ವಾಟ್ಸ್ಯಾಪ್ ಸೇವಾ ವ್ಯತ್ಯಯಕ್ಕೆ ಕಾರಣ ತಿಳಿಸಿದ ಮೆಟಾ ಸಂಸ್ಥೆ ಹೇಳಿದ್ದೇನು?

Update: 2022-10-26 08:26 GMT
PHOTO: PTI

ಹೊಸದಿಲ್ಲಿ: ಭಾರತ ಸಹಿತ ಹಲವು ದೇಶಗಳಲ್ಲಿ ಮಂಗಳವಾರ ವಾಟ್ಸ್ಯಾಪ್ ಸಂದೇಶ ಸೇವೆಗಳಲ್ಲಿ ಸುಮಾರು ಎರಡು ಗಂಟೆಗಳ ಕಾಲ ಉಂಟಾದ ವ್ಯತ್ಯಯದ ಕುರಿತಂತೆ ವಾಟ್ಸ್ಯಾಪ್‍ನ ಮಾತೃ ಸಂಸ್ಥೆಯಾದ ಮೆಟಾ ಈಗ ಸ್ಪಷ್ಟೀಕರಣ ನೀಡಿದೆ.

"ನಮ್ಮಲ್ಲಿ ಉಂಟಾದ ತಾಂತ್ರಿಕ ದೋಷದ ಪರಿಣಾಮ ಸೇವೆಯಲ್ಲಿ ವ್ಯತ್ಯಯವುಂಟಾಗಿತ್ತು, ಸಮಸ್ಯೆ ಈಗ ಪರಿಹಾರಗೊಂಡಿದೆ" ಎಂದು ಮಾಧ್ಯಮವೊಂದಕ್ಕೆ ನೀಡಿದ ವಿವರಣೆಯಲ್ಲಿ ಮೆಟಾ ವಕ್ತಾರರು ಹೇಳಿದ್ದಾರೆ.

ಆದರೆ ತಾಂತ್ರಿಕ ಸಮಸ್ಯೆಗೆ ಕಾರಣವೇನೆಂಬ ಕುರಿತಂತೆ ಸಮಸ್ಥೆ ಹೆಚ್ಚಿನ ಮಾಹಿತಿ ನೀಡಿಲ್ಲ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸುಮಾರು ಆರು ಗಂಟೆಗಳ ಕಾಲ ವಾಟ್ಸ್ಯಾಪ್ ಸೇವೆಯಲ್ಲಿ ವ್ಯತ್ಯಯವುಂಟಾಗಿದ್ದ ವೇ:ಳೆ ಕಂಪೆನಿ ಡಿಎನ್‍ಎಸ್ (ಡೊಮೇನ್ ನೇಮ್ ಸಿಸ್ಟಂ) ಕುರಿತ ಸಮಸ್ಯೆ ಎಂದು ಹೇಳಿತ್ತು ಹಾಗೂ ತನ್ನ ಬ್ಲಾಗ್‍ನಲ್ಲಿ ವಿವರಣೆ ಕೂಡ ನೀಡಿತ್ತು.

ಆದರೆ ಮಂಗಳವಾರದ ಸೇವಾ ವ್ಯತ್ಯಯ ಕೂಡ ಇದೇ ಸಮಸ್ಯೆಯಿಂದ ಆಗಿರಬಹುದೆಂದು ಅಂದಾಜಿಸಲಾಗಿದೆಯಾದರೂ ಸಂಸ್ಥೆ ಈ ಕುರಿತು ಮಾಹಿತಿ ನೀಡಿಲ್ಲ.

ಮಂಗಳವಾರ ಅಪರಾಹ್ನ 12.30 ರ ಹೊತ್ತಿಗೆ ಉಂಟಾದ ಸಮಸ್ಯೆ 2.30ರ ವೇಳೆಗೆ ಪರಿಹಾರಗೊಂಡಿತ್ತು. ಈ ಅವಧಿಯಲ್ಲಿ ವಾಟ್ಸ್ಯಾಪ್ ಬಳಕೆದಾರರಿಗೆ ಸಂದೇಶ ಕಳುಹಿಸುವುದು ಮತ್ತು ಸ್ವೀಕರಿಸುವುದು ಅಸಾಧ್ಯವಾಗಿತ್ತು. ಆಡಿಯೋ ಮತ್ತು ವೀಡಿಯೋ ಕರೆಗಳನ್ನೂ ಮಾಡುವುದು ಅಸಾಧ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News