ಅಫ್ಘಾನಿಸ್ತಾನ ವಿಶ್ವದ ಕನಿಷ್ಟ ಸುರಕ್ಷಿತ ದೇಶ: ಸಮೀಕ್ಷಾ ವರದಿ

ಪಾಕ್ ಗೆ 48ನೇ ಸ್ಥಾನ, ಭಾರತಕ್ಕೆ...

Update: 2022-10-27 17:13 GMT

ಕಾಬೂಲ್, ಅ.27:ತಾಲಿಬಾನ್ (The Taliban) ಆಳ್ವಿಕೆಯಿಂದಾಗಿ ಅಫ್ಘಾನಿಸ್ತಾನ(Afghanistan)ದಲ್ಲಿ ನಿರಂತರ ಮಾನವ ಹಕ್ಕುಗಳ ಉಲ್ಲಂಘನೆಯ ಜತೆಗೇ, ಆ ದೇಶ ವಿಶ್ವದ ಅತ್ಯಂತ ಕನಿಷ್ಟ ಸುರಕ್ಷಿತ ರಾಷ್ಟ್ರವಾಗಿದೆ ಎಂದು ಗ್ಯಾಲಪ್ಸ್ ನ `ಕಾನೂನು ಮತ್ತು ಸುವ್ಯವಸ್ಥೆ' (``Law and Order'')ಶ್ರೇಯಾಂಕದ ಕುರಿತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿಂಗಾಪುರ ಅಗ್ರಸ್ಥಾನ(Singapore tops)ದಲ್ಲಿದ್ದರೆ,  ಭಾರತವು ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕಿಂತ ಕೆಳಗಿನ ಸ್ಥಾನ ಪಡೆದಿದೆ.

ದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ಆಧಾರದ ಮೇಲಿನ ಸಮೀಕ್ಷೆಯಲ್ಲಿ ಸುಮಾರು 120 ದೇಶಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಅಫ್ಘಾನಿಸ್ತಾನವು ಸತತ ಐದು ವರ್ಷ `ಕನಿಷ್ಟ ಶಾಂತಿಯುತ ದೇಶ'ವಾಗಿ ಗುರುತಿಸಿಕೊಂಡ ಬೆನ್ನಲ್ಲೇ ಮತ್ತೊಂದು ಜಾಗತಿಕ ಸಮೀಕ್ಷೆಯಲ್ಲೂ ಅಫ್ಘಾನಿಸ್ತಾನ ಕಳಪೆ ಸಾಧನೆ ತೋರಿದೆ.

ಜನತೆ ತಮ್ಮ ಸಮುದಾಯಗಳಲ್ಲಿ ಹೇಗೆ ಸುರಕ್ಷಿತವಾಗಿದ್ದಾರೆ ಅಥವಾ, ಹಿಂದಿನ ವರ್ಷದಲ್ಲಿ ಕಳ್ಳತನ, ಆಕ್ರಮಣಕ್ಕೆ ಗುರಿಯಾದ ಪ್ರಮಾಣವನ್ನು ಆಧರಿಸಿ ನಡೆಸಲಾಗುವ ಸಮೀಕ್ಷೆಯಲ್ಲಿ ಅಫ್ಘಾನಿಸ್ತಾನ 51 ಅಂಕ ಪಡೆದಿದೆ. ಆದರೆ 2019ಕ್ಕೆ ಹೋಲಿಸಿದರೆ(43 ಅಂಕ) ಇದು ತುಸುಮಟ್ಟಿನ ಸುಧಾರಣೆ ಎನ್ನಬಹುದು.

ಸಮೀಕ್ಷೆಯ ವರದಿ ಪ್ರಕಾರ, ಅಫ್ಘಾನಿಸ್ತಾನ ತಾಲಿಬಾನ್ ನಿಯಂತ್ರಣಕ್ಕೆ ಬಂದ ಬಳಿಕ ಆ ದೇಶದಲ್ಲಿ ರಾತ್ರಿ ವೇಳೆ ನಡೆದಾಡುವುದು ಸುರಕ್ಷಿತವಲ್ಲ ಎಂದು ವರದಿ ಹೇಳಿದೆ. ಭಯೋತ್ಪಾದನೆ ಕೃತ್ಯಗಳು, ದಾಳಿಗಳು, ಸ್ಫೋಟಗಳು, ನಿರಂತರವಾದ ಮಾನವ ಹಕ್ಕು ಉಲ್ಲಂಘನೆಯೊಂದಿಗೆ ನಾಗರಿಕರ ಹತ್ಯೆಗಳು, ಮಸೀದಿ ಮತ್ತು ದೇವಾಲಯಗಳ ಮೇಲೆ ದಾಳಿ, ಮಹಿಳೆಯರ ಮೇಲೆ ಆಕ್ರಮಣ, ಈ ಪ್ರದೇಶದಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಕೃತ್ಯಗಳು ಹೆಚ್ಚಿವೆ. ದೇಶದಲ್ಲಿ  ಮಾನವ ಹಕ್ಕಿನ ಉಲ್ಲಂಘನೆ ಪ್ರಕರಣ ಹೆಚ್ಚಿದ ಜತೆಗೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದಿದೆ.

ವಿಶ್ವದ ಅತ್ಯಂತ ಸುರಕ್ಷಿತ ದೇಶ ಎಂಬ ಹಿರಿಮೆಗೆ 96 ಅಂಕ ಪಡೆದ  ಸಿಂಗಾಪುರ ಪಾತ್ರವಾಗಿದೆ. ತಜಿಕಿಸ್ತಾನ, ನಾರ್ವೆ , ಸ್ವಿಜರ್ಲ್ಯಾಂಡ್, ಇಂಡೋನೇಶ್ಯಾ ಆ ಬಳಿಕದ ಸ್ಥಾನದಲ್ಲಿವೆ. ಯುಎಇ 6ನೇ ಸ್ಥಾನ, ಕೆನಡಾ-7, ಜಪಾನ್-8, ಫ್ರಾನ್ಸ್-9, ಆಸ್ಟ್ರೇಲಿಯಾ-10, ಅಮೆರಿಕ-11ನೇ ಸ್ಥಾನ ಪಡೆದಿದೆ. ಸಿಯೆರಾ ಲಿಯೋನ್, ಕಾಂಗೋ ಗಣರಾಜ್ಯ, ವೆನೆಝುವೆಲ, ಗಾಬನ್ ಮತ್ತು ಅಫ್ಘಾನಿಸ್ತಾನ  ಪಟ್ಟಿಯ ಕೊನೆಯ 5 ಸ್ಥಾನದಲ್ಲಿರುವ ದೇಶಗಳಾಗಿವೆ.

122 ದೇಶಗಳ, 15 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 1,27,000 ಜನರನ್ನು ಸಮೀಕ್ಷೆ ನಡೆಸಲಾಗಿದೆ. ಪ್ರತೀ ದೇಶದಲ್ಲೂ ಸುಮಾರು 1000 ಜನರನ್ನು ಫೋನ್ ಮೂಲಕ ಅಥವಾ ಮುಖತಃ ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ.  ಕಾನೂನು ಜಾರಿ ಮತ್ತು ಭದ್ರತೆಯಲ್ಲಿ ಜನರಿಗೆ ಇರುವ  ವಿಶ್ವಾಸಕ್ಕೆ ಸಂಬಂಧಿಸಿದ 4 ಪ್ರಶ್ನೆಗಳಿಗೆ ಸಿಕ್ಕಿದ ಉತ್ತರವನ್ನು ಆಧರಿಸಿ ಶ್ರೇಯಾಂಕ ಸಿದ್ಧಪಡಿಸಲಾಗಿದೆ.

ನೀವು ವಾಸಿಸುವ  ಸ್ಥಳದಲ್ಲಿ ಸ್ಥಳೀಯ ಪೊಲೀಸರ ಬಗ್ಗೆ ನಿಮಗೆ ವಿಶ್ವಾಸವಿದೆಯೇ, ನಿಮ್ಮ ನಗರದಲ್ಲಿ ರಾತ್ರಿ ವೇಳೆ ತಿರುಗಾಡುವುದು ಸುರಕ್ಷಿತ ಎಂದು ನಿಮಗನಿಸುತ್ತದೆಯೇ, ಕಳೆದ ಒಂದು ವರ್ಷದಲ್ಲಿ ನಿಮ್ಮ ಅಥವಾ ಕುಟುಂಬದ ಸದಸ್ಯರ ಮನೆಯಲ್ಲಿ  ಕಳ್ಳತನವಾಗಿದೆಯೇ, ಕಳೆದ 12 ತಿಂಗಳಲ್ಲಿ ನಿಮ್ಮ ಮೇಲೆ ಹಲ್ಲೆ ನಡೆದಿದೆಯೇ ಅಥವಾ ಬೆದರಿಸಲಾಗಿದೆಯೇ- ಎಂಬ 4 ಪ್ರಶ್ನೆ ಕೇಳಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ 70% ಮಂದಿ ಸ್ಥಳೀಯ ಪೊಲೀಸರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರೆ, 70% ಮಂದಿ ರಾತ್ರಿ ವೇಳೆ ಒಂಟಿಯಾಗಿ ನಡೆಯುವುದು ಸುರಕ್ಷಿತವಾಗಿದೆ ಎಂದು ಉತ್ತರಿಸಿರುವುದಾಗಿ ವರದಿ ಉಲ್ಲೇಖಿಸಿದೆ.  

ಭಾರತಕ್ಕೆ 60ನೇ ಸ್ಥಾನ

ಸಮೀಕ್ಷೆ ಮಾಡಲಾದ 120 ದೇಶಗಳಲ್ಲಿ ಭಾರತ 80 ಅಂಕ ಪಡೆದು 60ನೇ ಸ್ಥಾನ ಪಡೆದರೆ, ಪಾಕಿಸ್ತಾನ 82 ಅಂಕಗಳೊಂದಿಗೆ 48ನೇ ಸ್ಥಾನ ಪಡೆದಿದೆ. ಶ್ರೀಲಂಕಾವೂ 80 ಅಂಕ ಪಡೆದಿದ್ದರೂ ಭಾರತಕ್ಕಿಂತ ಒಂದು ಸ್ಥಾನ ಮೇಲಿದೆ. ಆದರೆ ಈ ಮೂರೂ ದೇಶಗಳು ಬ್ರಿಟನ್ ಹಾಗೂ ಬಾಂಗ್ಲಾದೇಶಕ್ಕಿಂತ ಮೇಲಿನ ಸ್ಥಾನ ಪಡೆದಿವೆ.

ವರದಿಯ ಪ್ರಕಾರ, ಇಂಡೊನೇಶ್ಯಾ ಮತ್ತು ಸಿಂಗಾಪುರದ ಸುಧಾರಿತ ಪೊಲೀಸ್ ವ್ಯವಸ್ಥೆಯ ಕೊಡುಗೆಯಿಂದಾಗಿ ವಲಯ ಮಟ್ಟದಲ್ಲಿ ಆಗ್ನೇಯ ಏಶ್ಯಾ ವಲಯ ಅಗ್ರಸ್ಥಾನ ಪಡೆದಿದೆ.

Similar News