ಭಾರತದ ಅರ್ಥವ್ಯವಸ್ಥೆ ಹಾಗೂ ತೀವ್ರವಾಗುತ್ತಿರುವ ಬಡತನ ಮತ್ತು ಹಸಿವು

Update: 2022-10-30 06:49 GMT

ಯಾವುದೇ ಸ್ವತಂತ್ರ ಅಧ್ಯಯನ ಸಂಸ್ಥೆಗೆ ವಸ್ತುಸ್ಥಿತಿಯನ್ನು  ಜನರ ಮುಂದಿಡುವ ಸಾಮಾಜಿಕ ಜವಾಬ್ದಾರಿ ಇದೆ; ಇಲ್ಲಿ ಯಾವುದೇ ದೇಶವನ್ನು ನಿಕೃಷ್ಟವಾಗಿ ಬಿಂಬಿಸಿ  ಆ ಸಂಸ್ಥೆಗೆ  ಸಾಧಿಸಬೇಕಾದ್ದು ಏನಿಲ್ಲ. ಅಂತಹ ವರದಿಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಿ ನಮ್ಮ ನೀತಿಗಳನ್ನು ಬದಲಾಯಿಸಬೇಕೇ ಬೇಡವೇ ಎಂಬ ವಿವೇಚನೆ ಸರಕಾರಕ್ಕೆ ಬಿಟ್ಟದ್ದು. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಸರಕಾರಕ್ಕೆ ಆ ಕರ್ತವ್ಯವಿದೆ. ವಸ್ತುಸ್ಥಿತಿಯ ಸುಧಾರಣೆಮಾಡುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗುವ ತುರ್ತು ದೇಶದ ಮುಂದಿದೆ.

ಭಾರತದ 139 ಕೋಟಿ ಜನಸಂಖ್ಯೆಯಲ್ಲಿ ಕಡುಬಡವರು ಎಷ್ಟು ಜನರಿದ್ದಾರೆ? ಎಷ್ಟು ಮಂದಿ ಹಸಿವಿನಿಂದ ಕಂಗೆಟ್ಟಿದ್ದಾರೆ? ದೇಶದ ಅರ್ಥವ್ಯವಸ್ಥೆಯ ಕುರಿತಾದಂತೆ ಈ ವಿಷಯಗಳು ತೀವ್ರವಾದ ಚರ್ಚೆಗೆ ಈಗ ಗ್ರಾಸವಾಗಿವೆ. ಇತ್ತೀಚೆಗೆ ಬಂದ ಕೆಲವು ವರದಿಗಳು ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

ವಿಶ್ವ ಬ್ಯಾಂಕಿನ ಒಂದು ವರದಿಯಂತೆ 2020ರಲ್ಲಿ ಜಗತ್ತಿನಾದ್ಯಂತ ಕಡುಬಡತನಕ್ಕೆ ತಳ್ಳಲ್ಪಟ್ಟ ಒಟ್ಟು ಜನಸಂಖ್ಯೆಯ ಶೇ. 79 ನಮ್ಮ ದೇಶದವರು. ಜನಸಂಖ್ಯಾವಾರು ನೋಡಿದರೆ ೨೦೨೦ರಲ್ಲಿ ಜಗತ್ತಿನಲ್ಲಿ ಹೊಸದಾಗಿ ದಾರಿದ್ರ್ಯಕ್ಕೆ ಸೇರ್ಪಡೆಯಾದ 7.1 ಕೋಟಿಯಲ್ಲಿ ೫.೬ ಕೋಟಿ ಜನರು ಭಾರತದವರೆಂದು ವಿಶ್ವ ಬ್ಯಾಂಕು ಹೇಳಿದೆ. ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ಸ್ವತಂತ್ರ ಸರಕಾರೇತರ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ನಡೆಸಿದ ಅಧ್ಯಯನದ ಆಧಾರದಲ್ಲಿ ವಿಶ್ವ ಬ್ಯಾಂಕು ತನ್ನ ವರದಿಯನ್ನು ತಯಾರಿಸಿತ್ತು.

ಅಕ್ಟೋಬರ್ ಎರಡನೇ ವಾರದಲ್ಲಿ ಬಂದ ಇನ್ನೊಂದು ವರದಿಯ ಪ್ರಕಾರ  ಜಾಗತಿಕ ಹಸಿವು ಸೂಚ್ಯಂಕದ (ಗ್ಲೋಬಲ್ ಹಂಗರ್ ಇಂಡೆಕ್ಸ್ -ಜಿಎಚ್‌ಐ) ಕುರಿತಂತೆ ಅಧ್ಯಯನ ಮಾಡಲಾದ 121 ದೇಶಗಳ ಪೈಕಿ ಭಾರತವು 107ಕ್ಕೆ ಇಳಿದಿದೆ; ನೆರೆಯ ಶ್ರೀಲಂಕಾ(64), ನೇಪಾಳ (81) ಮತ್ತು ಪಾಕಿಸ್ತಾನ (99) ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಏಶ್ಯದಲ್ಲಿ ಅಫ್ಘಾನಿಸ್ತಾನ (109) ಮಾತ್ರ ನಮಗಿಂತ ಕೆಳಗೆ ಇದೆ. 2020ರ ವರದಿಯಲ್ಲಿ ಭಾರತವು 107 ದೇಶಗಳಲ್ಲಿ 94ನೇ ಸ್ಥಾನ ಪಡೆದಿತ್ತು. ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಆಗಲೂ ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದವು.

ತಜ್ಞರ ಅಧ್ಯಯನಗಳ ಪ್ರಕಾರ ಅನೇಕ ದಶಕಗಳಿಂದ ಬಡತನ ಮತ್ತು ಹಸಿವುಗಳ ನಿರ್ಮೂಲನೆಯತ್ತ ಭಾರತ ಮಾಡುತ್ತಿದ್ದ ಪ್ರಯತ್ನಕ್ಕೆ ಈಗ ತೀವ್ರವಾದ ಆಘಾತವಾಗಿದೆ.

ಹೆಚ್ಚುತ್ತಿರುವ ಕಡುಬಡತನ ಮತ್ತು ಹಸಿವು ದೇಶದ ದೀರ್ಘಕಾಲೀನ ಸಮಗ್ರ ಪ್ರಗತಿಗೆ ಮಾರಕವಾಗಬಹುದು. ಈ ಕಾರಣಕ್ಕಾಗಿ ಈ ಎರಡು ಬೆಳವಣಿಗೆಗಳ ಬಗ್ಗೆ ಅರಿತುಕೊಳ್ಳುವುದು ಅತೀ ಅಗತ್ಯ.

ಕಡುದಾರಿದ್ರ್ಯ ಅಥವಾ ಬಡತನದ ರೇಖೆ:

ಬಡತನ ರೇಖೆ ಅಂದರೆ ಏನು? ಮೇಲೆ ಹೇಳಿದ ವಿಶ್ವ ಬ್ಯಾಂಕಿನ  ವರದಿಯಲ್ಲಿ 2017ರಲ್ಲಿ ದಿನಕ್ಕೆ ತಲಾ 2.15 ಡಾಲರು ವೆಚ್ಚಮಾಡುವ ಸಾಮರ್ಥ್ಯವಿಲ್ಲದವರು ಕಡುಬಡವರು ಎಂದು ಹೇಳಿದೆ. ಇದೇ ವರದಿ ಇನ್ನೊಂದು ವಿಷಯವನ್ನೂ ಗಮನಕ್ಕೆ ತಂದಿದೆ.  2.15 ಡಾಲರಿನ ಮಾನದಂಡವನ್ನು ಉಪಯೋಗಿಸಿದಾಗ 2015-16ರ ಅವಧಿಯಲ್ಲಿ ಜಗತ್ತಿನ ಕಡುಬಡವರಲ್ಲಿ ಶೇ. 26 ಭಾರತದಲ್ಲಿದ್ದರು; ಕೋವಿಡ್ ಸಾಂಕ್ರಾಮಿಕ ಅಪ್ಪಳಿಸಿದ ಬಳಿಕ ಈ ಪ್ರಮಾಣ ಶೇ. 57ಕ್ಕೆ ಜಿಗಿದಿದೆ. (ಅಕ್ಟೋಬರ್ ಮಧ್ಯದಲ್ಲಿ  ಒಂದು ಡಾಲರಿನ ಮೌಲ್ಯ ಸುಮಾರು ೮೨.೩೦ ರೂಪಾಯಿಯ ಸಮೀಪವಿತ್ತು. ರೂಪಾಯಿಗೆ ಪರಿವರ್ತಿಸಿದಾಗ ದಿನಕ್ಕೆ ಸುಮಾರು 177 ರೂಪಾಯಿ ವ್ಯಯಿಸಲು ಸಾಮರ್ಥ್ಯವಿಲ್ಲದವರು ಕಡುಬಡವರೆಂದು ಈ ಅಧ್ಯಯನದ ಪ್ರಕಾರ ಅರ್ಥಮಾಡಿಕೊಳ್ಳಬಹುದು.

ಕಡುಬಡವರು, ಬಡತನದ ರೇಖೆ ಮತ್ತು ಕಡುದಾರಿದ್ರ್ಯ ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ತಜ್ಞರ ಸಮಿತಿಗಳು, ಸ್ವತಂತ್ರ ಸಂಸ್ಥೆಗಳು  ಹಾಗೂ ಸರಕಾರದ ಅಂಗಸಂಸ್ಥೆಗಳು ಇದರ ಬಗ್ಗೆ ಅಧ್ಯಯನವನ್ನು ನಡೆಸಿವೆ. ಬಡತನವನ್ನು ಅಳೆಯಲು ವಿಭಿನ್ನ ಸೂಚ್ಯಂಕಗಳನ್ನು ಬಳಸಿವೆ. ಈಗಿನ ಸರಕಾರ ಸ್ಥಾಪಿಸಿದ ನೀತಿ ಆಯೋಗವೂ ಈ ಕುರಿತು ವರದಿಯನ್ನು ನೀಡಿದೆ. ಯಾವ ಅಧ್ಯಯನದಲ್ಲಿಯೂ ಹಸಿವು ಮತ್ತು ಬಡತನವೆಂದರೆ ಜನರಿಗೆ ಊಟಕ್ಕಿಲ್ಲ ಎಂಬ ಕಲ್ಪನೆಯಿಲ್ಲ.

ಜಿಎಚ್‌ಐಯ ವಿಶ್ಲೇಷಣೆಯು ಮಕ್ಕಳ ಅಪೌಷ್ಟಿಕತೆ,  ಕುಂಠಿತ ಬೆಳವಣಿಗೆ, ಪ್ರಾಯಕ್ಕೆ ಅಗತ್ಯವಿರಬೇಕಾದುದಕ್ಕಿಂತ ಕಡಿಮೆ ಭಾರ ಮತ್ತು ಐದು ವರ್ಷ ಪ್ರಾಯ ತಲಪುವ ಮೊದಲೇ ಸಂಭವಿಸುವ ಮೃತ್ಯುಗಳ ದತ್ತಾಂಶದ ಆಧಾರದಲ್ಲಿ ಒಂದು ದೇಶದ ಹಸಿವಿನ ಮಟ್ಟವನ್ನು ನಿರ್ಧರಿಸುತ್ತದೆ. ಯಾವುದೇ ದೇಶದ ಪ್ರಗತಿಗೆ ಮಕ್ಕಳ ಸಮಗ್ರ ಬೆಳವಣಿಗೆಯ ಮಹತ್ವವನ್ನು ಈ ಅಧ್ಯಯನವು ಸೂಚಿಸುತ್ತದೆ.

ನೀತಿ ಆಯೋಗವು ತನ್ನ ಅಧ್ಯಯನವನ್ನು 2015-16ರಲ್ಲಿ  ನಡೆಸಿದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲಿ (ಎನ್‌ಎಫ್‌ಎಚ್‌ಎಸ್) ಸಂಗ್ರಹಿಸಿದ ದತ್ತಾಂಶದಿಂದ ನಡೆಸಿತ್ತು. ಈ ಅಧ್ಯಯನದ ಪ್ರಕಾರವೇ ಶೇ.೨೫ರಷ್ಟು ಮಂದಿ ಬಡವರ ಗುಂಪಿಗೆ ಸೇರಿದ್ದರು. ಆಯೋಗವು ೧೨ ಮಾನದಂಡಗಳನ್ನು ಒಳಗೊಂಡ ಬಹು ಆಯಾಮದ ಬಡತನ ಸೂಚ್ಯಂಕವನ್ನು (Multi-dimensional Poverty Index-MPI) ಬಳಸುತ್ತದೆ. ಇದರಲ್ಲಿ ವಿದ್ಯೆ, ಆರೋಗ್ಯ, ಜೀವನ ಮಟ್ಟ ಮುಂತಾದವು ಒಳಗೊಂಡಿವೆ.

ಡಿಸೆಂಬರ್ 2021ರಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಕೇಂದ್ರದ ಸಚಿವರೊಬ್ಬರು  ‘‘2011-12ರಲ್ಲಿ ದೇಶದ ಶೇ. 21.9 ರಷ್ಟು ಅರ್ಥಾತ್ ೨೭ ಕೋಟಿಯಷ್ಟು ಜನರು ಬಡತನ ರೇಖೆಯಿಂದ ಕೆಳಗಿದ್ದರು’’ ಎಂದಿದ್ದರು. (ಇದು ಹಿಂದಿನ ಯುಪಿಎ ಸರಕಾರವು ಸಂಗ್ರಹಿಸಿದ ಮಾಹಿತಿ). ಈ ಎರಡು ಮಾಹಿತಿಗಳನ್ನು ಹೊಂದಾಣಿಕೆ ಮಾಡಿದರೆ ಸರಕಾರದ ಪ್ರಕಾರವೇ  ಹೋದ ದಶಕದಲ್ಲಿ ಕಡುಬಡವರ ಸಂಖ್ಯೆ 27gಕೋಟಿಯಿಂದ ೩೫ ಕೋಟಿಗೆ ಏರಿದೆ ಎಂದು ಸ್ಪಷ್ಟವಾಗುತ್ತದೆ. ಕೋವಿಡ್‌ನಿಂದ ಉಂಟಾದ ಉದ್ಯೋಗ ನಷ್ಟದಿಂದಾಗಿ ಜೀವನೋಪಾಯವನ್ನು ಕಳಕೊಂಡವರ ಕುರಿತಾದಂತೆ ಸರಕಾರಕ್ಕೆ ನಿಖರ ಮಾಹಿತಿ ಇಲ್ಲ. ಮೇ ೨೦೨೧ರಲ್ಲಿ ಬೆಂಗಳೂರಿನ ಅಝೀಮ್ ಪ್ರೇಮ್‌ಜಿ ಯುನಿವರ್ಸಿಟಿಯ ಒಂದು ಅಧ್ಯಯನದ ಪ್ರಕಾರ ಕೋವಿಡ್ ಲಾಕ್‌ಡೌನ್‌ನಿಂದಾಗಿ 2020-2021ರ ವರ್ಷದಲ್ಲಿ ಸುಮಾರು ೨೩ ಕೋಟಿ ಜನರು ದಾರಿದ್ರ್ಯಕ್ಕೆ ತಳ್ಳಲ್ಪಟ್ಟಿದ್ದರು.

೨೦೨೦ರ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿಯವರ ಬಡವರ ಅನ್ನ ಕಲ್ಯಾಣ ಯೋಜನೆಯನ್ನು (ಪಿಎಂಜಿಕೆಎವೈ) ಆರಂಭಿಸಿತು. ಕಾಲಕಾಲಕ್ಕೆ ಅದನ್ನು ವಿಸ್ತರಿಸಿ ೨೦೨೨ ಮಾರ್ಚ್‌ಗೆ ಅದು ಅಂತ್ಯವಾಗಲಿತ್ತು. ಆಗಲೇ ಸರಕಾರ ಇದಕ್ಕಾಗಿ ೨.೬ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು. ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರಕಾರವು ಪಿಎಂಜಿಕೆಎವೈಯನ್ನು ಸೆಪ್ಟಂಬರ್ ೩೦ರ ತನಕ, ಆ ಬಳಿಕ ಡಿಸೆಂಬರ್ ತನಕ ವಿಸ್ತರಿಸುವ ನಿರ್ಧಾರವನ್ನು ಕೈಗೊಂಡಿತು. ಈ ವಿಸ್ತರಣೆಗೆ ಸುಮಾರು ೮೦,೦೦೦ ಕೋಟಿ ರೂಪಾಯಿಗಳಷ್ಟು ವೆಚ್ಚವಾಗಬಹುದು ಎಂದು ಅಂದಾಜಿಸಿದೆ. ಈ ಯೋಜನೆಯಲ್ಲಿ ಅತ್ಯಂತ ಬಡವರಿಗೆ ತಲಾ ೫ ಕಿಲೊಗ್ರಾಂ ಅಕ್ಕಿ/ಗೋಧಿಯನ್ನು ಉಚಿತವಾಗಿ ಪೂರೈಸಲಾಗುತ್ತದೆ. ಈ ಕೊಡುಗೆಯು ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ ಕಿಲೊಗೆ ೨ ಅಥವಾ ೩ ರೂಪಾಯಿಗೆ ಕೊಡುವ ಆಹಾರಧಾನ್ಯದ ಹೊರತಾಗಿ ಎಂಬುದು ಗಮನಾರ್ಹ. ಇದರ ಉದ್ದೇಶ ಕಡುಬಡವರನ್ನು ಹಸಿವಿನಿಂದ ರಕ್ಷಿಸುವುದು.

ಸರಕಾರದ ಹೇಳಿಕೆಗಳ ಪ್ರಕಾರ ಸುಮಾರು ೮೦೦ ಮಿಲಿಯ ಅಂದರೆ ೮೦ ಕೋಟಿ ಬಡಜನರಿಗೆ ಪಿಎಂಜಿಕೆಎವೈಯಿಂದ ಬದುಕಲು ಸಾಧ್ಯವಾಗಿದೆ. ಇದರ ಅರ್ಥ ಅಧಿಕೃತವಾಗಿಯೇ ೮೦ ಕೋಟಿ ಜನರು ಕಡುಬಡತನಕ್ಕೆ ನೂಕಲ್ಪಟ್ಟಿದ್ದರು. ಆದರೆ ಎಷ್ಟು ಮಂದಿ ಕಡುಬಡವರಿದ್ದಾರೆ ಎಂದು ಕೇಳಿದರೆ ಸರಕಾರದ ಬಳಿ ದತ್ತಾಂಶಗಳಿಲ್ಲ.

ಸ್ವಾತಂತ್ರ್ಯೋತ್ತರದಲ್ಲಿ ಬಡತನದ ನಿರ್ಮೂಲನದ ಪ್ರಯತ್ನ:

ಸುಮಾರು ಎರಡು ಶತಮಾನಗಳ ಕಾಲ ವಸಾಹತುವಾಗಿದ್ದ ಭಾರತವು ೧೯೪೭ರಲ್ಲಿ ಸ್ವರಾಜ್ಯವನ್ನು ಪಡೆದಾಗ ಆರ್ಥಿಕವಾಗಿ ಬಹಳ ಹಿಂದುಳಿದ ರಾಷ್ಟ್ರವಾಗಿತ್ತು ಎಂಬುದು ಸರ್ವವೇದ್ಯ. ಅದಕ್ಕೆ ನಾಲ್ಕು ವರ್ಷ ಮೊದಲು ಅಂದರೆ ೧೯೪೩-೪೪ರಲ್ಲಿ ಆಗಿನ ಬಂಗಾಳ ಪ್ರಾಂತದಲ್ಲಿ ಸಂಭವಿಸಿದ ಕ್ಷಾಮ ಸುಮಾರು ೩೫ರಿಂದ ೩೮ ಲಕ್ಷಜನರ ಬಲಿಯನ್ನು ತೆಗೆದುಕೊಂಡು  ಲಕ್ಷಗಟ್ಟಲೆ ಕುಟುಂಬಗಳನ್ನು ಕಡುದಾರಿದ್ರ್ಯಕ್ಕೆ ನೂಕಿತ್ತು. ಈ ಭೀಕರ ದುರಂತದಿಂದ ಪಾಠವನ್ನು ಕಲಿತ ಹೊಸ ರಾಷ್ಟ್ರೀಯ ಸರಕಾರವು ದಾರಿದ್ರ್ಯ ನಿರ್ಮೂಲನೆಗೆ  ಮುಂದಿನ ವರ್ಷಗಳಲ್ಲಿ ಮಹತ್ತರವಾದ ಆದ್ಯತೆಯನ್ನು ನೀಡಿತ್ತು. ಪಂಚವಾರ್ಷಿಕ ಯೋಜನೆಗಳಲ್ಲಿ ಒಳಗೊಂಡ ಹಲವು ಕಾರ್ಯಕ್ರಮಗಳನ್ನು ರೂಪಿಸಿ,  ಆ ಬಳಿಕ ಆರ್ಥಿಕ ಸಂಪನ್ಮೂಲಗಳನ್ನು ಸರಕಾರವೇ ತನ್ನ ನಿಯಂತ್ರಣಕ್ಕೆ ಒಳಪಡಿಸಿ ಕಡುದಾರಿದ್ರ್ಯವನ್ನು ಹೋಗಲಾಡಿಸುವತ್ತ ನಿರ್ದಿಷ್ಟವಾದ ಹೆಜ್ಜೆಗಳನ್ನು ಇಟ್ಟಿತು. ೧೯೬೦ರಿಂದ ನಾಲ್ಕು ದಶಕಗಳಲ್ಲಿ ಸಾಕಷ್ಟು ಮುನ್ನಡೆಯನ್ನು ಸಾಧಿಸಿತು. ಬರಗಾಲ ಮತ್ತು ಕ್ಷಾಮಗಳು ಕಣ್ಮರೆಯಾದವು; ಸಾಮಾಜಿಕ ಜೀವನ ಮಟ್ಟ ಸುಧಾರಿಸಿತು; ಉದ್ಯೋಗಗಳ ಸೃಷ್ಟಿಯ ಪ್ರಕ್ರಿಯೆಯಲ್ಲಿ ಸರಕಾರವೇ ಮುತುವರ್ಜಿ ವಹಿಸಿ ಈ ಸಹಸ್ರಮಾನದ ಆರಂಭದಲ್ಲಿ ಬಡವರ ಶೇಕಡಾವಾರು ಸಂಖ್ಯೆಯಲ್ಲಿ ಗಮನಾರ್ಹವಾದ ಕಡಿತವನ್ನು ದಾಖಲಿಸಿತು. ೧೯೫೦ರ ಸುಮಾರಿಗೆ  ಒಟ್ಟು ಜನಸಂಖ್ಯೆಯ ಶೇಕಡಾ ೪೫ರಷ್ಟು ಮಂದಿ ಕಡು ಬಡವರಾಗಿದ್ದರೆ 2000ದ ಅಂದಾಜಿಗೆ ಆ ಪ್ರಮಾಣ ೨೬ಕ್ಕೆ ಇಳಿದಿತ್ತು.

ದೇಶದ ಕಡುಬಡವರಿಗೆ ಹಸಿವಿನಿಂದ ಮುಕ್ತಿ ನೀಡುವ ಜವಾಬ್ದಾರಿ ನಾಗರಿಕರ ಹಿತರಕ್ಷಣೆಗೆ ಬದ್ಧವಾಗಿರುವ ಸರಕಾರದ್ದು. ಈ ಜವಾಬ್ದಾರಿಯನ್ನು ಕಾನೂನುಬದ್ಧಗೊಳಿಸಲು ಅನೇಕ ಸಾಮಾಜಿಕ ಕಾರ್ಯಕರ್ತರು, ಸರಕಾರೇತರ ಸಂಸ್ಥೆಗಳು ಹೋರಾಟ ನಡೆಸಬೇಕಾಯಿತು. ಇದರ ಪರಿಣಾಮವಾಗಿ ಮನಮೋಹನ್‌ಸಿಂಗ್‌ರ ಸರಕಾರ ೨೦೧೩ರಲ್ಲಿ ‘ರಾಷ್ಟ್ರೀಯ ಆಹಾರ ಭದ್ರತಾ ಕಾನೂನು’ (National Food Security Act)  ಅನ್ನು ಸಂಸತ್ತಿನಲ್ಲಿ ಮಂಡಿಸಿ ಆಹಾರದ ಹಕ್ಕನ್ನು ಮೂಲಭೂತಹಕ್ಕು ಎಂದು ಪರಿಗಣಿಸಿತು. ಈ ಕಾನೂನಿನ ಪ್ರಕಾರ ಅತ್ಯಂತ ಬಡವರಿಗೆ ಅಗತ್ಯವಾದ ಆಹಾರಧಾನ್ಯಗಳನ್ನು ಸರಕಾರವೇ ಪೂರೈಸುವ ನಿಯಮವಿದೆ. ೨೦೨೦-೨೧ರ ಲಾಕ್‌ಡೌನ್ ಸಂದರ್ಭದಲ್ಲಿ ಜೀವನಾಂಶವನ್ನು ಕಳಕೊಂಡ ವಲಸೆ ಕಾರ್ಮಿಕರ ಪರವಾಗಿ ದೇಶದ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ ಆಹಾರ ಪೂರೈಕೆ ಮಾಡುವಂತೆ ನಿರ್ದೇಶನವನ್ನು ನೀಡಿತ್ತು.

ದಾರಿದ್ರ್ಯ ನಿವಾರಣೆಯಲ್ಲಿ ಹಿಂಜರಿತ?

ದಾರಿದ್ರ್ಯ ನಿವಾರಣೆಯ ಬಗ್ಗೆ ಕೇಂದ್ರ ಸರಕಾರದ ನೀತಿಯಲ್ಲಿ ಒಂದು ಸ್ಪಷ್ಟವಾದ ವಿರೋಧಾಭಾಸ ಎದ್ದು ಕಾಣುತ್ತದೆ. 

ಸರಕಾರದ ಹೇಳಿಕೆಯಂತೆ ದೇಶದ ಆರ್ಥಿಕತೆ ಸರಿಯಾದ ದಾರಿಯಲ್ಲಿದೆ; ಸ್ಥೂಲ ದೇಶೀಯ ಉತ್ಪನ್ನ (ಜಿಡಿಪಿ) ನಿರಂತರ ಹೆಚ್ಚುತ್ತಾ ಇದೆ-ಕೋವಿಡ್ ಮಹಾಮಾರಿಯಿಂದಾಗಿ ಒಮ್ಮೆ ಹಿಂಜರಿತವಾದರೂ  ನಮ್ಮ ಆರ್ಥಿಕತೆ ಬೇಗನೇ ಚೇತರಿಸಿದೆ ಮಾತ್ರವಲ್ಲ ಈಗ ಅತ್ಯಂತ ವೇಗವಾಗಿ ಪ್ರಗತಿ ಹೊಂದಿ ಇಂಗ್ಲೆಂಡನ್ನು ಹಿಂದೆ ಹಾಕಿ ಜಗತ್ತಿನ ೫ ದೊಡ್ಡ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. ಅಂದಾಜಿನ ಪ್ರಕಾರ ೨೦೨೮ಕ್ಕೆ ಇನ್ನೂ ಮೇಲೇರಲಿದೆ.

ಈ  ಬೆಳವಣಿಗೆಯ ಜೊತೆಗೇ  ಮೂಲಭೂತವಾದ ಪ್ರಶ್ನೆಗಳು ಹುಟ್ಟುತ್ತದೆ: ಸರಕಾರವು ಹೇಳುವಂತೆ ಪ್ರಗತಿಯಾಗುತ್ತಲೇ ಇದ್ದರೆ ದಾರಿದ್ರ್ಯ ಹೇಗೆ ಹೆಚ್ಚಿತು? ಕಡುಬಡವರ ಸಂಖ್ಯೆ ಯಾಕೆ ಹೆಚ್ಚಿತು? ಪಿಎಂಜಿಕೆಎವೈಯಲ್ಲಿ ಉಚಿತ ಆಹಾರಧಾನ್ಯಗಳನ್ನು ಅಷ್ಟು ಮಂದಿಗೆ ಯಾಕೆ ಪೂರೈಸಲಾಗುತ್ತಿದೆ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಇನ್ನೊಂದು ವಿಚಾರವೂ ಮುನ್ನೆಲೆಗೆ ಬರುತ್ತದೆ. ೨೦೧೪ರಿಂದ ಹೊಸ ಉದ್ಯೋಗಗಳು ಹುಟ್ಟದೆ, ಸರಕಾರದ  ಕೆಲವು ವಿವೇಚನಾರಹಿತ ನಿರ್ಧಾರ (ನೋಟು ರದ್ದತಿ, ಜಿಎಸ್‌ಟಿ ಮತ್ತು ದೀರ್ಘಾವಧಿಯ  ದೇಶವ್ಯಾಪಿ ಲಾಕ್‌ಡೌನ್) ಗಳಿಂದಾಗಿ ಇರುವ ಉದ್ಯೋಗಗಳೂ ನಷ್ಟವಾದವು. ಇದು ಲಕ್ಷಾಂತರ ಜನರ ಜೀವನಾಂಶಕ್ಕೆ ಮಾರಕ ಹೊಡೆತ ನೀಡಿತು. ಕೆಲಸ ಕಳಕೊಂಡವರಿಗೆ ಅರ್ಥವ್ಯವಸ್ಥೆ ಸುಧಾರಿಸಿದಾಗ ಸೂಕ್ತ ಉದ್ಯೋಗಗಳು ಸಿಗದೆ ಸಂಪಾದನೆಯಲ್ಲಿ ಕಡಿತವಾಯಿತು; ಹೆಚ್ಚಾಗುತ್ತಿದ್ದ ಜಿಡಿಪಿಯ ಸಿಂಹಪಾಲು ಮೇಲ್ಮಟ್ಟದ ಉದ್ಯೋಗಸ್ತರಿಗೆ, ಉದ್ಯೋಗಪತಿಗಳಿಗೆ ಹಾಗೂ ಶ್ರೀಮಂತ ವರ್ಗದ ನಾಗರಿಕರಿಗೆ ಲಭಿಸುತ್ತಾ ಹೋಯಿತು. ಸಂಪಾದನೆ ಕಡಿತದ ಪ್ರಭಾವ ಜೀವನಮಟ್ಟದ ಮೇಲೆ ಆಯಿತು: ಆರೋಗ್ಯ ರಕ್ಷಣೆ, ಮಕ್ಕಳ ವಿದ್ಯೆ ಮತ್ತು ಅವರಿಗೆ ಅಗತ್ಯವಿದ್ದ ಪೌಷ್ಟಿಕ ಆಹಾರಗಳ ಮೇಲೆ ವ್ಯಯಿಸಲು ಹಣವಿಲ್ಲದಾಗ, ಅಲ್ಪಸ್ವಲ್ಪ ಸಂಪಾದನೆಯನ್ನೂ ಆಹಾರಪದಾರ್ಥಗಳ ಖರೀದಿಗೆ ವಿನಿಯೋಗಿಸುವ ಒತ್ತಡ ಕೆಳಮಟ್ಟದ ನಾಗರಿಕರ ಮೇಲೆ ಬಿತ್ತು. ಇವುಗಳ ಒಟ್ಟು ಪರಿಣಾಮವಾಗಿ ಹಸಿವು ಸೂಚ್ಯಂಕದಲ್ಲಿ ದೇಶ ಮತ್ತೆ ಕೆಳಗೆ ಜಾರಿತು.

ದಾರಿಗಳು ಏನು?

ಸರಕಾರ ಮುಖ್ಯವಾಗಿ ಮಾಡಬೇಕಾದ ಕೆಲಸ ಎಂದರೆ ಬಡತನ ಮತ್ತು ಹಸಿವುಗಳ ಬಗ್ಗೆ ಸ್ವತಂತ್ರ ಅಧ್ಯಯನವನ್ನು ನಡೆಸಿ ದೇಶದಲ್ಲಿ ಎಷ್ಟು ಮಂದಿ ನಾಗರಿಕರು ಈ ಬೇಗೆಗಳಿಂದ ಬಾಧಿತರಾಗಿದ್ದಾರೆ ಎಂದು ಅರಿತುಕೊಳ್ಳುವುದು. ಈ ಬಗ್ಗೆ ನಿಖರವಾದ ಮಾಹಿತಿ ಇದ್ದಾಗ ಮಾತ್ರ ನಿರ್ದಿಷ್ಟವಾದ ಯೋಜನೆಗಳನ್ನು ರೂಪಿಸಬಹುದು. ಈ ಕಾರ್ಯಕ್ರಮ ಮೂರು ಹಂತದಲ್ಲಿ ನಡೆಯಬೇಕಾಗಿದೆ.

ಒಂದು, ಸದ್ಯದ ಪರಿಸ್ಥಿತಿಯಲ್ಲಿ ಉದ್ಯೋಗ ಸಿಗುವ ತನಕ ಹಸಿವು ನೀಗಿಸಲು ಉಚಿತ ಆಹಾರಧಾನ್ಯಗಳ ಪೂರೈಕೆಯನ್ನು ಮುಂದುವರಿಸಬೇಕು.

ಎರಡು, ವರ್ಷದಲ್ಲಿ ಕನಿಷ್ಠದಿನಗಳ ಸಂಪಾದನೆಯಾದರೂ ಸಿಗುವಂತೆ ಮಾಡಲು ಉದ್ಯೋಗ ಖಾತರಿ ಯೋಜನೆಗಳನ್ನು ರೂಪಿಸ ಬೇಕು. ಮೂರು, ಉದ್ಯೋಗ ಮತ್ತು ಜೀವನಾಂಶಕ್ಕೆ ಸುಲಭವಾಗಿ ದಾರಿ ತೋರಿಸುವ ಸಾಮರ್ಥ್ಯವಿರುವ ಮತ್ತು ಹೆಚ್ಚು ಬಂಡವಾಳದ ಅಗತ್ಯವಿಲ್ಲದ  ಕಿರು, ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆ (ಎಂಎಸ್ ಎಂಇ)ಗಳಿಗೆ ಪ್ರಾಶಸ್ತ್ಯ ನೀಡುವುದು. ಇದಕ್ಕೆ ದಾರಿ ಅಂದರೆ ಸರಕಾರವು ಹೊಸ ಉದ್ದಿಮೆಗಳಿಗೆ ಪ್ರೋತ್ಸಾಹ ಧನ ನೀಡಬೇಕು,  ಸ್ಥಾಪಿಸಲು ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಬೇಕು, ಕೈಗಾರಿಕಾ ವಲಯಗಳಲ್ಲಿರುವ ಮೂಲಸೌಕರ್ಯಗಳನ್ನು ಸುಧಾರಿಸಿ  ಹೊಸ ಉದ್ದಿಮೆಗಳಿಗೆ ಕಡಿಮೆ ದರದಲ್ಲಿ ನೀರು, ವಿದ್ಯುತ್ ಮುಂತಾದವುಗಳು ಸಿಗುವಂತೆ ಮಾಡಬೇಕು. 

ಈ ಕ್ರಮಗಳಿಗೆ ಬೃಹತ್ ಸಂಪನ್ಮೂಲಗಳು ಅಗತ್ಯ. ಈಗಾಗಲೇ ಅನೇಕ ತಜ್ಞರು ಹೇಳಿದಂತೆ, ದೇಶದ ಅತ್ಯಂತ ಶ್ರೀಮಂತರ ಮೇಲೆ ವಿಶೇಷ ತೆರಿಗೆಯನ್ನು ವಿಧಿಸುವ ಮೂಲಕ ಅಗತ್ಯದ ಸಂಪನ್ಮೂಲಗಳನ್ನು ಜೋಡಿಸಬಹುದು.

ಯಾವುದೇ ಸ್ವತಂತ್ರ ಅಧ್ಯಯನ ಸಂಸ್ಥೆಗೆ  ವಸ್ತುಸ್ಥಿತಿಯನ್ನು  ಜನರ ಮುಂದಿಡುವ ಸಾಮಾಜಿಕ ಜವಾಬ್ದಾರಿ ಇದೆ; ಇಲ್ಲಿ ಯಾವುದೇ ದೇಶವನ್ನು ನಿಕೃಷ್ಟವಾಗಿ ಬಿಂಬಿಸಿ  ಆ ಸಂಸ್ಥೆಗೆ  ಸಾಧಿಸಬೇಕಾದ್ದು ಏನಿಲ್ಲ. ಅಂತಹ ವರದಿಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಿ ನಮ್ಮ ನೀತಿಗಳನ್ನು ಬದಲಾಯಿಸಬೇಕೇ ಬೇಡವೇ ಎಂಬ ವಿವೇಚನೆ ಸರಕಾರಕ್ಕೆ ಬಿಟ್ಟದ್ದು. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಸರಕಾರಕ್ಕೆ ಆ ಕರ್ತವ್ಯವಿದೆ. ವಸ್ತುಸ್ಥಿತಿಯ ಸುಧಾರಣೆಮಾಡುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗುವ ತುರ್ತು ದೇಶದ ಮುಂದಿದೆ. 

 

Similar News