ಎಲ್ಲದಕ್ಕೂ ಖಾಸಗಿ ಪಾಲುಗಾರಿಕೆ ಬೇಕೇ?
ಈಗ ವಿಜಯಪುರ ಎಂದು ಪುನರ್‌ನಾಮಕರಣಗೊಂಡಿರುವ ರಾಜಧಾನಿ ಬೆಂಗಳೂರಿಗೆ 675 ಕಿ.ಮೀ. ಅಂತರದಲ್ಲಿ ಇದೆ. ಕ್ರಾಂತಿ ಕಿರಣ ಬಸವಣ್ಣನವರು ಜನಿಸಿದ, ಆದಿಲ್ ಶಾಹಿಗಳು 200ಕ್ಕೂ ಹೆಚ್ಚು ವರ್ಷ ಆಳಿದ ಈ ಬಿಜಾಪುರದಲ್ಲಿ ಕಳೆದ ಒಂದು ತಿಂಗಳಿನಿಂದ ಶಾಂತಿಯುತ ಹೋರಾಟ ನಡೆಯುತ್ತಿದೆ. ತಮ್ಮ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕೆಂದು ಪಕ್ಷಭೇದ ಮರೆತು ಜನರು ಧ್ವನಿಯೆತ್ತಿದ್ದಾರೆ. ರಾಜಧಾನಿಗೆ ದೂರದಲ್ಲಿ ಇರುವ ಕಾರಣಕ್ಕೋ ಅಥವಾ ಇನ್ಯಾವ ಕಾರಣಕ್ಕೋ ಗೊತ್ತಿಲ್ಲ, ಇವರ ಬೇಡಿಕೆ ಸರಕಾರಕ್ಕೆ ಇದುವರೆಗೆ ಕೇಳಿಸಿಲ್ಲ. ಕೇಳಿದರೂ ಪ್ರತಿಕ್ರಿಯೆ ಇಲ್ಲ. ಹೀಗಾಗಿ ಚಳವಳಿ ಮುಂದುವರಿದಿದೆ.
ಆಗಾಗ ಬರಗಾಲಕ್ಕೆ ತುತ್ತಾಗುವ ಅವಿಭಜಿತ ಬಿಜಾಪುರ ಜಿಲ್ಲೆಯಲ್ಲಿ ಐದು ನದಿಗಳು ಹರಿಯುತ್ತಿವೆ. ಅಂತಲೇ ಇದನ್ನು ಕರ್ನಾಟಕದ ಪಂಜಾಬ್ ಎಂದು ಕರೆಯಲಾಗುತ್ತದೆ. ಇಲ್ಲಿನ ಜನ ತ್ಯಾಗಜೀವಿಗಳು. ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ರಾಷ್ಟ್ರ ರಕ್ಷಣಾ ನಿಧಿಗಾಗಿ ಸರಕಾರ ಮನವಿ ಮಾಡಿದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಿಜಾಪುರಕ್ಕೆ ಆಹ್ವಾನಿಸಿ ತಲಾಭಾರ ಮಾಡಿ ಅವರ ತೂಕದಷ್ಟು ಚಿನ್ನವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಕೊಟ್ಟವರು ಬಿಜಾಪುರ ಜಿಲ್ಲೆಯ ಜನ.
ಜಿಲ್ಲೆಯಲ್ಲಿ ನಿರಂತರ ಬರಗಾಲದ ಕಾರಣಕ್ಕೆ ಸ್ವಂತದ ಜಮೀನು ಹೊಂದಿರುವ ರೈತರೂ ಜೀವನೋಪಾಯಕ್ಕಾಗಿ ದೊಡ್ಡ ನಗರ ,ಅಕ್ಕಪಕ್ಕದ ರಾಜ್ಯಗಳಿಗೆ ಗುಳೆ (ವಲಸೆ) ಹೋಗುತ್ತಾರೆ.
ಗೋವಾ, ಮಂಗಳೂರು, ಉಡುಪಿ, ಮುಂಬೈ, ಬೆಂಗಳೂರು, ಎಲ್ಲಿ ಹೋದಲ್ಲಿ ಬಿಜಾಪುರದ ಜನ ನಮಗೆ ಸಿಗುತ್ತಾರೆ. ಅಂತಲೆ ನಾಡಿನ ಪತ್ರಿಕಾ ರಂಗದ ಪಿತಾಮಹ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸ್ಥಾಪಕ ಮೊಹರೆ ಹಣಮಂತರಾಯರು ನಾವು ಬಿಜಾಪುರದ ಜನ ಎಲ್ಲಿ ಹೋದಲ್ಲೆಲ್ಲ ಬೆಳೆಯುತ್ತೇವೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.ಇಲ್ಲಿನ ಜನ ಬೀದಿಗಿಳಿದು ಹೋರಾಡುವುದು ವಿರಳ. ಒಮ್ಮೆ ಬೀದಿಗೆ ಬಂದರೆ, ಗೆಲ್ಲುವವರೆಗೆ ಬಿಡುವುದಿಲ್ಲ. ಹಿಂದೆ ಅರುವತ್ತರ ದಶಕದಲ್ಲಿ ಆಲಮಟ್ಟಿ ಅಣೆಕಟ್ಟು ಆಗಲೇ ಬೇಕೆಂದು ಬೀದಿಗಿಳಿದು ಚಳವಳಿಯನ್ನು ಆರಂಭಿಸಿದ ಬಿಜಾಪುರದ ಜನರು ಗೆಲ್ಲುವವರೆಗೆ ಬಿಡಲಿಲ್ಲ. ಅದಕ್ಕಾಗಿ ತಮ್ಮ ಮನೆೆ, ಮಾರು ಭೂಮಿ, ಊರುಗಳನ್ನು ಕಳೆದುಕೊಂಡರು. ಆದರೆ ಹಿಂಜರಿಯಲಿಲ್ಲ. ಈಗ ಅವರು ಮತ್ತೆ ಬೀದಿಗೆ ಬಂದಿದ್ದಾರೆ.
ಬಿಜಾಪುರಕ್ಕೆ ಸರಕಾರಿ ವೈದ್ಯಕೀಯ ಕಾಲೇಜು ಆಗಲೇಬೇಕೆಂದು ಈಗ ಬಿಜಾಪುರದ ಜನರು ಬೀದಿಗೆ ಬಂದಿದ್ದಾರೆ. ಇವರ ಬೇಡಿಕೆಗೆ ಮೊದಲು ಪ್ರೇರಣೆ ಬಂದಿದ್ದು ಸರಕಾರದಿಂದಲೇ ಅಂದರೆ ತಪ್ಪಿಲ್ಲ. ಬಿಜಾಪುರ ನಗರದಲ್ಲಿ ಖಾಸಗಿ ಸಹಭಾಗಿತ್ವದ (ಪಿಪಿಪಿ) ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲರು ಸದನದಲ್ಲಿ ಹೇಳಿದ್ದರು. ಇದನ್ನು ಗಮನಿಸಿದ ಬಿಜಾಪುರದ ಕೆಲವು ಜನಪರ, ಪ್ರಗತಿಪರ ಸಂಘಟನೆಗಳ ಪ್ರಮುಖರು, ‘ಬಿಜಾಪುರಕ್ಕೆ ಖಾಸಗಿ ಪಾಲುಗಾರಿಕೆಯ ವೈದ್ಯಕೀಯ ಕಾಲೇಜು ಬೇಡ ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಆಗಬೇಕು’ ಎಂದು ಆಗ್ರಹಿಸಿದರು. ಸರಕಾರಕ್ಕೆ ಮನವಿ ಮಾಡಿದರು. ಸರಕಾರ ಸ್ಪಂದಿಸದಿದ್ದಾಗ ಬೀದಿಗಿಳಿದು ಚಳವಳಿ ಆರಂಭಿಸಿದರು. ಶಾಂತಿಯುತ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು. ಧರಣಿ ಆರಂಭಿಸಿದ ಕಳೆದ ಒಂದು ತಿಂಗಳಿನಲ್ಲಿ ಜಿಲ್ಲೆಯ ಇಬ್ಬರು ಮಂತ್ರಿಗಳು (ಎಂ.ಬಿ.ಪಾಟೀಲ್ ಮತ್ತು ಶಿವಾನಂದ ಪಾಟೀಲ್) ಸತ್ಯಾಗ್ರಹ ನಡೆಯುತ್ತಿರುವ ಜಾಗಕ್ಕೆ ಬಂದು ಭರವಸೆಯನ್ನು ನೀಡಿ ಹೋದರು. ಕೆಲವು ಶಾಸಕರು ಬಂದರು, ಹೋದರು ಸರಕಾರದಿಂದ ನಿರ್ದಿಷ್ಟ ಉತ್ತರ ಬಂದಿಲ್ಲ.ಆದ್ದರಿಂದ ಧರಣಿ ಮುಂದುವರಿದಿದೆ.
ಖಾಸಗಿ ಪಾಲುದಾರಿಕೆಯ ಮೆಡಿಕಲ್ ಕಾಲೇಜನ್ನು ಬಿಜಾಪುರದ ಜನರು ವಿರೋಧಿಸುವುದಕ್ಕೆ ನ್ಯಾಯ ಸಮ್ಮತವಾದ ಹಲವಾರು ಕಾರಣಗಳಿವೆ. ಇದನ್ನು ಹೀಗೇ ಬಿಟ್ಟರೆ ಕ್ರಮೇಣ ಸರಕಾರಿ ಸ್ವಾಮ್ಯದ ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿಯವರಿಗೆ ನೀಡುತ್ತಾರೆ. ಇಂಥ ಲಂಗು ಲಗಾಮಿಲ್ಲದ ಖಾಸಗೀಕರಣದಿಂದ ಜನಸಾಮಾನ್ಯರಿಗೆ, ಬಡವರಿಗೆ ತುಂಬಾ ತೊಂದರೆಯಾಗುತ್ತದೆ ಎಂಬುದು ಅವರ ಅಭಿಪ್ರಾಯ. ಸಚಿವ ಶಿವಾನಂದ ಪಾಟೀಲರ ಪ್ರಕಾರ, ಸರಕಾರಿ ವೈದ್ಯಕೀಯ ಕಾಲೇಜಿಗೆ ಬಹಳ ಹಣವೇನೂ ಬೇಕಾಗಿಲ್ಲ ಎಂಬುದಾಗಿದೆ. ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಆಗ್ರಹಿಸಿ ಬಿಜಾಪುರದ ಜನ ಒಂದೆಡೆ ಹೋರಾಡುತ್ತಿದ್ದರೆ,
ಇನ್ನೊಂದೆಡೆ ಬಿಜಾಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್(ಯತ್ನಾಳ್) ಕರ್ನಾಟಕದ ತುಂಬಾ ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತ ತಿರುಗಾಡುತ್ತಿದ್ದಾರೆ. ಮುಸ್ಲಿಮರಿಗೆ ಸಾರ್ವಜನಿಕ ಜಾಗಗಳಲ್ಲಿ ನಮಾಝ್ ಮಾಡಲು ಬಿಡಬಾರದು ಎಂಬಂಥ ಮಾತುಗಳನ್ನು ಪ್ರತಿನಿತ್ಯವೂ ಅವರು ಆಡುತ್ತಾರೆ. ಅವರಿಗೂ ಸರಕಾರಿ ವೈದ್ಯಕೀಯ ಕಾಲೇಜು ಬೇಡವಾಗಿದೆ. ಖಾಸಗಿ ಸಹ ಭಾಗಿತ್ವದ್ದಾದರೆ ತಾನೂ ಹಣ ಹೂಡಿಕೆ ಮಾಡುವುದಾಗಿ ಅವರು ಹೇಳುತ್ತಿದ್ದಾರೆ.
ಶಿಕ್ಷಣ, ಆರೋಗ್ಯದಂಥ ಸೂಕ್ಷ್ಮ್ಮ ಕ್ಷೇತ್ರಗಳನ್ನು ಲಾಭಕ್ಕಾಗಿ ಮೀಸಲಿಡಬಾರದು. ಇವು ಸೇವಾ ಕ್ಷೇತ್ರಗಳು. ಸರಕಾರವೇ ಇವುಗಳನ್ನು ನಿರ್ವಹಿಸಬೇಕು. ಇವು ಜನತೆಯ ಹಣದಿಂದಲೇ ನಡೆಯಬೇಕು. ಸರಕಾರಿ ಸ್ವಾಮ್ಯವೆಂದರೆ ಜನತೆಯ ಸ್ವಾಮ್ಯ.ಸರಕಾರದ ಹಣವೆಂದರೆ ನಾನಾ ವಿಧದಲ್ಲಿ ಸರಕಾರದ ಬೊಕ್ಕಸಕ್ಕೆ ಸೇರುವ ಜನರ ಹಣ.ಆದರೆ ಜಾಗತೀಕರಣದ ಪರಿಣಾಮವಾಗಿ ಮಾರುಕಟ್ಟೆ ಆರ್ಥಿಕತೆಯನ್ನು ಜನತೆಯ ಮೇಲೆ ಹೇರಿದಾಗ ಜನಕಲ್ಯಾಣ ಯೋಜನೆಗಳು, ಕಾರ್ಯಕ್ರಮಗಳು ಒಂದೊಂದಾಗಿ ಹಳ್ಳ ಹಿಡಿಯುತ್ತ ಬಂದವು. ಈಗಂತೂ ಯಾವುದೇ ಸರಕಾರವಿರಲಿ ಕ್ರಮೇಣ ಸೇವಾಕ್ಷೇತ್ರದ ಹೊಣೆಗಾರಿಕೆಯಿಂದ ಹಿಂದೆ ಸರಿದು ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿರುವುದು ಕಳವಳಕಾರಿ ಸಂಗತಿಯಾಗಿದೆ.
ಜಾಗತೀಕರಣದ ಜಾತಕ ಬಿಚ್ಚಿದರೆ ಅನೇಕ ಸಂಗತಿಗಳು ಗೋಚರಿಸುತ್ತವೆ. ಎಂಭತ್ತರ ದಶಕದ ಕೊನೆಯಲ್ಲಿ ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿತ್ತು. ಅದರ ಬೆನ್ನಲ್ಲೇ ಪೂರ್ವ ಯುರೋಪಿನ ಕಮ್ಯುನಿಸ್ಟ್ ಸರಕಾರಗಳು ನೆಲಕಚ್ಚಿ
ದವು. ಆವಾಗ ವಕ್ಕರಿಸಿದ್ದು ಈ ಜಾಗತೀಕರಣ ಎಂಬ ಪಿಡುಗು. ಹೆಸರೇನೋ ಆಕರ್ಷಕವಾಗಿತ್ತು. ಆದರೆ, ಜಗತ್ತು ಅದನ್ನು ಒಪ್ಪಿಕೊಂಡ ಆನಂತರ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜನಕಲ್ಯಾಣದ ಯೋಜನೆಗಳೆಲ್ಲ ಹಳ್ಳ ಹಿಡಿದವು. ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಜನ ಬಳಕೆಗಾಗಿ ಅಥವಾ ಜನರ ಅವಶ್ಯಕತೆಗಾಗಿ ಎಂಬ ಪರಿಕಲ್ಪನೆ ಮಾಯವಾಗಿ ಎಲ್ಲವೂ ಲಾಭಕ್ಕಾಗಿ, ವ್ಯಾಪಾರಕ್ಕಾಗಿ ಎಂಬ ಉದಾರವಾದಿ ವ್ಯಾಧಿ ಹಬ್ಬಿದ ಆನಂತರ ವಿಶ್ವದ ಚಿತ್ರವೇ ಬದಲಾಯಿತು.
ಈ ಬಮಾರುಕಟ್ಟೆ ಆರ್ಥಿಕತೆಯೊಂದಿಗೆ ಮನುಷ್ಯರನ್ನು ಜಾತಿ, ಮತ, ಭಾಷೆಯ ಆಧಾರದಲ್ಲಿ ವಿಭಜಿಸಿ ಆಳುವ ಕುತಂತ್ರವನ್ನು ಆಡಳಿತ ವರ್ಗ ಅತ್ಯಂತ ವ್ಯವಸ್ಥಿತವಾಗಿ ನಡೆಸಿತು. ಜನರಿಗೆ ಅವರ ಹಸಿವು, ನಿರುದ್ಯೋಗ, ನೋವು, ಯಾತನೆಗಳು ಅರಿವಿಗೆ ಬಾರದಂತೆ ದೇವರು, ಧರ್ಮಗಳ ಮತ್ತೇರಿಸಲಾಯಿತು. ಮತ್ತೇರಿಸಿಕೊಂಡ ಜನರಲ್ಲಿ ಕ್ರಮೇಣ ಮನುಷ್ಯತ್ವದ ಅಂತರ್ಜಲ ಬತ್ತತೊಡಗಿತು. ಈಗ ಅದರ ಪರಿಣಾಮವನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ.
ಭಾರತದಲ್ಲಿ ತೊಂಭತ್ತರ ದಶಕದಲ್ಲಿ ಮಾರುಕಟ್ಟೆ ಆರ್ಥಿಕ ನೀತಿಯ ಜೊತೆ ಕೋಮುವಾದವೂ ಹೆಡೆಯೆತ್ತಿತು. ಅದೇ ಸಂದರ್ಭದಲ್ಲಿ ಬಿಜೆಪಿ ನಾಯಕ ಅಡ್ವಾಣಿ ರಥಾರೂಢರಾಗಿ ಗುಜರಾತಿನ ಸೋಮನಾಥದಿಂದ ಅಯೋಧ್ಯೆಗೆ ಹೊರಟರು. ಆನಂತರ ದೇಶದಲ್ಲಿ ಏನೇನಾಯಿತು ಎಂಬುದು ಎಲ್ಲರಿಗೂ ತಿಳಿದ ವಿಷಯ.
ಇದನ್ನು ಉಲ್ಲೇಖಿಸುವ ಉದ್ದೇಶವೇನೆಂದರೆ ಜಾಗತೀಕರಣ, ನವ ಉದಾರೀಕರಣದ ಬಗ್ಗೆ ದೇಶದಲ್ಲಿ ಎಲ್ಲೂ ಚರ್ಚೆಯಾಗದಂತೆ ರಾಮ ನಾಮಸ್ಮರಣೆ ಅದರ ಜೊತೆ ಜೊತೆಗೆ ನಾಥೂರಾಮ್ ಗೋಡ್ಸೆ ಜನ್ಮದಿನಾಚರಣೆಗಳು ಆರಂಭವಾದವು. ಹೊಸ ದಿಕ್ಕಿಗೆ ಸಾಗಬೇಕಾಗಿದ್ದ ಹೊಸ ಪೀಳಿಗೆ ಜನ ವಿಭಜಕ ಹುಚ್ಚು ಹೊಳೆಯಲ್ಲಿ ತೇಲಿ ಹೋದರು. ಈ ಪ್ರವಾಹದ ಎದುರು ಈಜಿ ದಡ ಮುಟ್ಟಬೇಕಾದ ಚಳವಳಿಗಳು ಕೈ ಸೋತು ಇದುವರೆಗೆ ಮುಳುಗುತ್ತ, ಏಳುತ್ತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿವೆ.
ಕಳೆದ ನಲವತ್ತು ವರ್ಷಗಳಿಂದ ಅಂದರೆ ನಿರ್ದಿಷ್ಟವಾಗಿ ತೊಂಭತ್ತರ ದಶಕದಿಂದ ದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು, ಯಾವ ಆರ್ಥಿಕ, ಸಾಮಾಜಿಕ ಕಾರ್ಯಕ್ರಮ ಜಾರಿಗೆ ಬರಬೇಕು? ಯಾವ ವಿಷಯದ ಸುತ್ತ ಚರ್ಚೆಯಾಗಬೇಕು ಎಂಬುದನ್ನು ತೀರ್ಮಾ ನಿಸುತ್ತ ಬಂದವರು ಈಗ ಅಧಿಕಾರ ಹಿಡಿದು ಕೂತಿದ್ದಾರೆ. ಅವರು ಕಾರ್ಯಸೂಚಿಯನ್ನು ಸಿದ್ಧಪಡಿಸುತ್ತಾರೆ. ನಾವು ಅದರ ಸುತ್ತ ಚರ್ಚಿಸುತ್ತಾ ಬರುತ್ತಿದ್ದೇವೆ. ಅವರ ಅರ್ಥಹೀನ ಭಾವನಾತ್ಮಕ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಅದರಲ್ಲೇ ಕಾಲಹರಣ ಮಾಡುತ್ತ ನಮ್ಮ ಕಾರ್ಯಕ್ರಮಗಳನ್ನೇ ಮರೆತಿದ್ದೇವೆ ಇಲ್ಲವೇ ಜನರ ಬಳಿ ಅವುಗಳನ್ನು ತಲು ಪಿಸುವಲ್ಲಿ ವಿಫಲಗೊಂಡಿದ್ದೇವೆ.
ಜಾತಿ ರಹಿತ, ವರ್ಗ ರಹಿತ ಸಮಾಜದ ಸ್ಥಾಪನೆಯ ಕನಸು ಇವತ್ತಿನದ್ದಲ್ಲ. ಜಗತ್ತಿನ ಇತರೆಡೆಗಳಂತೆ ನಮ್ಮ ದೇಶದಲ್ಲೂ ಬುದ್ಧ, ಮಹಾವೀರ, ಗುರು ನಾನಕ, ಬಸವಣ್ಣ, ವಿವೇಕಾನಂದ, ಭಗತ್‌ಸಿಂಗ್ ಎಲ್ಲರೂ ಆ ಸುಂದರ ಸಮಾಜ ಸ್ಥಾಪನೆಗಾಗಿ ವಿಚಾರ ಪ್ರತಿಪಾದಿಸುತ್ತ ಹೋರಾಟ ಮಾಡುತ್ತ ಬಂದರು.ಬಸವಣ್ಣನವರಂತೂ ‘ದೇಹವೇ ದೇಗುಲ’ ಎಂದು ಹೇಳಿ ಮಂದಿರ ಎಂಬ ಸ್ಥಾವರ ಸಂಸ್ಕೃತಿಯನ್ನು ತಿರಸ್ಕರಿಸಿದವರು. ಕಾಯಕ ಜೀವಿಗಳ ಹೊಸ ಚಳವಳಿಯನ್ನು ಕಟ್ಟಿದವರು.
ಆದರೆ, ಈ ಮಹಾಪುರುಷರ ಆಶಯ ಕನಸಾಗಿಯೇ ಉಳಿಯಿತು. ಇಂಥ ಸುಂದರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಕೊಂಚ ಯಶಸ್ಸು ಸಾಧಿಸಿದ್ದು ಕಾರ್ಲ್‌ಮಾರ್ಕ್ಸ್ ಪ್ರತಿಪಾದಿಸಿದ ಸಮತೆಯ ಸಿದ್ಧಾಂತ. ಒಂದು ಶತಮಾನ ಕಾಲ ಅದು ಜಗತ್ತಿನಲ್ಲಿ ಇಂಥ ಸಮಾಜವೊಂದರ ನಿರ್ಮಾಣ ಸಾಧ್ಯವೆಂದು ಸಾಧಿಸಿ ತೋರಿಸಿತು. ರಶ್ಯದಲ್ಲಿ ಲೆನಿನ್ ನಡೆಸಿದ ಪ್ರಯೋಗ ಕೂಡ 1917ರಲ್ಲಿ ಸಾಕಾರಗೊಂಡು 1988ರಲ್ಲಿ ವಿಫಲಗೊಂಡಿತು. ಭಾರತದಲ್ಲಿ ಇಂಥ ಉದಾತ್ತ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದವರು ಬಾಬಾಸಾಹೇಬ ಅಂಬೇಡ್ಕರ್. ಜಾತಿ, ಅಸ್ಪಶ್ಯತೆ, ಗುಲಾಮಗಿರಿ, ಅಸಮಾನತೆ, ಅನಕ್ಷರತೆ ಇವುಗಳಿಂದ ತುಂಬಿದ ಸಮಾಜವೊಂದರಲ್ಲಿ ಎಲ್ಲರೂ ಉಸಿರಾಡುವ ವಾತಾವರಣ ನಿರ್ಮಾಣವಾಗಿದ್ದು ಬಾಬಾಸಾಹೇಬರ ಸಂವಿಧಾನದಿಂದ. ಇದಕ್ಕೆ ಪೂರಕವಾಗಿ ಜನ ಹೋರಾಟಗಳು ಕೂಡ ನಡೆದಿರುವುದೂ ನಿಜ.
ಇಂಥ ಉದಾತ್ತ ಆಶಯಗಳನ್ನು ಹೊಂದಿದ್ದ ಭಾರತೀಯ ಸಮಾಜ ಇಂದು ಮತ್ತೆ ಅಡ್ಡ ದಾರಿ ಹಿಡಿದಿದೆ. ಬಡತನ, ನಿರುದ್ಯೋಗ, ಅಸಮಾನತೆ, ಅನಕ್ಷರತೆ, ಮಹಿಳಾ ಶೋಷಣೆ, ಅಸ್ಪಶ್ಯತೆ, ಮಕ್ಕಳ ಯಾತನೆ, ಪರಿಸರದ ವಿನಾಶ ಇವ್ಯಾವುದರ ಬಗೆಗೂ ಈಗ ಚರ್ಚೆಯಾಗುತ್ತಿಲ್ಲ. ಎಲ್ಲ ಅನಿಷ್ಟಕ್ಕೂ ಅವರೇ ಕಾರಣ ಎಂದು ನಿರ್ದಿಷ್ಟ ಜನಾಂಗವೊಂದನ್ನು ಗುರಿ ಮಾಡಿ, ಅವರು ಏನು ಊಟ ಮಾಡುತ್ತಾರೆ? ಯಾವ ಬಟ್ಟೆ ಧರಿಸುತ್ತಾರೆ? ಅವರಿಗೆ ಎಷ್ಟುಮಕ್ಕಳಿವೆ? ಇಂತಹ ವಿಷಯಗಳ ಸುತ್ತ ನಾವೆಲ್ಲ ಚರ್ಚಿಸುವಂತೆ ಮಾಡುವಲ್ಲಿ ಪ್ರಭುತ್ವದ ಸೂತ್ರ ಹಿಡಿದವರು ಮತ್ತು ಅವರನ್ನು ನಿಯಂತ್ರಿಸುತ್ತಿರುವವರು ಯಶಸ್ವಿಯಾಗುತ್ತಾ ಬಂದಿದ್ದಾರೆ.
ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಂಡು ಮತ್ತೆ ಚುನಾವಣೆ ಗೆಲ್ಲಲು ಇಂಥ ಭಾವನಾತ್ಮಕ ವಿಷಯಗಳ ಅನಿವಾರ್ಯತೆ ಅವರಿಗಿದೆ. ದೇಶದ ಸಂಪತ್ತನ್ನು ಅಂಬಾನಿ, ಅದಾನಿಗಳ ತಿಜೋರಿಗೆ ತುಂಬುತ್ತ, ಅವರ ತೆರಿಗೆಯನ್ನು ಮನ್ನಾ ಮಾಡುತ್ತಾ, ಇನ್ನೊಂದೆಡೆ ದೇಶದ ಪ್ರಜೆಗಳು ಲೀಟರ್‌ಗೆ 100 ರೂ. ಕೊಟ್ಟು ಪೆಟ್ರೋಲ್ ಮತ್ತು ಡೀಸೆಲ್ ಕೊಳ್ಳುವಂತೆ, 1000 ರೂ. ತೆತ್ತು ಅಡಿಗೆ ಅನಿಲ ಸಿಲಿಂಡರ್ ಖರೀದಿಸುವಂತೆ ಮಾಡಿದವರ ಬಗ್ಗೆ ಚರ್ಚಿಸದೇ ಮುಸ್ಲಿಮರಿಗೆ ಎಷ್ಟು ಮಕ್ಕಳು? ಕ್ರೈಸ್ತರು ಮತಾಂತರ ಮಾಡುತ್ತಾರೆ, ಅವರೇಕೆ ಬುರ್ಖಾ ಧರಿಸುತ್ತಾರೆ? ಎಂಬ ವಿಷಯಗಳ ಸುತ್ತ ಚರ್ಚೆ ನಡೆಯುವಂತೆ ಮಾಡುವ ಅವರು ನಿರ್ಮಿಸಿದ ಹೊಂಡದಲ್ಲಿ ನಾವೆಲ್ಲ ಬಿದ್ದಿದ್ದೇವೆ.
ದೇಶದ್ರೋಹದ ಸುಳ್ಳು ಆರೋಪ ಹೊರಿಸಿ ವರವರರಾವ್, ಆನಂದ್ ತೇಲ್ತುಂಬ್ಡೆ, ಸುಧಾ ಭಾರದ್ವಾಜ್ ಅವರಂತಹ ಹೆಸರಾಂತ ಚಿಂತಕರನ್ನು ಜೈಲಿಗೆ ತಳ್ಳಲಾಯಿತು.. ಇವರ ಪೈಕಿ ಎಂಭತ್ನಾಲ್ಕು ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ ಕೊನೆಯುಸಿರೆಳೆದರು. ಈ ನಡುವೆ ‘ಬ್ರಿಟಿಷ್ ಕಾಲದ ಈ ದೇಶದ್ರೋಹ ಕಾಯ್ದೆಯ ಅಗತ್ಯವೇನಿದೆ. ಅದನ್ನೇಕೆ ಈವರೆಗೆ ಇಟ್ಟುಕೊಂಡಿದ್ದೀರಿ’ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ವಿಷಯದ ಬಗ್ಗೆ ಮಾತಾಡಬೇಕಾದ ನಾವು ಅಪ್ರಸ್ತುತ್ ವಾದ ಜನಸಂಖ್ಯಾ ನಿಯಂತ್ರಣ, ಬುರ್ಖಾ ನಿಷೇಧದ ಬಗ್ಗೆ ತೌಡು ಕುಟ್ಟುತ್ತಿದ್ದೇವೆ.
ಸರಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಮಾತ್ರವಲ್ಲ, ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆಗಳಂಥ ವಿಷಯಗಳ ಬಗ್ಗೆ ಈಗ ಚರ್ಚೆಯಾಗುತ್ತಿಲ್ಲ . ದೇಶದಲ್ಲಿ ಈಗ 65 ಕೋಟಿ ನಿರುದ್ಯೋಗಿಗಳಿದ್ದಾರೆ. ಇದು ನ್ಯಾಷನಲ್ ಸರ್ವೇ ಸ್ಯಾಂಪಲ್ ಪ್ರಕಾರ, ಕಳೆದ 45 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಎಂದು ದಾಖಲಾಗಿದೆ. ಸರಕಾರದ ವಿವಿಧ ಇಲಾಖೆಗಳಲ್ಲಿ 52 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದೇ ಖಾಲಿ ಉಳಿಸಲಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಬಳಿ ಇಂಥ ಪ್ರಶ್ನೆ ಗಳಿಗೆ ಉತ್ತರ ಇಲ್ಲ. ಈ ಪ್ರಶ್ನೆಗಳನ್ನು ಜನ ಕೇಳಬಾರದೆಂದು ದಾರಿ ತಪ್ಪಿಸಲು ಮಂದಿರ, ಮಸೀದಿ, ಮತಾಂತರ, ಇಂಥ ವಿಷಯಗಳನ್ನು ಚರ್ಚೆಗೆ ಬಿಡಲಾಗುತ್ತದೆ. ನಾವು ಅಂದರೆ ಪ್ರಗತಿಪರರು ಅವರ ಅರ್ಥಹೀನ ಭಾವನಾತ್ಮಕ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಜನಸಾಮಾನ್ಯರನ್ನು ಬಾಧಿಸುತ್ತಿರುವ, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವುದನ್ನು ಮರತೇ ಬಿಡುತ್ತೇವೆ.
ಕೋವಿಡ್ ಮೊದಲ ಅಲೆಯ ಕಾಲದಲ್ಲಂತೂ ಜನಸಾಮಾನ್ಯರು ಕೈಯಲ್ಲಿ ಇರುವ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರೆ ಅಂಬಾನಿ, ಅದಾನಿಯಂತಹ ಕೆಲವೇ ಕೆಲವು ಬಂಡವಾಳಗಾರರ ಸಂಪತ್ತು ಲಕ್ಷಾಂತರ ಕೋಟಿ ರೂಪಾಯಿ ಹೆಚ್ಚಾಯಿತು. ಇಡೀ ದೇಶವೇ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವಾಗ ಇವರ ತಿಜೋರಿ ಹೇಗೆ ಭರ್ತಿಯಾಯಿತು ಎಂಬ ಬಗ್ಗೆ ನಾವು ಪ್ರಶ್ನಿಸಬಾರದು, ಮಾತಾಡಬಾರದೆಂದು ನಾವು ಮಾತಾಡುವ ವಿಷಯಗಳನ್ನೇ ಅವರು ಬದಲಿಸಿ ಕೆಲಸಕ್ಕೆ ಬಾರದ ಬೇರೆ ಮಾತುಗಳನ್ನು ಆಡುವಂತೆ ಮಾಡಿದ್ದಾರೆ.
ತಿನ್ನುವ ಆಹಾರ, ಧರಿಸುವ ಬಟ್ಟೆ ಅವರವರ ವೈಯಕ್ತಿಕ ಆಯ್ಕೆ. ಅದರ ಬಗ್ಗೆ ಇನ್ನೊಬ್ಬರು ತೀರ್ಮಾನಿಸುವುದು ಸಭ್ಯತೆಯೆನಿಸಿಕೊಳ್ಳುವುದಿಲ್ಲ. ಹಾಗೆಂದು ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲು ಎಂದಿಗೂ ಅವಕಾಶ ಕೊಡಬಾರದು. ಭೂತಕಾಲದ ನಂಬಿಕೆಗಳು ವರ್ತಮಾನ ಕಾಲದ ಬದುಕನ್ನು ನಿರ್ಧರಿಸಬಾರದು. ಇನ್ನೊಬ್ಬರಿಗೆ ನಮ್ಮಿಂದ ತೊಂದರೆಯಾಗದಂತೆ ಪರಸ್ಪರ ಗೌರವಿಸಿಕೊಂಡು ಬದುಕುವುದನ್ನು ಬೇರೆ ಯಾರೂ ಹೇಳಿಕೊಡಬೇಕಾಗಿಲ್ಲ.ಅದನ್ನು ನಾವೇ ನಮ್ಮ ವಿವೇಚನೆಯಿಂದ ಕಲಿತುಕೊಳ್ಳಬೇಕು.
ನಾವೀಗ ಮಾತಾಡಬೇಕಾಗಿರುವುದು ಆರೋಗ್ಯ, ಶಿಕ್ಷಣದ ಖಾಸಗೀಕರಣದ ಅಪಾಯದ ಬಗ್ಗೆ. ಈ ದೇಶದ ನೂರಾ ಮೂವತ್ತೈದು ಕೋಟಿ ಜನರಿಗೆ ಸೇರಬೇಕಾದ ಸಂಪತ್ತು ಬೆರಳೆಣಿಕೆಯಷ್ಟು ಕಾರ್ಪೊರೇಟ್ ಖದೀಮರ ಒಡೆತನದಲ್ಲಿ ಯಾಕಿದೆ? ಲಕ್ಷಾಂತರ ಜನ ಉಪವಾಸದಿಂದ ನರಳುತ್ತಿರುವಾಗ ಕೆಲವೇ ಕೆಲವು ಉಳ್ಳವರು ಯಾಕೆ ಮಜಾ ಮಾಡುತ್ತಿದ್ದಾರೆ? ಮುಂಬೈ, ಮಂಗಳೂರು ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳನ್ನು ಅದಾನಿ ಉಡಿಗೆ ಹಾಕಿದ್ದೇಕೆ? ಕಾರ್ಪೊರೇಟ್ ಸನ್ಯಾಸಿ ಬಾಬಾ ರಾಮ್‌ದೇವ್‌ನ ಪತಂಜಲಿ ಉದ್ಯಮದ ಮೇಲಿನ ತೆರಿಗೆ ಮನ್ನಾ ಮಾಡಿದ್ದೇಕೆ? ನಮಗೆ ಪ್ರಾಣವಾಯು ನೀಡುವ ಅಮೂಲ್ಯ ಅರಣ್ಯಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಧಾರೆ ಎರೆದು ಕೊಡುತ್ತಿರುವುದೇಕೆ? ಸ್ವಾತಂತ್ರ್ಯ ಬಂದು ಏಳು ದಶಕಗಳು ಗತಿಸಿದರೂ ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ, ಅನಕ್ಷರತೆ ಇನ್ನೂ ನಿವಾರಣೆಯಾಗಿಲ್ಲವೇಕೆ? ನಮ್ಮ ಅನೇಕ ಸೋದರಿಯರು ಇಂದಿಗೂ ಇಟ್ಟು ಯಾತನೆಯ ಬದುಕನ್ನು ಬದುಕುತ್ತಿರುವುದೇಕೆ? ಇಂಥ ಸುಡು ಸುಡುವ ವಿಷಯಗಳ ಬಗ್ಗೆ ನಾವು ಯೋಚಿಸಬೇಕಾಗಿದೆ. ಬರೆಯಬೇಕಾಗಿದೆ, ಹೋರಾಡಬೇಕಾಗಿದೆ.