ಗುಜರಾತ್‌ನಲ್ಲಿ 22,000 ಕೋ. ರೂ. ವಿಮಾನ ತಯಾರಿಕಾ ಯೋಜನೆಗೆ ಪ್ರಧಾನಿ ಶಂಕು ಸ್ಥಾಪನೆ

Update: 2022-10-30 18:03 GMT

ಗಾಂಧಿನಗರ (ಗುಜರಾತ್), ಅ. 30: ಗುಜರಾತ್‌ನ ವಡೋದರಾದಲ್ಲಿ 22,000 ಕೋ. ರೂ. ವಿಮಾನ ತಯಾರಿಕಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಶಂಕು ಸ್ಥಾಪನೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ವಿಮಾನ ತಯಾರಿಕಾ ಕ್ಷೇತ್ರದಲ್ಲಿ ಆತ್ಮ ನಿರ್ಭರವಾಗುವಲ್ಲಿ ಭಾರತದ ಅತಿ ದೊಡ್ಡ ಹೆಜ್ಜೆ ಎಂದರು.   
‘‘ಮುಂದಿನ ವರ್ಷಗಳಲ್ಲಿ ‘ಭಾರತವನ್ನು ಆತ್ಮ ನಿರ್ಭರ ಮಾಡುವಲ್ಲಿ ರಕ್ಷಣೆ ಹಾಗೂ ವೈಮಾನಿಕ ಕ್ಷೇತ್ರ ಎರಡು ಪ್ರಮುಖ ಸ್ತಂಭಗಳು. 2025ರ ಒಳಗೆ ನಮ್ಮ ರಕ್ಷಣಾ ಉತ್ಪಾದನಾ ಮಟ್ಟ 25 ದಶಲಕ್ಷ ಡಾಲರ್ ಅನ್ನು ದಾಟುತ್ತದೆ.  ಉತ್ತರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಸ್ಥಾಪಿಸಲಾಗಿರುವ ರಕ್ಷಣಾ ಕಾರಿಡಾರ್ ಇದಕ್ಕೆ ಇನ್ನಷ್ಟು ಶಕ್ತಿ ನೀಡಲಿದೆ’’ ಎಂದು ಅವರು ಹೇಳಿದರು. 

‘ಭಾರತದ ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ಇಂತಹ ದೊಡ್ಡ ಹೂಡಿಕೆ ಮಾಡುತ್ತಿರುವುದು ಇದೇ ಮೊದಲು. ತನ್ನ ಸರಕಾರ ಕಳೆದ ಕೆಲವು ವರ್ಷಗಳಿಂದ ಹಲವು ಆರ್ಥಿಕ ಸುಧಾರಣೆಗಳನ್ನು ತರುತ್ತಿದೆ. ಈ ಸುಧಾರಣೆಗಳು ಉತ್ಪಾದನಾ ಕ್ಷೇತ್ರಕ್ಕೆ ಲಾಭವಾಗಲಿದೆ ಹಾಗೂ ಅದಕ್ಕೆ ಉತ್ತೇಜನ ನೀಡಲಿದೆ ಎಂದು ಅವರು ತಿಳಿಸಿದರು. 
‘‘ಜಗತ್ತಿನಲ್ಲಿ ಇಂದು ಅತಿ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಕ್ಷೇತ್ರ ‘ಭಾರತ. ವೈಮಾನಿಕ ಸಂಚಾರದ ವಿಚಾರದಲ್ಲಿ ಜಾಗತಿಕವಾಗಿ ಅಗ್ರ ಮೂರು ದೇಶಗಳಲ್ಲಿ ನಾವು ಇರಲಿದ್ದೇವೆ’’ ಎಂದು ಅವರು ಹೇಳಿದರು. 

ಪೂರೈಕೆ ಸರಪಣಿಯ ಅಡ್ಡಿ, ಕೋವಿಡ್ ಹಾಗೂ ಯುದ್ಧ  ಸೃಷ್ಟಿಸಿದ ಸನ್ನಿವೇಶಗಳ ಹೊರತಾಗಿಯೂ ಉತ್ಪಾದನಾ ವಲಯದಲ್ಲಿ ‘ಭಾರತ  ಬೆಳವಣಿಗೆ ವೇಗವನ್ನು ಮುಂದುವರಿಸಿದೆ ಎಂದು ಪ್ರಧಾನಿ ಅವರು ಹೇಳಿದ್ದಾರೆ. 
ವಡೋದರಾದಲ್ಲಿ ಸಾಗಾಟ ವಿಮಾನಗಳ ತಯಾರಿಕೆ ನಮ್ಮ ಸೇನೆಗೆ ಶಕ್ತಿ ತುಂಬುವುದು ಮಾತ್ರವಲ್ಲದೆ, ವಿಮಾನ ತಯಾರಿಕೆಗೆ ಹೊಸ ಪರಿಸರ  ವ್ಯವಸ್ಥೆಯನ್ನು ಕೂಡ ಅಭಿವೃದ್ಧಿಪಡಿಸಲಿದೆ ಎಂದು ಪ್ರಧಾನಿ ಅವರು ಹೇಳಿದರು. 

ಈ ಸಂದರ್ಭದಲ್ಲಿ ಪ್ರಧಾನಿ ಅವರನ್ನು ಗುಜರಾತ್ ಮುಖ್ಯಮಂತ್ರಿ ‘ಭೂಪೇಂದ್ರ ಪಟೇಲ್ ಹಾಗೂ ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಗೌರವಿಸಿದರು. 

Similar News