ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ, ಗಣೇಶನ ಚಿತ್ರಗಳಿರಬೇಕು: ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ ಕೇಜ್ರಿವಾಲ್

Update: 2022-10-28 11:04 GMT

ಹೊಸದಿಲ್ಲಿ: ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ಹಾಗೂ  ಗಣೇಶನ ಚಿತ್ರಗಳಿರಬೇಕು ಎಂಬ ತಮ್ಮ ಬೇಡಿಕೆಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಪುನರುಚ್ಚರಿಸಿದ್ದಾರೆ.

ದೇವರ ಚಿತ್ರಗಳಿರುವ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡುವಂತೆ ನಿನ್ನೆ ಪ್ರಧಾನಿಯನ್ನು ಒತ್ತಾಯಿಸಿದ್ದ ಕೇಜ್ರಿವಾಲ್, ಈ ಹೆಜ್ಜೆಯು ದೇಶದ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದರು.

ಶುಕ್ರವಾರ ಕೇಜ್ರಿವಾಲ್  ಅವರು ಔಪಚಾರಿಕವಾಗಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, " ಮಹಾತ್ಮಾ ಗಾಂಧಿಯವರೊಂದಿಗೆ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ ದೇವಿ ಹಾಗೂ  ಗಣೇಶನ ಚಿತ್ರಗಳನ್ನು ಹಾಕಬೇಕು ಎಂದು  130 ಕೋಟಿ ಭಾರತೀಯರ ಪರವಾಗಿ ವಿನಂತಿಸುತ್ತಿದ್ದೇನೆ’’ ಎಂದು ಹೇಳಿದ್ದಾರೆ.

"ದೇಶದ ಆರ್ಥಿಕತೆಯು ಅತ್ಯಂತ ಕೆಟ್ಟ ಹಂತದಲ್ಲಿದೆ. ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆದ ನಂತರವೂ ಭಾರತವು ಅಭಿವೃದ್ಧಿಶೀಲ ಮತ್ತು ಬಡ ದೇಶ ಎಂದು ಹೆಸರಾಗಿದೆ ... ಒಂದು ಕಡೆ, ನಾಗರಿಕರು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ, ಆದರೆ ನಮ್ಮ ಪ್ರಯತ್ನಗಳಿಗೆ ಫಲ ಸಿಗಲು ದೇವರ ಆಶೀರ್ವಾದವೂ ಬೇಕು”ಎಂದು ಅವರು ಹಿಂದಿಯಲ್ಲಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.  ಪತ್ರವನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Similar News