ವಲಸಿಗ ಮುಸ್ಲಿಮರ ವಸ್ತು ಸಂಗ್ರಹಾಲಯ ಉದ್ಘಾಟನೆಗೊಂಡ ಎರಡು ದಿನದಲ್ಲೇ ಸೀಲ್ ಮಾಡಿ ಮುಚ್ಚಿದ ಅಸ್ಸಾಂ ಸರಕಾರ

Update: 2022-10-26 17:49 GMT
Photo credit: timesnownews.com

ಗುವಾಹಟಿ: ಬಾಂಗ್ಲಾದೇಶ ಮೂಲದ ವಲಸಿಗ ಮುಸ್ಲಿಮರ ಸಂಘಟನೆ 'ಮಿಯಾ' ಸ್ಥಾಪಿಸಿದ ಖಾಸಗಿ ಮ್ಯೂಸಿಯಂ ಗೋಲ್ಪರ ಜಿಲ್ಲೆಯ ದಪ್ಕರ್ಭಿತ ಎಂಬಲ್ಲಿ ಉದ್ಘಾಟನೆಗೊಂಡ ಎರಡೇ ದಿನಗಳಲ್ಲಿ ಅಸ್ಸಾಂ ಸರ್ಕಾರ ಅದಕ್ಕೆ ಬೀಗ ಜಡಿದು ಸೀಲ್ ಮಾಡಿದೆ ಎಂದು timesofindia ವರದಿ ಮಾಡಿದೆ.

'ಮಿಯಾ ಮ್ಯೂಸಿಯಂ' ಎಂಬ ಈ ಮ್ಯೂಸಿಯಂ ಲಖೀಪುರ್ ಪ್ರದೇಶದಲ್ಲಿದ್ದು ಜಿಲ್ಲಾಡಳಿತ ಅದನ್ನು ಮುಚ್ಚಲು ಕ್ರಮಕೈಗೊಂಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣ್ ಇದರಂಗವಾಗಿ ನಿರ್ಮಾಣಗೊಂಡ ಮನೆಯೊಂದರಲ್ಲಿ ಈ ಮ್ಯೂಸಿಯಂ ಅಕ್ರಮವಾಗಿ ತೆರೆಯಲಾಗಿದೆ ಎಂಬ ಕಾರಣಕ್ಕೆ ಅದನ್ನು ಸೀಲ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಮನೆಯ ಮಾಲಕ, ಸರ್ಕಾರಿ ಶಾಲಾ ಶಿಕ್ಷಕನಾಗಿರುವ ಮೊಹರ್ ಅಲಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲಿ ಅದಾಗಲೇ ತನ್ನ 'ಸರ್ಕಾರ ವಿರೋಧಿ' ಚಟುವಟಿಕೆಗಳಿಗಾಗಿ ಸೇವೆಯಿಂದ ಅಮಾನತುಗೊಂಡವರಾಗಿದ್ದಾರೆ. ಅಷ್ಟೇ ಅಲ್ಲದೆ ಅಲಿ ವಿರುದ್ಧ ಈ ಹಿಂದೆ ಯುಎಪಿಎ ವಿರುದ್ಧದ ಹೋರಾಟಕ್ಕಾಗಿಯೂ ಪ್ರಕರಣ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.

"ಮ್ಯೂಸಿಯಂನಲ್ಲಿರುವ ನಂಗೋಲ್ (ನೇಗಿಲು) ಹೇಗೆ ಕೇವಲ ಮಿಯಾಗಳಿಗೆ ಸಂಬಂಧಿಸಿದ್ದಾಗಿದ್ದು, ಅದು ಅಸ್ಸಾಮಿಗಳಿಗೆ ಸೇರಿದ್ದು. ಅಲ್ಲಿ ಮೀನುಗಾರಿಕೆಗೆ ಬಳಸುವ ಉಪಕರಣಗಳನ್ನು ಇರಿಸಲಾಗಿದೆ ಆದರೆ ಅವುಗಳನ್ನು ನಮ್ಮ ಪರಿಶಿಷ್ಟ ಜಾತಿ ಜನರು ಬಹಳ ಹಿಂದಿನಿಂದ ಬಳಸುತ್ತಿದ್ದಾರೆ. ಲುಂಗಿ ಹೊರತುಪಡಿಸಿ ಬೇರೇನೂ ಹೊಸತಿಲ್ಲ. ಇಲ್ಲಿರುವ ಎಲ್ಲಾ ವಸ್ತುಗಳು ಅಸ್ಸಾಂ ಮೂಲನಿವಾಸಿಗಳ ಸಾಂಪ್ರದಾಯಿಕ ಉಪಕರಣಗಳು,'' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ ಬೆನ್ನಲ್ಲೇ ಮ್ಯೂಸಿಯಂಗೆ ಸೀಲ್ ಮಾಡಲಾಗಿರುವುದು ಕುತೂಹಲ ಕೆರಳಿಸಿದೆ.

ಮ್ಯೂಸಿಯಂನಲ್ಲಿರುವ ನಂಗೋಲ್ ವಿಶೇಷವಾಗಿ ಮಿಯಾಗಳೇ ಬಳಸುತ್ತಾರೆ, ಅಸ್ಸಾಮಿ ಜನರಲ್ಲ ಎಂದು ಅಲ್ಲಿನ ಆಡಳಿತ ಸಾಬೀತುಪಡಿಸಬೇಕು ಎಂದೂ ಸಿಎಂ ಹೇಳಿದ್ದರು.

ಮಿಯಾ ಮ್ಯೂಸಿಯಂ ಅನ್ನು ಅಸ್ಸೋಂ-ಮಿಯಾ (ಅಸ್ಸೋಮಿಯಾ) ಪರಿಷದ್ ಸ್ಥಾಪಿಸಿದ್ದು ಮೊಹರ್ ಅಲಿ ಅದರ ಅಧ್ಯಕ್ಷರಾಗಿದ್ದಾರೆ, ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಬಾತೇನ್ ಶೇಖ್ ಎಂಬವರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಮಿಯಾ ಮ್ಯೂಸಿಯಂ ಮತೀಯ ಸಾಮರಸ್ಯವನ್ನು ಹದಗೆಡಿಸುತ್ತದೆ ಹಾಗೂ ಕೋಮು ದ್ವೇಷವನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಲಾಗಿದೆ.

ಮ್ಯೂಸಿಯಂ ಅನ್ನು ಸೀಲ್ ಮಾಡಲು ಮ್ಯಾಜಿಸ್ಟ್ರೇಟ್ ಆಗಮಿಸುವ ಮೊದಲೇ ಅಲ್ಲಿದ್ದ ಎಲ್ಲಾ ವಸ್ತುಗಳನ್ನು ಸ್ಥಳೀಯರು ಕೊಂಡೊಯ್ದಿದ್ದಾರೆ ಎಂದು ಗೋಲ್ಪುರ ಜಿಲ್ಲಾಧಿಕಾರಿ ಖನೀಂದ್ರ ಚೌಧುರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News