ಹಿಮಾಚಲ ಪ್ರದೇಶದ ಪ್ರಮುಖ ಚುನಾವಣಾ ವಿಷಯವಾಗಿ ಹೊರಹೊಮ್ಮಿದ ʼಅಗ್ನಿವೀರ್‌ʼ ಯೋಜನೆ

Update: 2022-10-29 12:29 GMT

ಶಿಮ್ಲಾ: ಭಾರತ ಸರ್ಕಾರವು ರಕ್ಷಣಾ ಸೇವೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಪ್ರಾರಂಭಿಸಿದ ನಾಲ್ಕು ತಿಂಗಳ ನಂತರ, ಈ ಯೋಜನೆಯು ಹಿಮಾಚಲ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆಯ ಸಮಸ್ಯೆಯಾಗಿ ಹೊರಹೊಮ್ಮಿದೆ.

ಹಿಮಾಚಲ ಪ್ರದೇಶದಲ್ಲಿ ಈ ಹಿಂದೆ ಅಗ್ನಿವೀರ್ ಯೋಜನೆಯ ವಿರುದ್ಧ ಹಲವಾರು ಪ್ರತಿಭಟನೆಗಳು ನಡೆದಿದ್ದವು. ಸುರಕ್ಷಿತ ವೃತ್ತಿಜೀವನಕ್ಕಾಗಿ ರಕ್ಷಣಾ ಸೇವೆಗಳಿಗೆ ಬರಲು ತಯಾರಿ ನಡೆಸುತ್ತಿರುವ ಹಲವಾರು ಯುವಕರ ಮೇಲೆ ಅಗ್ನೀಪಥ್‌ ಯೋಜನೆ ಪರಿಣಾಮ ಬೀರಲಿದೆ ಎಂಬ ಆತಂಕ ರಾಜ್ಯದಲ್ಲಿದೆ.

ಅಗ್ನಿಪಥ್ ಅಡಿಯಲ್ಲಿ, ಶಾಶ್ವತ ಉದ್ಯೋಗಗಳ ಬದಲಿಗೆ, ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹಾಗಾಗಿಯೇ ಈ ಯೋಜನೆಗೆ ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ ರಕ್ಷಣಾ ಪಡೆಗೆ ಸೇರಲು ಬಯಸುವ ಯುವಕರು ವಿರೋಧಿಸಿದ್ದರು.

ಈ ವರ್ಷ ಜೂನ್‌ನಲ್ಲಿ ಧರ್ಮಶಾಲಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋ ಸಂದರ್ಭದಲ್ಲಿ, ಕಾಂಗ್ರಾ ಜಿಲ್ಲೆಯ ಗಗ್ಗಲ್ ವಿಮಾನ ನಿಲ್ದಾಣದ ಬಳಿ ಪಠಾಣ್‌ಕೋಟ್-ಮಂಡಿ ಹೆದ್ದಾರಿಯನ್ನು ತಡೆದಿದ್ದಕ್ಕಾಗಿ ಪೊಲೀಸರು ಸುಮಾರು 300 ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಯುವಕರು ಪ್ರಧಾನಿ ವಿರುದ್ಧ ಭಿತ್ತಿಪತ್ರಗಳನ್ನು ಹರಿದು ಪ್ರತಿಭಟನೆ ನಡೆಸಿದ್ದರು.

ಹಿಮಾಚಲದಲ್ಲಿ ಸುಮಾರು 2.8 ಲಕ್ಷ ಜನರು ಪ್ರಸ್ತುತ ರಕ್ಷಣಾ ಸೇವೆಗಳಲ್ಲಿದ್ದಾರೆ ಅಥವಾ ಮಾಜಿ ಸೈನಿಕರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ.80ರಷ್ಟು ಮಂದಿ ಕಂಗ್ರಾ, ಉನಾ ಮತ್ತು ಹಮೀರ್‌ಪುರ ಜಿಲ್ಲೆಗಳಿಂದ ಬಂದವರು. ಅಲ್ಲದೆ, 3 ಲಕ್ಷ ಸರ್ಕಾರಿ ನೌಕರರನ್ನು ಹೊಂದಿರುವ‌ ಈ ರಾಜ್ಯದಲ್ಲಿ ರಾಜ್ಯಾದ್ಯಂತ 8 ಲಕ್ಷ ನಿರುದ್ಯೋಗಿಗಳು ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.

ನಗ್ರೋಟಾ ಬಾಗ್ವಾನ್‌ನ ಕಾಂಗ್ರೆಸ್ ಅಭ್ಯರ್ಥಿ ರಘುಬೀರ್ ಸಿಂಗ್ ಬಾಲಿ, ಹಿಮಾಚಲ ಪ್ರದೇಶದ ಬೆಲ್ಟ್‌ನಲ್ಲಿರುವ ಜನರು ಯಾವಾಗಲೂ ದೇಶಕ್ಕೆ ಸೇವೆ ಸಲ್ಲಿಸಲು ರಕ್ಷಣಾ ಪಡೆಯತ್ತ ನೋಡುತ್ತಾರೆ. ಆದರೆ ಅಗ್ನಿವೀರ್ ಯೋಜನೆಯಿಂದ, ಅವರ ಉದ್ಯೋಗ ಭವಿಷ್ಯಕ್ಕೆ ಅಭದ್ರತೆ ಬಂದಿದೆ. ಇದು ರಾಜ್ಯದಲ್ಲಿ ಪ್ರಮುಖ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

Similar News