ಭಾರತದಲ್ಲಿ ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಏರಿಕೆ: ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿ.!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ

Update: 2022-10-30 17:31 GMT

ಹೊಸದಿಲ್ಲಿ,ಅ.30: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ವು ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ 2021ರ ಒಂದೇ ವರ್ಷದಲ್ಲಿ ಪೊಕ್ಸೊ ಕಾಯ್ದೆಯಡಿ 53,874 ಪ್ರಕರಣಗಳು ದಾಖಲಾಗಿದ್ದು,ದೇಶಾದ್ಯಂತ ಮಕ್ಕಳ ವಿರುದ್ಧ ಅಪರಾಧ ಘಟನೆಗಳು ಹೆಚ್ಚುತ್ತಿರುವುದು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. 2020ರಲ್ಲಿ ಮಕ್ಕಳ ವಿರುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು 1,28,531 ಪ್ರಕರಣಗಳು ದಾಖಲಾಗಿದ್ದರೆ 2021ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 1,49,404ಕ್ಕೆ ಹೆಚ್ಚಿದೆ,ಅಂದರೆ ಶೇ.16.2ರಷ್ಟು ಏರಿಕೆಯಾಗಿದೆ. ಎನ್‌ಸಿಆರ್‌ಬಿ ಅಂಕಿಅಂಶಗಳಂತೆ ಮಕ್ಕಳ ವಿರುದ್ಧ ಅಪರಾಧದ ಪ್ರತಿ ಮೂರನೇ ಪ್ರಕರಣವು ಪೊಕ್ಸೊ ಕಾಯ್ದೆಯಡಿ ದಾಖಲಾಗಿದೆ.

2021ರಲ್ಲಿ ಪೊಕ್ಸೊ ಕಾಯ್ದೆಯಡಿ ಒಟ್ಟು 33,348 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 33,036 ಬಾಲಕಿಯರಾಗಿದ್ದರೆ,ಬಾಲಕರ ಸಂಖ್ಯೆ 312 ಆಗಿತ್ತು. ಇದಕ್ಕ ಹೋಲಿಸಿದರೆ ಮಕ್ಕಳ ಅಪಹರಣಗಳ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು,67,245 ಪ್ರಕರಣಗಳು ದಾಖಲಾಗಿವೆ. ಇದು ದೇಶಾದ್ಯಂತ ಪೊಲೀಸ್ ಪಡೆಗಳಿಗೆ ಸವಾಲೊಡ್ಡಿದೆ.

2021ರಲ್ಲಿ ಮಕ್ಕಳ ವಿರುದ್ಧ ಅಪರಾಧಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿ (7,783 ಪ್ರಕರಣಗಳು) ಅಗ್ರಸ್ಥಾನದಲ್ಲಿದೆ. ನಾಗಾಲ್ಯಾಂಡ್‌ನಲ್ಲಿ ಕನಿಷ್ಠ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿವೆ.

2021ರಲ್ಲಿ 140 ಮಕ್ಕಳ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಅಂಶವನ್ನು ಎನ್‌ಸಿಆರ್‌ಬಿ ದತ್ತಾಂಶಗಳು ಬಹಿರಂಗಗೊಳಿಸಿವೆ. ಇತರ 1,402 ಮಕ್ಕಳೂ ಕೊಲೆಯಾಗಿದ್ದಾರೆ. ಮಕ್ಕಳ ವಿರುದ್ಧ ಗರಿಷ್ಠ ಅಪರಾಧ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ.

ಕಳೆದ ವರ್ಷ ಭ್ರೂಣಹತ್ಯೆಯ 121 ಪ್ರಕರಣಗಳು ವರದಿಯಾಗಿದ್ದು, ತಲಾ 23 ಪ್ರಕರಣಗಳೊಂದಿಗೆ ಮಧ್ಯಪ್ರದೇಶ ಮತ್ತು ಗುಜರಾತ ಅಗ್ರಸ್ಥಾನದಲ್ಲಿವೆ. ಛತ್ತೀಸ್‌ಗಡ (21) ಮತ್ತು ರಾಜಸ್ಥಾನ (13) ನಂತರದ ಸ್ಥಾನಗಳಲ್ಲಿವೆ. ಮಕ್ಕಳ ಆತ್ಮಹತ್ಯೆಗೆ ಪ್ರಚೋದಿಸಿದ 359 ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ದೇಶಾದ್ಯಂತ 49,535 ಮಕ್ಕಳು ಅಪಹೃತರಾಗಿದ್ದು, ಮಹಾರಾಷ್ಟ್ರ (9,415) ಅಗ್ರಸ್ಥಾನದಲ್ಲಿದೆ. ಮಧ್ಯಪ್ರದೇಶ (8,224),ಒಡಿಶಾ (5,135) ಮತ್ತು ಪ.ಬಂಗಾಳ (4,026) ನಂತರದ ಸ್ಥಾನಗಳಲ್ಲಿವೆ.

29,364 ಮಕ್ಕಳನ್ನು ನಾಪತ್ತೆಯಾಗಿದ್ದಾರೆ ಎಂದು ಘೋಷಿಸಲಾಗಿದ್ದು,ಅವರನ್ನು ಅಪಹರಿಸಲಾಗಿದೆ ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ ಮಕ್ಕಳ ಕಳ್ಳಸಾಗಣೆಯ 1,046 ಪ್ರಕರಣಗಳೂ ವರದಿಯಾಗಿವೆ. 2021ರಲ್ಲಿ ದಿಲ್ಲಿಯಲ್ಲಿ ಸುಮಾರು 5,345 ಮಕ್ಕಳನ್ನು ಅಪಹರಿಸಲಾಗಿದೆ ಎಂದು ಎನ್‌ಸಿಆರ್‌ಬಿ ತಿಳಿಸಿದೆ.

ಕಳೆದ ವರ್ಷ ಬಾಲ ಕಾರ್ಮಿಕ ಕಾಯ್ದೆಯಡಿ ಒಟ್ಟು 982 ಪ್ರಕರಣಗಳು ದಾಖಲಾಗಿದ್ದು,305 ಪ್ರಕರಣಗಳೊಂದಿಗೆ ತೆಲಂಗಾಣ ಅಗ್ರಸ್ಥಾನದಲ್ಲಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 1,062 ಪ್ರಕರಣಗಳು ದಾಖಲಾಗಿದ್ದು,ಕರ್ನಾಟಕ,ತಮಿಳುನಾಡು ಮತ್ತು ಅಸ್ಸಾಂ ಅಗ್ರಸ್ಥಾನಗಳಲ್ಲಿವೆ.

Similar News