ಕಾರ್‌ ಪಾರ್ಕಿಂಗ್‌ ವಿಚಾರದಲ್ಲಿ ಜಗಳ, ಕೊಲೆಯಲ್ಲಿ ಅಂತ್ಯ: ವಿಡಿಯೋ ವೈರಲ್

Update: 2022-10-26 15:35 GMT

ಹೊಸದಿಲ್ಲಿ: ಗಾಜಿಯಾಬಾದ್‌ನ ಉಪಾಹಾರ ಗೃಹದ ಹೊರಗೆ ವಾಹನ ನಿಲುಗಡೆ ಮಾಡುವ ವಿಚಾರವಾಗಿ ನಡೆದ ಜಗಳವು 35 ವರ್ಷದ ವ್ಯಕ್ತಿಯೊಬ್ಬರನ್ನು ರಸ್ತೆಬದಿಯಲ್ಲಿ ಹತ್ಯೆಗೈಯುವಲ್ಲಿ ಕೊನೆಯಾಗಿದೆ ಎಂದು ndtv.com ವರದಿ ಮಾಡಿದೆ.

ಘಟನೆಯ ಭೀಕರ ವಿಡಿಯೋವನ್ನು ದಾರಿಹೋಕರು ರೆಕಾರ್ಡ್ ಮಾಡಿದ್ದು, ವಿಡಿಯೋದಲ್ಲಿ ಆರೋಪಿ ಸಂತ್ರಸ್ತ ವರುಣ್ ಅನ್ನು ಹೊಡೆಯುವುದನ್ನು ತೋರಿಸಿದೆ.

ವರುಣ್ ಉಪಾಹಾರ ಗೃಹದ ಹತ್ತಿರ ವಾಸಿಸುತ್ತಿದ್ದು, ಡೈರಿ ವ್ಯಾಪಾರವನ್ನು ನಡೆಸುತ್ತಿದ್ದರು. ಅವರ ತಂದೆ ದಿಲ್ಲಿಯ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದಾರೆ.

ನಿನ್ನೆ ರಾತ್ರಿ ವರುಣ್ ತನ್ನ ಕಾರನ್ನು ಉಪಾಹಾರ ಗೃಹದ ಹೊರಗೆ ನಿಲ್ಲಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಕ್ಕದ ವಾಹನದ ಬಾಗಿಲು ತೆರೆಯಲು ಸಾಧ್ಯವಾಗದ ರೀತಿಯಲ್ಲಿ ಕಾರು ನಿಲ್ಲಿಸಲಾಗಿತ್ತು. ಇದು ವರುಣ್ ಮತ್ತು ಇನ್ನೊಂದು ಕಾರಿನಲ್ಲಿದ್ದವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ವಾಗ್ವಾದವು ಸ್ವಲ್ಪದರಲ್ಲೇ ಹೊಡೆದಾಟಕ್ಕೆ ತಿರುಗಿ ವರುಣನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹಲ್ಲೆಗೊಳಗಾದ ವರುಣ್‌ ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐದು ತಂಡಗಳು ಆರೋಪಿಗಳಿಗಾಗಿ ಶೋಧ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಮೃತ ವರುಣ್ ಸಂಬಂಧಿಕರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಿಷ್ಕ್ರಿಯತೆಯನ್ನು ಆರೋಪಿಸಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News