ಪೊಲೀಸ್ ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಕಾಲೇಜುಗಳಿಗೆ ದಿಲ್ಲಿ ವಿವಿ ಸೂಚನೆ
ಹೊಸದಿಲ್ಲಿ,ಅ.28: ಕಾಲೇಜುಗಳು ಮತ್ತು ವಿಭಾಗಗಳು ಪೊಲೀಸರ ಅನುಮತಿಯಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ತುರ್ತು ಸಂದರ್ಭಗಳಲ್ಲಿ ಅಥವಾ ಸಮಯದ ಕೊರತೆಯಿದ್ದಾಗ ಕನಿಷ್ಠ ಒಂದು ದಿನ ಮೊದಲು ಪೊಲೀಸ್ ಠಾಣೆಗೆ ಪೂರ್ವ ಮಾಹಿತಿಯನ್ನು ನೀಡಬೇಕು ಮತ್ತು ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಮುಕ್ತವಾಗಿರಬಾರದು ಎಂದು ದಿಲ್ಲಿ ವಿವಿ(Delhi University)ಯು ಗುರುವಾರ ಹೊರಡಿಸಿದ ಸೂಚನೆಯಲ್ಲಿ ಹೇಳಿದೆ.
ನಗರದ ಮಿರಾಂಡಾ ಮಹಿಳಾ ಕಾಲೇಜಿನಲ್ಲಿ ದೀಪಾವಳಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಆವರಣದಲ್ಲಿ ಅತಿಕ್ರಮ ಪ್ರವೇಶವನ್ನು ಮಾಡಿದ್ದ ಪುರುಷರ ಗುಂಪೊಂದು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಎರಡು ವಾರಗಳ ಬಳಿಕ ವಿವಿಯ ಈ ಸೂಚನೆ ಹೊರಬಿದ್ದಿದೆ.
ನೋಂದಣಿಯ ಬಳಕವಷ್ಟೇ ಇಂತಹ ಕಾರ್ಯಕ್ರಮಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮಗಳು ಅಥವಾ ಉತ್ಸವ ಸಂದರ್ಭಗಳಲ್ಲಿ ಸ್ವಯಂಸೇವಕರನ್ನು ನಿಯೋಜಿಸುವಂತೆ ಮತ್ತು ಅವರ ಸಂಖ್ಯೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಕಾಲೇಜುಗಳಿಗೆ ಸೂಚಿಸಲಾಗಿದೆ. ಅಗ್ನಿಶಾಮಕ ಮತ್ತು ವಿದ್ಯುತ್ ಇಲಾಖೆಗಳಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳವಂತೆಯೂ ಸೂಚನೆಯಲ್ಲಿ ಹೇಳಲಾಗಿದೆ.
ಮಾರ್ಗಸೂಚಿಯನ್ನು ಪಾಲಿಸದಿದ್ದರೆ ಯಾವುದೇ ಅಹಿತಕರ ಘಟನೆಗೆ ಕಾಲೇಜುಗಳು/ವಿಭಾಗಗಳೇ ಸಂಪೂರ್ಣ ಹೊಣೆಗಾರರಾಗುತ್ತವೆ ಎಂದು ವಿವಿಯು ಎಚ್ಚರಿಕೆಯನ್ನೂ ನೀಡಿದೆ.