×
Ad

ಇದು ಸಂವಿಧಾನ ಮುಗಿಸುವ ಮುನ್ಸೂಚನೆ

Update: 2025-10-13 11:06 IST

ಕಾನೂನಿನ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗೆ ಪರಿಹಾರ ಇಲ್ಲದಿರುವಾಗ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಎಂದು ಯಾವುದೇ ವ್ಯಕ್ತಿಗೆ ಗಂಭೀರವಾಗಿ ಅಥವಾ ಲಘು ಧಾಟಿಯಲ್ಲಿ ಹೇಳುವ ಸ್ವಾತಂತ್ರ್ಯವೂ ಭಾರತದ ನಾಗರಿಕರಾಗಿರುವ ನ್ಯಾಯಾಧೀಶರಿಗೆ ಇಲ್ಲವೇ? ತಾವು ಆಡಿದ ಮಾತಿನ ಬಗ್ಗೆ ಅಪಾರ್ಥ ಕಲ್ಪಿಸುವ ಸೂಚನೆಗಳು ಕಂಡು ಬಂದಾಗ ಮುಖ್ಯ ನ್ಯಾಯಮೂರ್ತಿಗಳು ತಾವು ಎಲ್ಲ ಧರ್ಮಗಳನ್ನು ಗೌರವಿಸುವುದಾಗಿ ಹೇಳಿದರು. ತಮ್ಮ ನಿರೀಕ್ಷೆಗೆ ತಕ್ಕಂತೆ ತೀರ್ಪು ಬರದಿದ್ದರೆ ಮುಖ್ಯ ನ್ಯಾಯಮೂರ್ತಿಗಳ ಪೀಠದತ್ತ ಚಪ್ಪಲಿ ಎಸೆಯುವುದು ಅಸಹನೆಯ ಅತಿರೇಕವಲ್ಲದೇ ಬೇರೇನೂ ಅಲ್ಲ. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನ್ಯಾಯಾಲಯದ ಹೊರಗೆ ಅಪಪ್ರಚಾರ ಆರಂಭಿಸಿದವರು ತಮ್ಮಿಷ್ಟದಂತೆ ನ್ಯಾಯಾಲಯ ನಡೆದುಕೊಳ್ಳಬೇಕೆಂದು ಬಯಸುತ್ತಾರೆ.

ಹಿಂದೂ ರಾಷ್ಟ್ರ ನಿರ್ಮಾಣದ ಒಂದೊಂದೇ ಸೂಚನೆಗಳು ಅಸ್ಪಷ್ಟವಾಗಿ ಗೋಚರಿಸುತ್ತಿವೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರ ಮೇಲೆ ಚಪ್ಪಲಿ ಎಸೆತ ಪ್ರಕರಣ ಮತ್ತು ಅದರ ಸುತ್ತಮುತ್ತಲೂ ಸಾಮಾಜಿಕ ಜಾಲ ತಾಣದಲ್ಲಿ ಬರುತ್ತಿರುವ ಅತ್ಯಂತ ಅಸಭ್ಯ, ಅವಾಚ್ಯ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಹಲವಾರು ಸುಳಿವು ಗಳು ಕಾಣುತ್ತಿವೆ.ಪೂರ್ಣಚಂದ್ರ ತೇಜಸ್ವಿ ಅವರು ಐವತ್ತು ವರ್ಷಗಳ ಹಿಂದೆ ಬರೆಯುತ್ತ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಹೊರಟ ಇವರು ಒಂದು ವೇಳೆ ಮುಸಲ್ಮಾನರನ್ನೆಲ್ಲ ಪಾಕಿಸ್ತಾನಕ್ಕೆ ಕಳಿಸಿದ ನಂತರ ಸನಾತನ ಹಿಂದೂ ಧರ್ಮದ ಜೀವನ ಪದ್ಧ್ದತಿಯನ್ನು ಅನುಷ್ಠಾನಕ್ಕೆ ತರುವುದೆಂದರೆ ಬ್ರಾಹ್ಮಣರ ಓಣಿಯಲ್ಲಿ ಲಿಂಗಾಯತರು ಇರಬಾರದು, ಲಿಂಗಾಯತರ ಓಣಿಯಲ್ಲಿ ಕುರುಬರು ಇರಬಾರದು, ಒಕ್ಕಲಿಗರ ಓಣಿಯಲ್ಲಿ ಯಾದವರು ಇರಬಾರದು, ಅಸ್ಪಶ್ಯರ ಓಣಿಯಲ್ಲಿ ಉಳಿದವರಾರೂ ಇರಬಾರದು ಎಂದು ಲಾಠಿ ಹಿಡಿದು ಶುದ್ಧೀಕರಣಕ್ಕೆ ನಿಲ್ಲುತ್ತಾರೆ ಎಂದು ವಿಶ್ಲೇಷಿಸಿದ್ದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನ ನಂತರದ ಸಭೆಯಿಂದ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಸಂಘದ ನಾಯಕ ಕೃಷ್ಣ ಗೋಪಾಲ ಅವರು ಸಾವಿರಾರು ವರ್ಷಗಳ ಹಿಂದಿನ ಭಾರತವನ್ನ್ನು ಮರು ಸೃಷ್ಟಿಸುವುದು ಸಂಘದ ಗುರಿಯಾಗಿದೆ ಎಂದು ಹೇಳಿದರು. ಸಾವಿರಾರು ವರ್ಷಗಳ ಹಿಂದಿನ ಭಾರತ ಅಂದರೆ ಏನು ಎಂಬುದರ ಬಗ್ಗೆ ಅವರು ವಿವರಿಸಿ ಹೇಳಲಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆ ನೆಲೆಗೊಂಡು, ಬಲಿಷ್ಠವಾಗಿದ್ದ ಭಾರತ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಸಂವಿಧಾನದ ಬದಲಾಗಿ ಸನಾತನ ಧರ್ಮದ ಅಡಿಪಾಯದ ಮೇಲೆ ಸಂಘ ಪರಿಕಲ್ಪನೆಯ ಭಾರತ ಪುನರ್ ನಿರ್ಮಿಸುವುದು ಅವರ ಗುರಿಯಾಗಿದೆ. ಈಗಂತೂ ಎದುರಾಳಿಗಳೇ ಇಲ್ಲದಂಥ ಮಟ್ಟಿಗೆ ಅದು ವ್ಯಾಪಕವಾಗಿದೆ. ಶತಮಾನಗಳಿಂದ ಸಮಾಜದಲ್ಲಿ ಬೇರು ಬಿಟ್ಟಿರುವ ಸೌಹಾರ್ದವನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ತನಗೆ ಅಡ್ಡಿಯಾಗಿರುವ ನೇತಾರರ ತೇಜೋವಧೆ ಮಾಡಲು ಅದು ಮುಂದಾಗಿದೆ.ಅಂತಲೇ ಚಲನಚಿತ್ರ ನಿರ್ದೇಶಕ ಪ್ರಕಾಶ ರಾಜ್ ಮೇಹು ಅವರು ಮೊದಲು ಮಹಾತ್ಮ್ಮಾ ಗಾಂಧೀಜಿಯವರನ್ನು ಅಪಮೌಲ್ಯಗೊಳಿಸಲು ಪ್ರಯತ್ನಿಸಿದರು ನಂತರ ಜವಾಹರಲಾಲ್ ನೆಹರೂ ಮತ್ತು ಅವರ ಕುಟುಂಬದ ಮೇಲೆ ದಾಳಿ ಆರಂಭಿಸಿದರು, ಈಗ ಡಾ.ಅಂಬೇಡ್ಕರ್ ಅವರ ಮೇಲೆ ಕೈ ಹಾಕಿದ್ದಾರೆ. ಈ ಅಪಾಯಕಾರಿ ಸಂದರ್ಭದಲ್ಲಿ ಗಾಂಧಿವಾದ ಮತ್ತು ಅಂಬೇಡ್ಕರ್ ವಾದಗಳ ಒಂದು ಗೂಡದಿದ್ದರೆ ಗೋಡ್ಸೆವಾದ ಈ ದೇಶವನ್ನು ಆಳುತ್ತದೆ ಎಂಬ ಹಳೆಯ ಮಾತು ಈಗ ನಿಜವಾಗುತ್ತದೆ ಎಂದು ಹೇಳಿದರು.ಇದನ್ನು ನಾನು ಆಗಾಗ ಹೇಳುತ್ತ ಬರೆಯುತ್ತಲೇ ಇರುತ್ತೇನೆ.

ಡಾ.ಅಂಬೇಡ್ಕರ್ ಚಾರಿತ್ರ್ಯವಧೆಗೆ ಹಿಂದಿನಿಂದಲೂ ಪ್ರಯತ್ನಿಸುತ್ತಲೇ ಇದ್ದಾರೆ. ಒಂದೆಡೆ ಅಂಬೇಡ್ಕರ್ ವಿಚಾರ ಧಾರೆಯ ಮೇಲೆ ದಾಳಿ ಮಾಡುತ್ತ ಇನ್ನೊಂದೆಡೆ ಕೇವಲ ತೋರಿಕೆಗಾಗಿ ಅವರನ್ನು ಹೊಗಳುತ್ತ ಅಮಾಯಕರನ್ನು ದಾರಿ ತಪ್ಪಿಸಲು ಯತ್ನಿಸುತ್ತಲೇ ಇದ್ದಾರೆ. ಇದಕ್ಕೆ ಒಂದು ಉದಾಹರಣೆ ಅಂದರೆ ಅರುಣ್ ಶೌರಿ ಅವರು ಅಂಬೇಡ್ಕರ್ ಅವರನ್ನು ನಿಂದಿಸಿ ಬರೆದ ಪುಸ್ತಕ. ಇದು ಬಿಡುಗಡೆಯಾದ ನಂತರ ಅದರ ಪರಿಣಾಮವನ್ನು ಸೂಕ್ಷ್ಮ್ಮವಾಗಿ ಗಮನಿಸಿದ ಸಂಘ ಪರಿವಾರ ಕೆಲ ಕಾಲ ಜಾಣ ಮೌನವನ್ನು ತಾಳಿತು. ಕೇಂದ್ರದ ಅಧಿಕಾರ ಕೈಗೆ ಸಿಕ್ಕ ನಂತರ ಹನ್ನೊಂದು ವರ್ಷಗಳ ನಂತರ ಮತ್ತೆ ದಾಳಿಯನ್ನು ಆರಂಭಿಸಿದೆ. ಇದಕ್ಕೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲಿನ ಚಪ್ಪಲಿ ತೂರಾಟದ ಘಟನೆ ಒಂದು ಉದಾಹರಣೆಯಾಗಿದೆ. ಅದರ ನಂತರ ಸಾಮಾಜಿಕ ಜಾಲ ತಾಣದಲ್ಲಿ ಅತ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಅಪಪ್ರಚಾರವನ್ನು ಅವಲೋಕಿಸಿದರೆ ಬರಲಿರುವ ದಿನಗಳ ಬಗ್ಗೆ ಸಹಜವಾಗಿ ಆತಂಕ ಉಂಟಾಗುತ್ತದೆ.

ಇದು ಆಕಸ್ಮಿಕವಲ್ಲ, ಮತಿಗೆಟ್ಟ ವ್ಯಕ್ತಿಯೊಬ್ಬನ ದುಸ್ಸಾಹಸ ಮಾತ್ರವಲ್ಲ. ಇದು ಭಾರತದ ಸಂವಿಧಾನವನ್ನು ಬುಡಮೇಲು ಮಾಡಿ , ಪ್ರಜಾಪ್ರಭುತ್ವವನ್ನು ಹೂತು ಹಾಕಿ ಮನುವಾದಿ ಸನಾತನ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಮಹಾ ಸಂಚಿನ ಪ್ರಯೋಗಗಳಲ್ಲಿ ಒಂದು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಸನಾತನಿ ಎಂದು ಹೇಳಿಕೊಂಡ ವಕೀಲನೊಬ್ಬ ಚಪ್ಪಲಿ ಎಸೆದ ಘಟನೆಯನ್ನು ಕ್ಷುಲ್ಲಕ ಎಂದು ಮರೆತು ಬಿಡುವಂಥದಲ್ಲ. ನ್ಯಾಯಮೂರ್ತಿಗಳೇನೋ ಅವನನ್ನು ಕ್ಷಮಿಸಿದ್ದಾರೆ.ಆದರೆ ಆತ ಕ್ಷಮಾರ್ಹನಲ್ಲ.

ಮಹಾರಾಷ್ಟ್ರದ ಭೂಷಣ್ ರಾಮಕೃಷ್ಣ ಗವಾಯಿ ಅವರು 2025 ರ ಮೇ 14 ರಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿ ‘ಜೈ ಭೀಮ್’ ಎಂದು ಘೋಷಿಸಿದಾಗಲೇ ಅವರು ಸಂಘ ಪರಿವಾರದ ಫ್ಯಾಶಿಸ್ಟರ ಉರಿಗಣ್ಣಿಗೆ ಗುರಿಯಾದರು.

ಚುನಾವಣಾ ಆಯೋಗ, ರಿಸರ್ವ್‌ಬ್ಯಾಂಕ್, ಯೋಜನಾ ಆಯೋಗ ಹೀಗೆ ಎಲ್ಲ ಸಾಂಸಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆೆಯನ್ನು ಸರ್ವನಾಶ ಮಾಡಿ ಬುಗುರಿಯಂತೆ ಆಡಿಸುತ್ತಿರುವ ನಾಗಪುರದ ಸಂವಿಧಾನೇತರ ಸಂಸ್ಥೆಯ ಸೂತ್ರದ ಗೊಂಬೆಯಾದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನಿಗಾ ವಹಿಸಿತು.ಅಕ್ರಮ ಬುಲ್ಡೋಜರ್ ನ್ಯಾಯದ ಬಗ್ಗೆ ನೀಡಿದ ತೀರ್ಪು, ಕಾಶ್ಮೀರಕ್ಕೆ ರಾಜ್ಯದ ಸ್ಥಾನ ಮಾನ ನೀಡುವ ಆದೇಶ, ಚುನಾವಣಾ ಬಾಂಡ್‌ಗಳ ನಿಷೇಧ, ಇವೆಲ್ಲವುಗಳು ಒಂದು ಕಾರಣವಾದರೆ, ದಲಿತ ಸಮುದಾಯದಿಂದ ಬಂದು ಬೌದ್ಧ ಧರ್ಮ ಸ್ವೀಕರಿಸಿದ ನ್ಯಾಯಾಂಗದ ಉನ್ನತ ಸ್ಥಾನವನ್ನು ಅಲಂಕರಿಸಿದ್ದನ್ನು ಸಹಿಸಲಾಗದಿರುವುದು ಇನ್ನೊಂದು. ಈ ಅಸಹನೆ ನ್ಯಾಯಮೂರ್ತಿ ಗವಾಯಿಯವರು ಅಧಿಕಾರ ಸ್ವೀಕರಿಸಿ ತಮ್ಮ ಸ್ವಂತ ರಾಜ್ಯ ಮಹಾರಾಷ್ಟ್ರಕ್ಕೆ ಹೋದಾಗ ಸ್ಪೋಟವಾಯಿತು. ಮುಂಬೈನಲ್ಲಿ ಗವಾಯಿ ಅವರನ್ನು ಸ್ವಾಗತಿಸಲು ಶಿಷ್ಟಾಚಾರದ ಪ್ರಕಾರ ರಾಜ್ಯದ ಮುಖ್ಯಮಂತ್ರಿ ಬರಬೇಕಾಗಿತ್ತು, ಬರಲಿಲ್ಲ. ಬೇರೆ ಮಂತ್ರಿಗಳು, ಬರಲಿಲ್ಲ. ರಾಜ್ಯದ ಮುಖ್ಯ ಕಾರ್ಯದರ್ಶಿಯೂ ಬರಲಿಲ್ಲ,

ಪಾಲಿಕೆಯ ಮೇಯರ್ ಬರಲಿಲ್ಲ. ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಯೂ ಬರಲಿಲ್ಲ. ಆದರೂ ಇದನ್ನು ಗವಾಯಿಯವರು ಗಂಭಿರವಾಗಿ ಪರಿಗಣಿಸಲಿಲ್ಲ. ನ್ಯಾಯಮೂರ್ತಿ ಗವಾಯಿಯವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇನ್ನೊಂದು ಮಸಲತ್ತು ಮಾಡಿದರು. ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆಯಲಿದ್ದ ಆರೆಸ್ಸೆಸ್‌ನ ಕಾರ್ಯಕ್ರಮವೊಂದಕ್ಕೆ ಗವಾಯಿಯವರ ತಾಯಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದರು. ಅಂಬೇಡ್ಕರ್ ವಾದಿಯಾದ ತಾವು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಅವರು ಖಂಡ ತುಂಡವಾಗಿ ಹೇಳಿದರು. ಹೀಗೆ ಹಲವಾರು ಕಾರಣಗಳಿಂದಾಗಿ ಗವಾಯಿ ಅವರು ಮನುವಾದಿಗಳ ಕೋಪಕ್ಕೆ ಗುರಿಯಾದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಚಪ್ಪಲಿ ಎಸೆದವ ಬರೀ ವ್ಯಕ್ತಿಯಲ್ಲ.ಅವನ ಹಿಂದೆ ಒಂದು ಸಿದ್ಧಾಂತವಿದೆ. ಅದು ಗಾಂಧೀಜಿಯನ್ನು ಬಲಿ ತೆಗೆದುಕೊಂಡ ಸಿದ್ಧ್ಧ್ದಾಂತ. ತಳ ಸಮುದಾಯದಿಂದ ಬಂದವರು ನ್ಯಾಯಾಂಗದ ಉನ್ನತ ಸ್ಥಾನಕ್ಕೆ ಹೋಗುವುದನ್ನು ಅದು ಸಹಿಸುವುದಿಲ್ಲ. ನ್ಯಾಯ ಮೂರ್ತಿ ಗವಾಯಿ ಅವರ ತಾಯಿ ಕೋಮುವಾದಿಗಳ ಕಾರ್ಯಕ್ರಮಕ್ಕೆ ಹೋಗಲು ತಿರಸ್ಕರಿಸಿದ್ದು ಕೂಡ ಸನಾತನಿಗಳ ಈ ಆಕ್ರೋಶಕ್ಕೆ ಕಾರಣವಿರಬಹುದು.ಬರಲಿರುವ ದಿನಗಳು ಇನ್ನೂ ಅಪಾಯಕಾರಿ ಇರಬಹುದು. ನಿರಂತರ ಎಚ್ಚರ ಇಂದಿನ ಅನಿವಾರ್ಯತೆ.

ಗಾಂಧೀಜಿಯವರ ಹತ್ಯೆ ನಡೆದಾಗ ದೇಶದ ಕೆಲವೆಡೆ ಸಿಹಿ ಹಂಚಿದರು. ಈಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಚಪ್ಪಲಿ ತೂರಿದ ಘಟನೆಯ ಬಗ್ಗೆ ಅದನ್ನು ಸಮರ್ಥಿಸುವ ಗೋಡ್ಸೆ ಮರಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಂಜು ಕಾರುತ್ತಿದ್ದಾರೆ. ನ್ಯಾಯ ಮೂರ್ತಿ ಗವಾಯಿ ಅವರು ಹಿಂದೂ ದೇವರನ್ನು ಅವಮಾನಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿದ್ದಾರೆ.ಇದು ನಮ್ಮ ದೇಶದ ಇಂದಿನ ಪರಿಸ್ಥಿತಿ. ಕಳೆದ ನೂರು ವರ್ಷಗಳಲ್ಲಿ ಯಾವ ಪರಿ ಬ್ರೈನ್ ವಾಷ್ ಮಾಡಿದ್ದಾರೆ ಅಂದರೆ ಮನುಷ್ಯತ್ವದ ಜೀವ ಸೆಲೆಯನ್ನೇ ನಾಶ ಮಾಡಿದ್ದಾರೆ. ಸಹನೆ, ಸೌಹಾರ್ದ ಇರಬೇಕಾದ ಮೆದುಳಿಗೆ ವಿಷ ತುಂಬಿದ್ದಾರೆ.ಇದು ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ವಿರುದ್ಧ ನಡೆಯುತ್ತಿರುವ ಘನ ಘೋರ ಸಂಚಿನ ಮುನ್ಸೂಚನೆಯಾಗಿದೆ.

ವಿಷಾದ ಪಡಬೇಕಾದ ಸಂಗತಿ ಅಂದರೆ ಇದನ್ನು ಬ್ರಾಹ್ಮಣೇತರ ಶೂದ್ರ ಸಮುದಾಯಗಳ ಭಕ್ತರೇ ಅಸಭ್ಯ ಭಾಷೆಯಲ್ಲಿ ಸಮರ್ಥಿಸಿದ್ದಾರೆ. ಇದನ್ನು ಯಾವ ಬೆಲೆ ತೆತ್ತಾದರೂ ವಿರೋಧಿಸಿ ನಮ್ಮ ಸಂವಿಧಾನ, ಬಹುತ್ವ ಭಾರತ ಹಾಗೂ ಪ್ರಜಾಪ್ರಭುತ್ವಗಳನ್ನು ಉಳಿಸಿಕೊಳ್ಳಬೇಕಾಗಿದೆ.ಇದು ಎಷ್ಟು ವ್ಯವಸ್ಥಿತವಾಗಿದೆಯೆಂದರೆ ಚಪ್ಪಲಿ ತೂರಾಟದ ಘಟನೆ ನಡೆಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರಿಗೆ ಅವಮಾನ ಎಂಬ ವಾಟ್ಸ್‌ಆ್ಯಪ್‌ಯುನಿವರ್ಸಿಟಿಯ ಗೋಬೆಲ್ಸ್ ಪ್ರಚಾರ ಆರಂಭವಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಒಂದೊಂದಾಗಿ ಮುಗಿಸಿ ಮನುವಾದಿ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಸಂಚಿನ ಮೊದಲ ಹೆಜ್ಜೆ ಇದು. ಆ ವಕೀಲ ಚಪ್ಪಲಿ ತೂರಿದ್ದನ್ನು ಒಪ್ಪಿಕೊಂಡು ದೇವರ ಆದೇಶದಂತೆ ಚಪ್ಪಲಿ ಎಸೆದೆ ಎಂದು ಹೇಳಿದ್ದಾನೆ. ಇನ್ನು ಮುಂದೆ ಇಂಥ ವಿಕೃತ,

ಕೋಮುವಾದಿ ದುಷ್ಟರಿಗೆ ಹಾದಿ ಬೀದಿಯಲ್ಲಿ ಒದ್ದು ನಮಗೂ ದೇವರ ಆದೇಶವಾಗಿದೆ. ಅದಕ್ಕಾಗಿ ಒದ್ದೆವು ಎಂದು ಹೇಳುವ ದಿನಗಳು ಬಂದರೆ ಅಚ್ಚರಿ ಪಡಬೇಕಿಲ್ಲ. ಮುಖ್ಯ ನ್ಯಾಯಮೂರ್ತಿಗಳು ದೇವರಿಗೆ ಅವಮಾನ ಮಾಡಿದರೆಂದು ನಡೆಯುತ್ತಿರುವ ಪ್ರಚಾರಕ್ಕೆ ಏನಾದರೂ ಅರ್ಥವಿದೆಯೇ? ಮಧ್ಯ ಪ್ರದೇಶದ ಖುಜುರಾಹೊ ದೇವಸ್ಥಾನ ಸಂಕೀರ್ಣದಲ್ಲಿ ಮಹಾ ವಿಷ್ಣುವಿನ ಪ್ರತಿಮೆಯನ್ನು ಮತ್ತೆ ಸ್ಥಾಪಿಸಲು ಆದೇಶ ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಕೆಲವು ಮಾತುಗಳನ್ನು ಆಡಿದ್ದು ನಿಜ. ಸದರಿ ಅರ್ಜಿಯನ್ನು ತಿರಸ್ಕರಿಸಿದ ಅವರು ಈ ಸಮಸ್ಯೆಯ ಪರಿಹಾರಕ್ಕೆ ದೇವರಲ್ಲಿ ಪ್ರಾರ್ಥಿಸಿ ಎಂದು ಹೇಳಿರುವುದು ದೇವರಿಗೆ ಅವಮಾನ ಮಾಡಿದಂತೆ ಹೇಗಾಗುತ್ತದೆ?

ತಮ್ಮ ಮುಂದೆ ಬರುವ ಯಾವುದೇ ಅರ್ಜಿಗೆ ಕಾನೂನಿನ ಆಯಾಮ ಇಲ್ಲದಿದ್ದರೆ ಅಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಹೇಗೆ ಸಾಧ್ಯವಾಗುತ್ತದೆ? ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಆಡಿದ ಮಾತುಗಳ ತಾತ್ಪರ್ಯ ಇಷ್ಟೇ ಆಗಿದೆ. ಇಲ್ಲಿ ಸನಾತನ ಧರ್ಮದ ಪ್ರಸ್ತಾವವೇ ಆಗಿಲ್ಲ.ಕಾನೂನಿನ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗೆ ಪರಿಹಾರ ಇಲ್ಲದಿರುವಾಗ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಎಂದು ಯಾವುದೇ ವ್ಯಕ್ತಿಗೆ ಗಂಭೀರವಾಗಿ ಅಥವಾ ಲಘು ಧಾಟಿಯಲ್ಲಿ ಹೇಳುವ ಸ್ವಾತಂತ್ರ್ಯವೂ ಭಾರತದ ನಾಗರಿಕರಾಗಿರುವ ನ್ಯಾಯಾಧೀಶರಿಗೆ ಇಲ್ಲವೇ? ತಾವು ಆಡಿದ ಮಾತಿನ ಬಗ್ಗೆ ಅಪಾರ್ಥ ಕಲ್ಪಿಸುವ ಸೂಚನೆಗಳು ಕಂಡು ಬಂದಾಗ ಮುಖ್ಯ ನ್ಯಾಯಮೂರ್ತಿಗಳು ತಾವು ಎಲ್ಲ ಧರ್ಮಗಳನ್ನು ಗೌರವಿಸುವುದಾಗಿ ಹೇಳಿದರು. ತಮ್ಮ ನಿರೀಕ್ಷೆಗೆ ತಕ್ಕಂತೆ ತೀರ್ಪು ಬರದಿದ್ದರೆ ಮುಖ್ಯ ನ್ಯಾಯಮೂರ್ತಿಗಳ ಪೀಠದತ್ತ ಚಪ್ಪಲಿ ಎಸೆಯುವುದು ಅಸಹನೆಯ ಅತಿರೇಕವಲ್ಲದೇ ಬೇರೇನೂ ಅಲ್ಲ. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನ್ಯಾಯಾಲಯದ ಹೊರಗೆ ಅಪಪ್ರಚಾರ ಆರಂಭಿಸಿದವರು ತಮ್ಮಿಷ್ಟದಂತೆ ನ್ಯಾಯಾಲಯ ನಡೆದುಕೊಳ್ಳಬೇಕೆಂದು ಬಯಸುತ್ತಾರೆ. ಸಾರ್ವಜನಿಕವಾಗಿಯೂ ತಮ್ಮ ಸಿದ್ಧಾಂತ ಮತ್ತು ವಿಚಾರವನ್ನು ಒಪ್ಪದಿದ್ದವರ ಮೇಲೆ ಇವರು ಹೇಗೆ ಹಲ್ಲೆ ಮಾಡಿದರೆಂಬುದು ಎಲ್ಲರಿಗೂ ಗೊತ್ತಿದೆ.ಇಂಥದೇ ಗೋಡ್ಸೆ ಮನಸ್ಸುಗಳೇ ಅನೇಕ ಅನಾಹುತ ಮಾಡಿವೆ.ದಾಭೋಲ್ಕರ್, ಗೋವಿಂದ ಪನ್ಸಾರೆೆ, ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗಳು ಮಾತ್ರವಲ್ಲ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಪ್ರಶಾಂತ್ ಕಿಶೋರ್ ಹಾಗೂ ಜೀತದಾಳುಗಳ ಪರವಾಗಿ ಹೋರಾಟ ಮಾಡುತ್ತ ಬಂದಿದ್ದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ನಡೆದ ಹಲ್ಲೆಗಳನ್ನು ಹೇಗೆ ಮರೆಯಲು ಸಾಧ್ಯ?

ಈ ಭಾರತವನ್ನು ಸಂವಿಧಾನದ ಅಡಿಪಾಯದ ಮೇಲೆ ನಿರ್ಮಿಸಲಾಗಿದೆಯೇ ಹೊರತು ಸನಾತನ ಇಲ್ಲವೇ ಯಾವುದೇ ಧರ್ಮದ ಮೇಲೆ ಅಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ. ಸಂವಿಧಾನಕ್ಕಿಂತ ಯಾವುದೂ ದೊಡ್ಡದಲ್ಲ. ನಿಜವಾದ ಧಾರ್ಮಿಕ ವ್ಯಕ್ತಿ ತನ್ನ ಪಾಡಿಗೆ ತಾನು ನಂಬಿದ ದೇವರನ್ನು ಆರಾಧಿಸುತ್ತ ಇರುತ್ತಾನೆ. ಇದಕ್ಕೆ ಯಾರ ಅಭ್ಯಂತರವೂ ಇರುವುದಿಲ್ಲ.

ಇದು ಅತ್ಯಂತ ಖಾಸಗಿ ವಿಷಯ.ತನ್ನ ನಂಬಿಕೆಯ ದೇವರಲ್ಲಾಗಲಿ, ಧರ್ಮದಲ್ಲಾಗಲಿ ನಿಜವಾದ ನಂಬಿಕೆ ಇರುವ ವ್ಯಕ್ತಿ , ಇಲ್ಲವೇ ಸಮುದಾಯಗಳು ಅದನ್ನು ಎಂದೂ ಬಹಿರಂಗವಾಗಿ ತೋರ್ಪಡಿಸುವುದಿಲ್ಲ. ದೇವರನ್ನಾಗಲಿ, ಧರ್ಮವನ್ನಾಗಲಿ ತಮ್ಮ ರಾಜಕೀಯ ಕಾರ್ಯಸೂಚಿಗೆ ಬಳಸಿಕೊಳ್ಳುವ ಅಧಾರ್ಮಿಕ ಮಸಲತ್ತುಗಳು ನಡೆದಾಗ ವಿವಾದಗಳು ಹುಟ್ಟಿಕೊಳ್ಳುತ್ತವೆ. ದೇವರನ್ನು ಮೂರ್ತಿ ಮಾಡಿ ಕಲ್ಲು ಕಟ್ಟಡದಲ್ಲಿ ಇಡಲು ಹೊರಟವರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಅಂತಲೇ ಬಸವಣ್ಣನವರು ‘ನನ್ನ ಕಾಲೇ ಕಂಬ ದೇಹವೇ ದೇಗುಲ, ಶಿರವೇ ಹೊನ್ನ ಕಳಶ’ ಎಂದು ಹೇಳಿದರು. ದೇಶದಲ್ಲಿ ಮನಸ್ಸು ಕಟ್ಟುವ ಕಾರ್ಯಕ್ಕೆ ಮೊದಲು ಆದ್ಯತೆ ನೀಡಬೇಕಾಗಿದೆ.ಮನಸ್ಸ್ಸು ಒಡೆಯುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News