ಕರ್ನಾಟಕದ ಎದುರಿನ ಸವಾಲುಗಳು

Update: 2022-10-31 08:37 GMT

ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ನಂತರ ಬಂದ ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಮೊಯ್ಲಿ, ದೇವೇಗೌಡ, ಸಿದ್ದರಾಮಯ್ಯನವರ ಸರಕಾರಗಳು ನಾಡಿನ ಬಹುತ್ವ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತ ಬಂದಿವೆ. ಆದರೆ ಬಿಜೆಪಿ ಸರಕಾರ ಬಂದ ನಂತರ ಅಕ್ರಮ ಗಣಿಗಾರಿಕೆ, ರಿಯಲ್ ಎಸ್ಟೇಟ್ ಮಾಫಿಯಾ ಜೊತೆಗೆ ಕನ್ನಡಿಗರನ್ನು ಜಾತಿ ಮತದ ಆಧಾರದಲ್ಲಿ ವಿಭಜಿಸುವ ಪ್ರವೃತ್ತಿ ಅಪಾಯಕಾರಿಯಾಗಿದೆ.



ಒಂದೇ ದೇಶ, ಒಂದೇ ಭಾಷೆ, ಒಂದೇ ಪಡಿತರ ಚೀಟಿ,ಒಂದೇ ಧರ್ಮ, ( ಒಂದೇ ಜಾತಿ ಇಲ್ಲ) ಹೆಸರಿನಲ್ಲಿ ಬಹುತ್ವ ಭಾರತದ ಅಂತರಾಳದ ಸತ್ವವನ್ನು ನಾಶ ಮಾಡಲು ಹುನ್ನಾರ ನಡೆದ ದಿನಗಳಿವು.ಏಕತ್ವದ ಹೆಸರಿನಲ್ಲಿ ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಯ ಮೇಲೆ ಉತ್ತರ ಭಾರತದ ಆರ್ಯ ಸಂಸ್ಕೃತಿಯನ್ನು ಹೇರಲು ಮಸಲತ್ತು ನಡೆದಿರುವಾಗ ಸಹಜವಾಗಿ ಕನ್ನಡ ಭಾಷೆಯನ್ನಾಡುವ ಭೂ ಪ್ರದೇಶದ ಕರ್ನಾಟಕತ್ವಕ್ಕೆ ಅಳಿವು, ಉಳಿವಿನ ಸವಾಲು ಎದುರಾಗಿದೆ.

ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳ ನಡುವೆ ಸಾಕಷ್ಟು ಭಿನ್ನತೆ ಇದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಉತ್ತರ ಭಾರತ ಸಂಪ್ರದಾಯವಾದಿ ದಕ್ಷಿಣ ಭಾರತ ಪ್ರಗತಿಪರ, ಉತ್ತರ ಭಾರತ, ಅಂಧಶ್ರದ್ಧೆಗಳ ತವರು ,ದಕ್ಷಿಣ ಭಾರತ ತಾರ್ಕಿಕ,ಉತ್ತರ ಭಾರತ ಶೈಕ್ಷಣಿಕ ವಾಗಿ ಹಿಂದುಳಿದಿದೆ, ದಕ್ಷಿಣ ಭಾರತ ಶೈಕ್ಷಣಿಕ ವಾಗಿ ಪ್ರಗತಿ ಸಾಧಿಸಿದೆ.ಉತ್ತರ ಭಾರತದ ಸಂಸ್ಕೃತಿ ಪುರಾತನ, ದಕ್ಷಿಣ ಭಾರತದ ಸಂಸ್ಕೃತಿ ಆಧುನಿಕ ಎಂದೆಲ್ಲ ವಿಶ್ಲೇಷಣೆ ಮಾಡಿದ್ದರು. ಈಗ ಏಕತೆಯ ಹೆಸರಿನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಸಾಂಸ್ಕೃತಿಕ ಅಸ್ಮಿತೆಯನ್ನು ಅಳಿಸಿ ಹಾಕಿ ಮನುವಾದಿ ಹಿಂದುತ್ವ ರಾಜಕಾರಣಕ್ಕೆ ನೆಲವನ್ನು ಹದಗೊಳಿಸುವ ಷಡ್ಯಂತ್ರ ನಡೆದಿದೆ.ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಅಂಶಗಳನ್ನು ಮೆಲುಕು ಹಾಕಬೇಕಾಗಿದೆ.
ಸಂಸ್ಕೃತಿ ಹೇರಿಕೆಯ ಮೊದಲ ಭಾಗವಾಗಿ ಉತ್ತರದ 3-4 ರಾಜ್ಯಗಳ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ದಕ್ಷಿಣದ ಭಾಷೆಗಳ ಮೇಲೆ ಹೇರಲು ದಿಲ್ಲಿ ಸರಕಾರ ಈಗಾಗಲೇ ಕಾರ್ಯೋನ್ಮುಖವಾಗಿದೆ. ಕರ್ನಾಟಕದ ಮೈಲುಗಲ್ಲುಗಳ ಮೇಲೆ, ರೈಲು ಟಿಕೆಟ್‌ಗಳ ಮೇಲೆ, ಕೇಂದ್ರ ಸರಕಾರದ ಕಚೇರಿಗಳಲ್ಲಿ ಕನ್ನಡದ ಸ್ಥಾನವನ್ನು ಹಿಂದಿ ಈಗಾಗಲೇ ಆಕ್ರಮಿಸಿ ಕುಳಿತಿದೆ.

ಕರ್ನಾಟಕ ರಾಜ್ಯವೆಂಬುದು ಸುಮ್ಮನೇ ಆಗಲಿಲ್ಲ ಅದಕ್ಕಾಗಿ ಬಹು ದೊಡ್ಡ ಹೋರಾಟ ನಡೆಯಿತು. ಸ್ವಾತಂತ್ರಾ ನಂತರ ಭಾಷಾವಾರು ಪ್ರಾಂತಗಳ ರಚನೆಗೆ ಚಳವಳಿ ಆರಂಭವಾಯಿತು. ಆಂಧ್ರಪ್ರದೇಶದಲ್ಲಿ ಪೊಟ್ಟಿ ಶ್ರೀರಾಮುಲು ಆಮರಣಾಂತ ಉಪವಾಸ ನಡೆಸಿ ಕೊನೆಯುಸಿರೆಳೆದರು. ಕರ್ನಾಟಕದಲ್ಲಿ ಕೂಡ ಕನ್ನಡ ರಾಜ್ಯ ನಿರ್ಮಾಣಕ್ಕೆ ಹೋರಾಟ ಆರಂಭವಾಯಿತು.ಅಕರಾನಿ ಅಂದರೆ ಅಖಿಲ ಕರ್ನಾಟಕ ನಿರ್ಮಾಣ ಪರಿಷತ್ತು ಅಸ್ತಿತ್ವಕ್ಕೆ ಬಂತು. ವಾಲಿ ಚೆನ್ನಪ್ಪ, ಮುರಗೋಡ ಮಹಾದೇವಪ್ಪ, ಅದರಗುಂಚಿ ಶಂಕರಗೌಡರು, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು, ಕಮ್ಯುನಿಸ್ಟ್ ಪಕ್ಷದ ನಾಯಕರಾದ ಬಿ.ವಿ.ಕಕ್ಕಿಲ್ಲಾಯರು, ಎ.ಜೆ. ಮುಧೋಳ, ಮಂಗಳೂರಿನ ಕೆ.ಆರ್.ಕಾರಂತರು, ಹೀಗೆ ಹಲವಾರು ನೇತಾರರು ಕರ್ನಾಟಕ ರಾಜ್ಯ ನಿರ್ಮಾಣದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಮುಂಚೆ ಕನ್ನಡ ಭಾಷೆಯನ್ನಾಡುವ ಪ್ರದೇಶಗಳು ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿ ಹೋಗಿದ್ದವು. ಧಾರವಾಡ, ಬೆಳಗಾವಿ, ಬಿಜಾಪುರ, ಕಾರವಾರ ಜಿಲ್ಲೆಗಳು ಮುಂಬೈ ಪ್ರಾಂತದಲ್ಲಿ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಮುಂತಾದ ಜಿಲ್ಲೆಗಳು ಹೈದರಾಬಾದ್ ಪ್ರಾಂತ್ಯದಲ್ಲಿ, ಬಳ್ಳಾರಿ, ಮಂಗಳೂರುಗಳು ಮದ್ರಾಸ್ ಪ್ರಾಂತ್ಯದಲ್ಲಿ ಸೇರಿಕೊಂಡಿವೆ. ಹಳೆಯ ಮೈಸೂರಿನ ಬೆಂಗಳೂರು, ತುಮಕೂರು, ಹಾಸನ, ಕೋಲಾರ, ಮುಂತಾದ ಜಿಲ್ಲೆಗಳು ಮೈಸೂರು ರಾಜ್ಯಾಡಳಿತಕ್ಕೆ ಒಳಪಟ್ಟಿದ್ದವು. ಇವುಗಳೆಲ್ಲ ಸೇರಿ ಕರ್ನಾಟಕ ರಾಜ್ಯವಾಯಿತು. ಕನ್ನಡ ಭಾಷಿಕ ಪ್ರದೇಶಗಳನ್ನು ಒಟ್ಟುಗೂಡಿಸಲು ಕೆಂಗಲ್ ಹನುಮಂತಯ್ಯನವರು ಕೂಡ ವಿಶೇಷ ಆಸಕ್ತಿ ವಹಿಸಿ ಶ್ರಮಿಸಿದರು.

ಕರ್ನಾಟಕ ಏಕೀಕರಣ ಸಮಿತಿ ನಿರ್ಮಾಣಕ್ಕಾಗಿ ಐವತ್ತರ ದಶಕದಲ್ಲಿ ದಾವಣಗೆರೆಯಲ್ಲಿ ರಾಜ್ಯ ಸಮ್ಮೇಳನ ನಡೆಯಿತು. ಬಿ.ವಿ.ಕಕ್ಕಿಲ್ಲಾಯರನ್ನು ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಚುನಾಯಿಸ ಲಾಯಿತು.
ಹೀಗೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ದಲ್ಲಿ ಕನ್ನಡ ಪ್ರಧಾನ ಭಾಷೆಯಾಗಿದೆ. ಇದರ ಜೊತೆಗೆ ತುಳು,ಕೊಂಕಣಿ, ಬ್ಯಾರಿ, ಕೊಡಗು, ಉರ್ದು ಮುಂತಾದ ಭಾಷೆಗಳೂ ಇವೆ. ಇವೆಲ್ಲ ಸೇರಿ ಕರ್ನಾಟಕವಾಗಿದೆ. ಈಗ ಏಕ ಸಂಸ್ಕೃತಿ ಮತ್ತು ಏಕ ಭಾಷೆಯ ಹೇರಿಕೆಯಿಂದಾಗಿ ಈ ಬಹುತ್ವ ಕರ್ನಾಟಕ ನಲುಗಿ ಹೋಗಿದೆ.ಹಿಂದಿಯ ಹೇರಿಕೆ ಜೊತೆಗೆ ಸಂಸ್ಕೃತ ಹೇರಿಕೆಯ ಮಸಲತ್ತು ಗಳೂ ನಡೆದಿವೆ.

ಹಿಂದಿ ಭಾಷೆಯನ್ನು ಹೇರಲು ಹೊರಟವರು ಇಂಗ್ಲಿಷ್ ಭಾಷೆಯನ್ನೇಕೆ ಕಲಿಯುತ್ತೀರಿ ಎಂದು ಪ್ರಶ್ನಿಸುತ್ತಾರೆ. ಆದರೆ ಹಿಂದಿಯಂತೆ ಇಂಗ್ಲಿಷ್ ಎಂದೂ ಹೇರಿಕೆಯಾಗಲಿಲ್ಲ. ಅದು ವಸಾಹತು ಶಾಹಿ ಭಾಷೆಯಾಗಿದ್ದರೂ ದಮನಿತ, ತಳ ಸಮುದಾಯದ ಅಕ್ಷರ ಕಲಿಯುವ ಮಕ್ಕಳ ಪಾಲಿಗೆ ಬಿಡುಗಡೆಯ ಭಾಷೆಯಾಗಿದೆ.ಶತಮಾನಗಳಿಂದ ಅಕ್ಷರ ವಂಚಿತರಾದ ಜನರಿಗೆ ಅಂದರೆ ದಲಿತರು, ಆದಿವಾಸಿಗಳು, ಹಿಂದುಳಿದವರಿಗೆ ಇಂಗ್ಲಿಷ್ ವಿಮೋಚನೆಯ ಭಾಷೆಯಾಯಿತು. ಅಂತಲೇ ದಲಿತ ಸಂಘಟನೆಗಳು ಇಂಗ್ಲಿಷ್ ಕಲಿಕೆಯನ್ನು ವಿರೋಧಿಸುವುದಿಲ್ಲ.

ಮನುವಾದಿ ಹಿಂದುತ್ವ ಭಾಷೆಯ ಮೂಲಕ ಕರ್ನಾಟಕದ ಸಂಸ್ಕೃತಿಯ ಮೇಲೆ ಆಕ್ರಮಣ ನಡೆಸುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಈಗ ಇರುವ ಸರಕಾರಗಳು ವೈವಿಧ್ಯತೆಯ ಭಾರತವನ್ನು ಅಳಿಸಿ ಹಾಕುವ ದೂರಗಾಮಿ ಗುರಿಯನ್ನು ಹೊಂದಿವೆ. ಈ ಗುಪ್ತ ಕಾರ್ಯಸೂಚಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಪಾಲಿಗೆ ಕಂಟಕಕಾರಿಯಾಗಿದೆ. ಕನ್ನಡಿಗ ಮುಸಲ್ಮಾನ ವ್ಯಾಪಾರಿಗಳ ಮೇಲೆ ಬಹಿಷ್ಕಾರ ಹಾಕುವ ಈ ಮನುವಾದಿಗಳು ಈ ನೆಲ ಮೂಲದವರಲ್ಲದ ಮಾರವಾಡಿ, ಸಿಂಧಿ, ಮತ್ತಿತರ ಸಮುದಾಯಗಳ ಬಗ್ಗೆ ಸೌಮ್ಯ ಧೋರಣೆ ತಾಳಿವೆ. ಕನ್ನಡದವರಲ್ಲದಿದ್ದರೂ ಹಿಂದೂಗಳಾಗಿದ್ದರೆ ಅವರಿಗೆ ತೊಂದರೆ ನೀಡುವುದಿಲ್ಲ ಎಂಬ ಮನೋಭಾವ ಸರಿಯಲ್ಲ. ಇದರರ್ಥ ಮಾರವಾಡಿ ಇಲ್ಲವೇ ಸಿಂಧಿ ವ್ಯಾಪಾರಿಗಳನ್ನು ಹೊರದಬ್ಬ ಬೇಕೆಂದಿಲ್ಲ. ಅವರು ಈ ನೆಲದಲ್ಲಿ ಹಲವಾರು ವರ್ಷಗಳಿಂದ ನೆಲೆಸಿ ಬದುಕು ಕಟ್ಟಿಕೊಂಡಿದ್ದಾರೆ. ಇವರೆಲ್ಲ ಸೇರಿ ಕರ್ನಾಟಕವಾಗಿದೆ. ಇವರ ನಡುವೆ ಒಡಕು ಮೂಡಿಸುವವರು ಕನ್ನಡಿಗರಲ್ಲ.ಅವರನ್ನು ಮೊದಲು ಕನ್ನಡಿಗರು ದೂರವಿಡಬೇಕು.

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸುವ ಜೊತೆಗೆ ಭಾರತದ ಒಕ್ಕೂಟ ವ್ಯವಸ್ಥೆಗೆ ಎದುರಾಗಿರುವ ಅಪಾಯದ ಬಗ್ಗೆ ಯೋಚಿಸಬೇಕಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ತೆರಿಗೆ, ವಿದ್ಯುತ್, ಹೀಗೆ ಕರ್ನಾಟಕಕ್ಕೆ ಸಂಬಂಧಿಸಿದ ಸಂವಿಧಾನಾತ್ಮಕ ಹಕ್ಕುಗಳನ್ನು ಅಪಹರಿಸಲು ಹೊರಟಿದೆ.ಇದಕ್ಕೆ ಕರ್ನಾಟಕದಂತೆ ಇತರ ರಾಜ್ಯಗಳೂ ಬಲಿಯಾಗುತ್ತಿವೆ.ಏಕತ್ವದ ಹೆಸರಿನಲ್ಲಿ ರಾಜ್ಯಗಳ ಸ್ವಾಯತ್ತತೆ ಯನ್ನು ನಾಶ ಮಾಡುವ ಮಸಲತ್ತುಗಳು ನಡೆಸಿವೆ. ಪ್ರಜಾಪ್ರಭುತ್ವದಲ್ಲಿ, ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದವರ ಕೈಯಲ್ಲಿ ಅಧಿಕಾರ ಸಿಕ್ಕಿರುವುದರಿಂದ ರಾಜ್ಯಗಳ ಮುಖ್ಯಮಂತ್ರಿಗಳು ಹಿಂದಿನ ಕಾಲದ ಸಾಮಂತರಂತೆ ಕೇಂದ್ರಕ್ಕೆ ತೆರಿಗೆ ವಸೂಲಿ ಮಾಡಿಕೊಡುವುದಕ್ಕೆ ಮಾತ್ರ ಬಳಕೆಯಾಗುತ್ತಿದ್ದಾರೆ.

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಎಂಬುದು ಈಗ ಸುಳ್ಳಾಗಿದೆ. ರಾಜ್ಯಗಳಿಂದ ಜಿಎಸ್‌ಟಿ ಹೆಸರಿನಲ್ಲಿ ತೆರಿಗೆ ವಸೂಲಿ ಮಾಡುವ ಕೇಂದ್ರ ಸರಕಾರ ಕರ್ನಾಟಕದ ಯಾವ ನೋವು, ಸಂಕಟಗಳಿಗೂ ಸ್ಪಂದಿಸುತ್ತಿಲ್ಲ. ಕರ್ನಾಟಕದ ಬಿಜೆಪಿ ಸರಕಾರಕ್ಕೂ ಗಟ್ಟಿ ಧ್ವನಿಯಲ್ಲಿ ರಾಜ್ಯದ ಪಾಲಿನ ನ್ಯಾಯವಾದ ಪಾಲನ್ನು ಕೇಳುವ ಧೈರ್ಯವಿಲ್ಲ. ಹೀಗಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ.

ಈ ಅನ್ಯಾಯವನ್ನು ಪ್ರತಿರೋಧದ ಮೂಲಕ ಎದುರಿಸಿ ರಾಜ್ಯದ ಪಾಲಿನ ನ್ಯಾಯವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕರ್ನಾಟಕದ ಪರವಾಗಿ ಧ್ವನಿ ಎತ್ತುವ ಸರಕಾರ ಬರಬೇಕಾಗಿದೆ.ಕರ್ನಾಟಕ ದ ರಾಜಕೀಯ ಪರಂಪರೆ ಗೆ ಪ್ರಗತಿಪರ ಹಿನ್ನೆಲೆಯಿದೆ. ಪಕ್ಷ ಯಾವುದೇ ಆದರೂ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ನಂತರ ಬಂದ ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಮೊಯ್ಲಿ, ದೇವೇಗೌಡ, ಸಿದ್ದರಾಮಯ್ಯನವರ ಸರಕಾರಗಳು ನಾಡಿನ ಬಹುತ್ವ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತ ಬಂದಿವೆ.
ಆದರೆ ಬಿಜೆಪಿ ಸರಕಾರ ಬಂದ ನಂತರ ಅಕ್ರಮ ಗಣಿಗಾರಿಕೆ, ರಿಯಲ್ ಎಸ್ಟೇಟ್ ಮಾಫಿಯಾ ಜೊತೆಗೆ ಕನ್ನಡಿಗರನ್ನು ಜಾತಿ ಮತದ ಆಧಾರದಲ್ಲಿ ವಿಭಜಿಸುವ ಪ್ರವೃತ್ತಿ ಅಪಾಯಕಾರಿಯಾಗಿದೆ.

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಚಿಂತನೆ ನಡೆಸುವ ಜೊತೆಗೆ ಈ ನೆಲದ ಬಹುತ್ವ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಬೇಕಾಗಿದೆ.

Similar News