗಳ ಮೇಲೆ ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳನ್ನು ಅಳವಡಿಸುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಹೊಸ ಕರೆನ್ಸಿ ನೋಟುಗಳಲ್ಲಿ ಒಂದು ಬದಿಯಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಅಳವಡಿಸಬಹುದು ಎಂದು ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಕರೆನ್ಸಿ ನೋಟುಗಳ ಮೇಲೆ ಎರಡು ದೇವತೆಗಳ ಚಿತ್ರಗಳಿರುವುದು ದೇಶದ ಏಳಿಗೆಗೆ ಸಹಾಯ ಮಾಡುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

" ನಾವು ಪ್ರಯತ್ನಗಳನ್ನು ಮಾಡಿದರೂ, ಕೆಲವೊಮ್ಮೆ ದೇವರು ಮತ್ತು ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ನಮ್ಮ ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಹೊಂದುವಂತೆ ನಾನು ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ" ಎಂದು ಅವರು ಹೇಳಿದರು.

ಕೇಜ್ರಿವಾಲ್ ಅವರು ಕರೆನ್ಸಿ ನೋಟಿನಲ್ಲಿ ಭಗವಾನ್ ಗಣೇಶನ ಚಿತ್ರವನ್ನು ಹೊಂದಿರುವ ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾದ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ . "ಇಂಡೋನೇಷ್ಯಾಗೆ ಇದು ಸಾಧ್ಯವಾಗುವುದಾದರೆ, ನಮಗೆ ಏಕೆ ಸಾಧ್ಯವಿಲ್ಲ? ಎಂದು ಅವರು ಪ್ರಶ್ನಿಸಿದರು.

ಇಂಡೋನೇಷ್ಯಾದ 20,000 ರೂಪಾಯಿ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲಾಗಿದೆ. ಈ ಕುರಿತು ಇನ್ನೆರಡು ದಿನಗಳಲ್ಲಿ ಪ್ರಧಾನಿಗೆ ಪತ್ರ ಬರೆಯುವುದಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News