ಡಾಲಿ ಧನಂಜಯ್‌ ರ ʼಹೆಡ್‌ಬುಶ್‌ʼ ಸಿನಿಮಾ ಕುರಿತು ವಿವಾದ: ನಟ ಧನಂಜಯ್ ಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ

Update: 2022-10-26 14:14 GMT

ಚರ್ಚ್‌ ನ ಪಾದ್ರಿ ಅಥವಾ ಒಬ್ಬ ಮೌಲ್ವಿ ಬಟ್ಟೆ ಹಾಕಿಸಿ, ವಿಲನ್ ರೋಲ್ ಕೊಟ್ಟು ಫೈಟಿಂಗ್ ಸೀನ್ ಮಾಡೋ ತಾಕತ್ ಇದಿಯಾ
ಇವರಿಗೆ.
ಪ್ರತಿ ಬಾರಿ ಹಿಂದೂಗಳ ಭಾವನೆಗಳಿಗೆ ದಕ್ಕೆ ಮತ್ತು ಹಿಂದೂ ದೇವರುಗಳೇ ಟಾರ್ಗೆಟ್ ಈ ಎಡಚರಿಗೆ.#BoycottHeadBush

— ಶಕುಂತಲ/ Shakunthala (@ShakunthalaHS) October 25, 2022

ಬೆಂಗಳೂರು: ಡಾಲಿ ಧನಂಜಯ್‌ ನಟನೆಯ ಮತ್ತು ನಿರ್ಮಾಣದ ಹೆಡ್‌ ಬುಶ್‌ ಚಿತ್ರ ಈಗಾಗಲೇ ರಾಷ್ಟ್ರಾದ್ಯಂತ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಅಗ್ನಿ ಶ್ರೀಧರ್‌ ಬರೆದ ಕಥೆಯನ್ನು ಅಧರಿಸಿ ಡಾನ್‌ ಜಯರಾಜ್‌ ಕುರಿತು ಈ ಸಿನಿಮಾ ತಯಾರಿಸಲಾಗಿತ್ತು. ಇದೀಗ ಈ ಸಿನಿಮಾದ ಕುರಿತು ಬಲಪಂಥೀಯರು ಹಾಗೂ ಹಿಂದುತ್ವ ಸಂಘಟನೆಗಳು ವಿವಾದವೆಬ್ಬಿಸಿದ್ದು, ಹೆಡ್‌ಬುಶ್‌ ಚಿತ್ರದಲ್ಲಿ ಬೆಂಗಳೂರು ಕರಗಕ್ಕೆ ಮತ್ತು ವೀರಗಾಸೆ ನೃತ್ಯಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪಗಳನ್ನು ಚಿತ್ರತಂಡ ಅಲ್ಲಗಳೆದಿದೆ. 

ಹಲವಾರು ಮಂದಿ ಬಲಪಂಥೀಯರು ಸಾಮಾಜಿಕ ತಾಣದಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರದಲ್ಲಿ ವೀರಗಾಸೆ ನೃತ್ಯಗಾರನಿಗೆ ಹೊಡೆಯುವ ದೃಶ್ಯವಿದೆ ಮತ್ತು ಬೆಂಗಳೂರು ಕರಗಕ್ಕೆ ಅವಮಾನವಾಗುವಂತೆ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.  ಈ ನಡುವೆ ಹಲವಾರು ಸಿನಿಮಾಭಿಮಾನಿಗಳು ಧನಂಜಯ್‌ ಬೆಂಬಲಕ್ಕೆ ನಿಂತಿದ್ದು, #WeStandWithDhananjay ಮತ್ತು #IStandWithDhananjay ಹ್ಯಾಶ್‌ಟ್ಯಾಗ್‌ ಟ್ವಿಟರ್‌ ನಲ್ಲಿ ಟ್ರೆಂಡಿಂಗ್‌ ಆಗಿದೆ.

ಈ ಕುರಿತು ಟ್ವಿಟರ್‌ ನಲ್ಲಿ ಸ್ಪಷ್ಟನೆ ನೀಡಿದ್ದ ಧನಂಜಯ್‌ "ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ" ಎಂದು ತಾವು ಮಾತನಾಡುವ ವೀಡಿಯೊದ ಲಿಂಕ್‌ ಅನ್ನು ಪೋಸ್ಟ್‌ ಮಾಡಿದ್ದರು. 

ಹಿಂದುತ್ವ ಸಂಘಟನೆಗಳು ವಿವಾದವೆಬ್ಬಿಸುತ್ತಿದ್ದಂತೆಯೇ ಹಲವಾರು ಕನ್ನಡ ಸಿನಿಮಾಭಿಮಾನಿಗಳು ಧನಂಜಯ್‌ ಬೆಂಬಲಕ್ಕೆ ನಿಂತಿದ್ದು, "ಮಾನವೀಯತೆಯ ಮಾತುಗಳನ್ನಾಡುವುದು ತಪ್ಪು ಹೇಗಾಗುತ್ತದೆ" ಎಂದು ಪ್ರಶ್ನಿಸಿದ್ದಾರೆ. "ಅವರು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾಜವಾದ ಮತ್ತು ಜಾತ್ಯತೀತತೆಯನ್ನು ನಂಬುತ್ತಾರೆ. ನಾನು ಡಾಲಿ ಜೊತೆ ನಿಲ್ಲುತ್ತೇನೆ, ಹೆಡ್‌ಬುಶ್‌ ಸಿನಿಮಾವನ್ನು ಬೆಂಬಲಿಸುತ್ತೇನೆ" ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

"ಸಿನಿಮಾದೊಂದಿಗೆ ಧರ್ಮವನ್ನು ಎಳೆದು ತರುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ ಆಗಿದೆ. ಇಂತಹಾ ವಿವಾದಗಳ ಕುರಿತು ತಲೆಕೆಡಿಸಿಕೊಳ್ಳಬೇಡಿ. ಚಿತ್ರರಂಗದಲ್ಲಿ ತಮ್ಮ ಶ್ರಮ ಮತ್ತು ಏಳುಬೀಳುಗಳನ್ನು ಕಂಡಿರುವ ನಾವು ನಿಮ್ಮನ್ನು ಸದಾ ಬೆಂಬಲಿಸುತ್ತೇವೆ" ಎಂದು ಇನ್ನೋರ್ವ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ. 

ಈ ಕುರಿತು ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿರುವ ಸಿನಿಮಾ ಗೀತೆ ರಚನೆಕಾರ ಕವಿರಾಜ್‌, "ಯಶ್ , ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ, ಸೃಜನಶೀಲ ಯುವ ನಟ . ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಒಂದು ಕಲೆ. ನಿರ್ದೇಶಕನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ‌. ಬಣ , ಪಂಥಗಳ ಆಧಾರದ ದ್ವೇಷದಲ್ಲಿ ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು. ಜನರಲ್ ಆಗಿ‌, ಗೈಡ್ ಲೈನ್ಸ್ ಅನುಸಾರ ಅಸಮ್ಮತ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸದಂತೆ ತಡೆಯಲು ಸರ್ಕಾರವೇ ನೇಮಿಸಿರುವ ಸೆನ್ಸಾರ್ ಮಂಡಳಿ ಇದೆ.

ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು  ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಯಾವುದೋ ಪರಭಾಷಾ‌ ಹಾಡಿನ ಟ್ಯೂನಿಗೆ ಹೋಲಿಕೆ ಇರುವ ಕಾರಣಕ್ಕೆ ಕಾಂತಾರ ಚಿತ್ರದ ಹಾಡಿಗೆ ಅಪಪ್ರಚಾರ ಮಾಡುತ್ತಿರುವವರಿಗೂ ಇದೇ ಮಾತು ಅನ್ವಯಿಸುತ್ತೆ . ಆ ಹಾಡುಗಳಲ್ಲಿ ಕೆಲವು ಸಾಮ್ಯತೆ ಇರಬಹುದೇ ಹೊರತು , ಇದು ಅದರ ನಕಲು ಖಂಡಿತಾ ಅಲ್ಲ ಎಂಬುದು ಎರಡು ದಶಕಕ್ಕು ಹೆಚ್ಚು ಕಾಲ ಒಬ್ಬ ಗೀತರಚನಾಕಾರನಾಗಿರುವ ನನ್ನ ಖಚಿತ ನಿಲುವು.

ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ ,ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮತ್ತು ಹೆಡ್ ಬುಷ್ ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ." ಎಂದು ಹೇಳಿದ್ದಾರೆ.

ಈ ಹಿಂದೆ ಹಿಂದುತ್ವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯ ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸಿದ್ದ ಧನಂಜಯ್‌ "ಏನಾದರೂ ಆಗು ಮೊದಲು ಮಾನವನಾಗು" ಎಂದು ಟ್ವೀಟಿಸಿದ್ದರು. ವಿವಾದದ ಈ ಸಂದರ್ಭದಲ್ಲಿ ಈ ಟ್ವೀಟ್‌ ಅನ್ನೂ ಎಳೆದು ತರಲಾಗಿದ್ದು, ಧನಂಜಯ್‌ ರ ಮಾನವೀಯ ನಿಲುವುಗಳಿಗಾಗಿ ಅವರನ್ನು ಗುರಿಪಡಿಸಲಾಗುತ್ತಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.. ಸದ್ಯ ಹೆಡ್‌ ಬುಶ್‌ ಚಿತ್ರ ವಿಶ್ವದಾದ್ಯಂತ ಹಲವು ಸಿನಿಮಾ ಥಿಯೇಟರ್‌ ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News