×
Ad

ಹವಾಮಾನ ಮಾತುಕತೆ ಬಗ್ಗೆ ಟೊಳ್ಳು ಘೋಷಣೆ ಬೇಡ: ಶ್ರೀಮಂತ ದೇಶಗಳಿಗೆ ಚೀನಾ ಆಗ್ರಹ

Update: 2022-10-27 21:46 IST

ಬೀಜಿಂಗ್, ಅ.27: ಹವಾಮಾನ ಬದಲಾವಣೆಯ ವಿಷಯಕ್ಕೆ ಬಂದಾಗ  ಶ್ರೀಮಂತ ದೇಶ(A rich country)ಗಳು ಟೊಳ್ಳು ಘೋಷಣೆಯ ಬದಲು ಹಣಕಾಸಿನ ಬದ್ಧತೆಗಳನ್ನು ಪೂರೈಸುವಲ್ಲಿ ಪ್ರಗತಿ ಸಾಧಿಸಬೇಕು ಎಂದು ಚೀನಾ (China)ಆಗ್ರಹಿಸಿದೆ.

ಗುರಿಗಳನ್ನು ಇರಿಸಿಕೊಳ್ಳುವುದು ಮುಖ್ಯ, ಆದರೆ ಗುರಿಗಳನ್ನು ಕ್ರಿಯೆಯಾಗಿ ಪರಿವರ್ತಿಸುವುದು ಅದಕ್ಕಿಂತಲೂ ಮುಖ್ಯವಾಗಿದೆ ಎಂದು ಚೀನಾದ ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವಾಲಯದ ಹವಾಮಾನ  ಬದಲಾವಣೆ ಘಟಕದ ಮುಖ್ಯಸ್ಥ ಲಿ ಗುವಾವೊ (Guavao)ಹೇಳಿದ್ದಾರೆ.

ಹವಾಮಾನ ವೈಪರೀತ್ಯ ಸಮಸ್ಯೆಯ ನಿಗ್ರಹದ ಕುರಿತ ಜಾಗತಿಕ ಮಟ್ಟದ ನಿರ್ಣಾಯಕ ಸಭೆ ಈಜಿಪ್ಟ್ನಲ್ಲಿ ನವೆಂಬರ್ 6ರಂದು ಆರಂಭಗೊಳ್ಳಲಿದ್ದು, ಬೀಜಿಂಗ್ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ  ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಗುವಾವೊ, ಸಿಒಪಿ27 ಎಂಬ ಹೆಸರಿನ ಈ ಸಭೆಯಲ್ಲಿ ದೇಶಗಳು ನೈಜ ಹೆಬ್ಬಯಕೆಯನ್ನು ತೋರಿಸಬೇಕಿದೆ.  ಟೊಳ್ಳು ಘೋಷಣೆ ಬದಿಗಿಟ್ಟು ನಿರ್ಣಾಯಕ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ ಎಂದರು. ಅಭಿವೃದ್ಧಿಶೀಲ ದೇಶಗಳು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ 2020ರ ವೇಳೆಗೆ ವರ್ಷಕ್ಕೆ 100 ಶತಕೋಟಿ ಡಾಲರ್ ನೆರವು ಒದಗಿಸುವುದಾಗಿ 2009ರಲ್ಲಿ ಶ್ರೀಮಂತ ದೇಶಗಳು ವಾಗ್ದಾನ ಮಾಡಿದ್ದವು. ಇದರಲ್ಲಿನ ವಿಳಂಬವು ಪ್ರಗತಿಗೆ ತೀವ್ರ ತೊಡಕಾಗಿದೆ ಮತ್ತು ಪರಸ್ಪರ ವಿಶ್ವಾಸಕ್ಕೆ ಹಾನಿ ಎಸಗಿದೆ ಎಂದ ಅವರು, ವಿಳಂಬಕ್ಕೆ ಕಾರಣದ  ವರದಿಯನ್ನು ಸಭೆಯಲ್ಲಿ ಮಂಡಿಸುವ ಬದಲು,  ತಮ್ಮ ವಾರ್ಷಿಕ ಅನುದಾನದ ಬದ್ಧತೆಯನ್ನು ಸಾಧ್ಯವಾದಷ್ಟು ಬೇಗ ಪೂರೈಸುವಂತೆ ಅಭಿವೃದ್ಧಿ ಹೊಂದಿದ ದೇಶಗಳನ್ನು ಆಗ್ರಹಿಸುತ್ತೇವೆ ಎಂದು ಹೇಳಿದರು.

ಹವಾಮಾನ ಬದಲಾವಣೆ ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ ಅವರು, ಚೀನಾದ ಸೌರ ಫಲಕ ಉದ್ಯಮದ ನಿಗ್ರಹದಿಂದ ಶುದ್ಧ ಶಕ್ತಿಯತ್ತ ಜಾಗತಿಕ  ಬದಲಾವಣೆಗೆ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು. ಚೀನಾ ಮತ್ತು ಇತರೆಡೆಗಳಿಂದ ರಫ್ತು ಆಗುವ ಉತ್ಪನ್ನಗಳಿಗೆ ಕಾರ್ಬನ್ ಸುಂಕ ವಿಧಿಸುವ ಯುರೋಪಿಯನ್ ದೇಶಗಳ ಯೋಜನೆ ನೈತಿಕವಾಗಿ ಅಸಮರ್ಥನೀಯ ಎಂದು ಬಣ್ಣಿಸಿದ ಅವರು, ಹವಾಮಾನ ಬದಲಾವಣೆಯ ಹೆಸರಿನಲ್ಲಿ ಯಾವುದೇ ರೀತಿಯ ವ್ಯಾಪಾರ ಅಥವಾ ತಾಂತ್ರಿಕ ತಡೆಗೋಡೆ ಸ್ಥಾಪಿಸುವುದನ್ನು ವಿರೋಧಿಸುತ್ತೇವೆ  ಎಂದರು.

ಚೀನಾದ ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ ಎಂದು ಆರೋಪಿಸಿರುವ ಅಮೆರಿಕ, ಈ ಪ್ರಾಂತದೊಂದಿಗೆ ಸಂಪರ್ಕ ಇರುವ ಎಲ್ಲಾ ಸೌರ ಸಂಸ್ಥೆಗಳಿಂದ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ. 2030ರ ಒಳಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗರಿಷ್ಟ ಮಟ್ಟಕ್ಕೆ ತರಲು ಮತ್ತು 2060ರ ಒಳಗೆ ಕಾರ್ಬನ್ ತಟಸ್ಥ ದೇಶವಾಗುವ ಬಗ್ಗೆ ಕಳೆದ  ವರ್ಷ ಚೀನಾ ಪ್ರತಿಜ್ಞೆ ಮಾಡಿತ್ತು. ಆದರೆ ಕಲ್ಲಿದ್ದಲ ಬಳಕೆಯನ್ನು ಕಡಿಮೆಗೊಳಿಸುವ ಬಗ್ಗೆ ಚೀನಾದ ಕ್ರಮ ಏನೇನೂ ಸಾಲದು ಎಂಬ ಟೀಕೆಯೂ    ವ್ಯಕ್ತವಾಗಿದೆ. 

Similar News