ಕಾಶ್ಮೀರದಲ್ಲಿ ಭೂಕುಸಿತ: ಪೊಲೀಸ್ ಪೇದೆ ಸೇರಿ ಕನಿಷ್ಠ ನಾಲ್ಕು ಮಂದಿ ಮೃತ್ಯು

Update: 2022-10-30 11:28 GMT

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ರ್ಯಾಟಲ್ ಪವರ್ ಪ್ರಾಜೆಕ್ಟ್ ಬಳಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಒಬ್ಬ ಪೊಲೀಸ್ ಪೇದೆಯೂ ಸೇರಿದ್ದಾರೆ.

ರ್ಯಾಟಲ್ ಪವರ್ ಪ್ರಾಜೆಕ್ಟ್ ಪ್ರದೇಶಕ್ಕೆ ಸಂಪರ್ಕ ರಸ್ತೆಯನ್ನು ನಿರ್ಮಿಸುವ ಕಾರ್ಯದಲ್ಲಿ ಕಾರ್ಮಿಕರು ತೊಡಗಿದ್ದರು. ಜೆಸಿಬಿ ಯಂತ್ರದಲ್ಲಿ ಅಗೆಯುತ್ತಿದ್ದಾಗ ದೊಡ್ಡ ಬಂಡೆಯೊಂದು ಉರುಳಿ ಕಾರ್ಮಿಕರು ಸಿಕ್ಕಿಹಾಕಿಕೊಂಡರು ಎಂದು ಕಿಶ್ತ್‌ವಾರ್ ಜಿಲ್ಲಾಧಿಕಾರಿ ದೇವಾಂಶ್ ಯಾದವ್ ಹೇಳಿದ್ದಾರೆ.

ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿ, ಅವಶೇಷಗಳಡಿ ಸಿಲುಕಿಕೊಂಡಿದ್ದವರನ್ನು ರಕ್ಷಿಸುವ ವೇಳೆ ಮತ್ತೊಂದು ಭೂಕುಸಿತ ಸಂಭವಿಸಿ ಮತ್ತಷ್ಟು ಮಂದಿ ಮಣ್ಣಿನಲ್ಲಿ ಹೂತುಹೋದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮರೋಪಾದಿ ಕಾರ್ಯಾಚರಣೆಯಲ್ಲಿ ಎಎಸ್‍ಐ ಸೇರಿದಂತೆ ಆರು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಪೇದೆ, ಜೆಸಿಬಿ ಚಾಲಕ ಮನೋಜ್ ಕುಮಾರ್ ಸೇರಿದಂತೆ ನಾಲ್ಕು ಮಂದಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.

ಘಟನೆ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಮತ್ತು ಜಮ್ಮು ಮತ್ತು ಕಾಶ್ಮೀರ ಸಂಸದ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಯಾವುದೇ ಅಗತ್ಯ ನೆರವು ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಟ್ವಿಟ್ಟರ್ ಮೂಲಕ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ newindianexpress.com ವರದಿ ಮಾಡಿದೆ.

Similar News