ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಏಳು ತಿಂಗಳಿನಿಂದ ಕೋಮಾದಲ್ಲಿರುವ ಮಹಿಳೆ

Update: 2022-10-30 12:15 GMT

ಹೊಸದಿಲ್ಲಿ: ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗಳಾಗಿ ಏಳು ತಿಂಗಳ ಕಾಲ ಕೋಮಾದಲ್ಲಿದ್ದ ಶಫಿಯಾ ಎಂಬ ಮಹಿಳೆಯೊಬ್ಬರು ಕಳೆದ ವಾರ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. 23 ವರ್ಷದ ಮಹಿಳೆಯನ್ನು ಏಪ್ರಿಲ್ 1 ರಂದು ಏಮ್ಸ್‌ ಟ್ರಾಮಾ ಸೆಂಟರಿಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಅಪಘಾತದ ವೇಳೆ ಶಫಿಯಾ 40 ದಿನಗಳ ಗರ್ಭಿಣಿಯಾಗಿದ್ದರು. ಬುಲಂದ್‌ಶರ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಯಿತು. ಆಸ್ಪತ್ರೆಗೆ ದಾಖಲಾದ ಸಮಯದ ಬಳಿಕ ಅವರು ನಾಲ್ಕು ನರಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಅಕ್ಟೋಬರ್ 22 ರಂದು, ಅವರು ಯಾವುದೇ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲದೆ ಸಾಮಾನ್ಯ ರೀತಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ಅವರು 18 ವಾರಗಳ ಗರ್ಭಿಣಿಯಾಗಿದ್ದಾಗ ಮಾಡಿದ ಅಲ್ಟ್ರಾಸೌಂಡ್ ಸ್ಕ್ಯಾನ್ ಅವರ ಮಗು ಆರೋಗ್ಯವಾಗಿದೆ ಎಂದು ದೃಢಪಡಿಸಿತ್ತು.‌ ಸದ್ಯ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಶಫಿಯಾಗೆ ಪ್ರಜ್ಞೆ ಮರಳುವ ಸಾಧ್ಯತೆ ಕೇವಲ 10-15 ಪ್ರತಿಶತದಷ್ಟು ಮಾತ್ರ ಇದೆ ಎಂದು ನರಶಸ್ತ್ರಚಿಕಿತ್ಸಕ ಡಾ.ದೀಪಕ್ ಗುಪ್ತಾ ಹೇಳಿದ್ದಾರೆ.

"ಗರ್ಭಧಾರಣೆಯ ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ನಾವು ಅವರ ಗರ್ಭಧಾರಣೆಯನ್ನು ಕೊನೆಗೊಳಿಸಬೇಕೇ ಅಥವಾ ತಾಯಿ ಇನ್ನೂ ಪ್ರಜ್ಞಾಹೀನರಾಗಿದ್ದರಿಂದ ಗರ್ಭಧಾರಣೆಯನ್ನು ಮುಂದುವರಿಸಬೇಕೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೆವು. ಸರಣಿ 2 ಅಲ್ಟ್ರಾಸೌಂಡ್ ಪರೀಕ್ಷೆಗಳು ಭ್ರೂಣದಲ್ಲಿ ಯಾವುದೇ ಜನ್ಮಜಾತ ವೈಪರೀತ್ಯಗಳು ಇಲ್ಲವೆಂದು ತಿಳಿಸಿತ್ತು. ವೈದ್ಯಕೀಯ ತಂಡ ಕುಟುಂಬಸ್ಥರಲ್ಲಿ ಗರ್ಭಧಾರಣೆಯನ್ನು ಮುಂದುವರಿಸುವ ಆಯ್ಕೆಯನ್ನು ಸೂಚಿಸಿದರು," ಡಾ ಗುಪ್ತಾ ಹೇಳಿದ್ದಾರೆ.

"ತಾಯಿಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗರ್ಭಧಾರಣೆಯನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಕುಟುಂಬಕ್ಕೆ ಬಿಡಲಾಗಿದೆ. ಕುಟುಂಬವು ಗರ್ಭಧಾರಣೆಯನ್ನು ಮುಂದುವರಿಸಲು ನಿರ್ಧರಿಸಿದೆ. ಇದು ಅತ್ಯಂತ ಅಸಾಮಾನ್ಯ ಪ್ರಕರಣವಾಗಿದೆ. AIIMS ನಲ್ಲಿ ನನ್ನ 22 ವರ್ಷಗಳ ನರಶಸ್ತ್ರಚಿಕಿತ್ಸಕ ವೃತ್ತಿಜೀವನದಲ್ಲಿ ನಾನು ಇಂತಹ ಯಾವುದೇ ಪ್ರಕರಣವನ್ನು ಕಂಡಿಲ್ಲ, " ಎಂದು ವೈದ್ಯರು ಹೇಳಿದ್ದಾರೆ.

Similar News