ನೆಹರೂ, ಪಟೇಲ್ ಮತ್ತು ಕಟ್ಟುಕತೆಗಳು
ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಮೊದಲ ಗೃಹ ಮಂತ್ರಿ ವಲ್ಲಭಭಾಯಿ ಪಟೇಲ್ ನಡುವೆ ವೈಮನಸ್ಸು ಇತ್ತೇ? ಪಟೇಲ್ ಅವರ ಅವಕಾಶ ತಪ್ಪಿಸಿ ನೆಹರೂ ಪ್ರಧಾನಿಯಾದರೇ? ದೇಶದ ದುರವಸ್ಥೆಗೆ ನೆಹರೂ ಕಾರಣರೇ ? ಇವೆಲ್ಲ ಎಂದೋ ಇತ್ಯರ್ಥವಾಗಿದೆ. ಜನರೂ ಇದನ್ನು ಮರೆತಿದ್ದಾರೆ. ನೆಹರೂ ನಿರ್ಗಮಿಸಿ ಆರು ದಶಕಗಳೇ ಗತಿಸಿವೆ. ಪಟೇಲರು ಅವರಿಗಿಂತ ಮೊದಲೇ ಹೋದರು. ಆದರೆ, ಕೆಲವರು ಇದನ್ನು ಮರೆತಿಲ್ಲ. ಸತ್ತು ಹೋದ ವಿಷಯದ ಸಮಾಧಿಯ ಮೇಲೆ ತಮ್ಮ ಪರಿಕಲ್ಪನೆಯ ರಾಷ್ಟ್ರ ನಿರ್ಮಾಣದ ಹಗಲುಗನಸು ಕಾಣುತ್ತಿದ್ದಾರೆ.
ಆಧುನಿಕ ಭಾರತದ ಶಿಲ್ಪಿ ಎಂದೇ ಹೆಸರಾಗಿರುವ ನೆಹರೂ ಅವರು ನಿರ್ಮಿಸಿದ ಸಾರ್ವಜನಿಕ ರಂಗದ ಬೃಹತ್ ಉದ್ಯಮಗಳು, ವಿಶ್ವವಿದ್ಯಾನಿಲಯಗಳು, ಅಣೆಕಟ್ಟುಗಳು, ರೂಪಿಸಿದ ಪಂಚವಾರ್ಷಿಕ ಯೋಜನೆಯ ಫಲಶ್ರುತಿಗಳು, ಜಾಗತಿಕವಾಗಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ ಅಲಿಪ್ತ ಆಂದೋಲನದ ನಾಯಕತ್ವ ಇವೆಲ್ಲವುಗಳನ್ನು ಕಂಡರಾಗದವರು ಕಳೆದ ಕೆಲ ವರ್ಷಗಳಿಂದ ನಿಷ್ಕಾರಣವಾಗಿ ನೆಹರೂ ನಿಂದನೆಯಲ್ಲಿ ತೊಡಗಿದ್ದಾರೆ. ಅದಕ್ಕಾಗಿ ವಲ್ಲಭಭಾಯಿ ಪಟೇಲರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣ ಬಂದ ನಂತರವಂತೂ ನೆಹರೂ, ಗಾಂಧಿ ತೇಜೋವಧೆ ಅವ್ಯಾಹತವಾಗಿ ನಡೆದಿದೆ. ನಿನ್ನೆ , ಮೊನ್ನೆ ಹುಟ್ಟಿದ ಕೆಲವು ಪಡ್ಡೆ ಹುಡುಗರು ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಸುಳ್ಳಿನ ಕತೆಗಳನ್ನು ತಂದು ಜಾಲತಾಣದ ಸುಳ್ಳಿನ ಬುಟ್ಟಿಯಲ್ಲಿ ಹಾಕುತ್ತಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಇದು ಎಲ್ಲ ಸಭ್ಯತೆ, ಸಂಸ್ಕೃತಿಯ ಎಲ್ಲೆ ಮೀರಿ ನಡೆಯುತ್ತಿದೆ. ಹೀಗೆ ನೆಹರೂ, ಗಾಂಧಿ ಮೇಲೆ ವೈಯಕ್ತಿಕ ದಾಳಿ ಮಾಡುವ ಪಡ್ಡೆ ಹುಡುಗರ ಹಿಂದೆ ಯಾರಿದ್ದಾರೆ? ಅವರ ಸಿದ್ಧಾಂತ ಯಾವುದು? ಎಂಬುದನ್ನು ವಿವರಿಸಬೇಕಾಗಿಲ್ಲ.ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇವರೆಲ್ಲ ಗೋಡ್ಸೆಗೆ ಸ್ಫೂರ್ತಿ ನೀಡಿದ ಸಿದ್ದಾಂತಕ್ಕೆ ಸೇರಿದವರು.ಈ ಪಡ್ಡೆಗಳು ಮಾತ್ರವಲ್ಲ ಇವರೆಲ್ಲರ ಹೀರೋ ಈ ದೇಶದ ಪ್ರಧಾನಿ ಎಂದು ಕರೆಸಿಕೊಳ್ಳುವ ವ್ಯಕ್ತಿಯೂ ತಮ್ಮ ಸ್ಥಾನದ ಘನತೆಯನ್ನು ಮರೆತು, ಅತ್ಯಂತ ನಿರ್ಲಜ್ಜವಾಗಿ ನೆಹರೂ ನಿಂದನೆಯಲ್ಲಿ ತೊಡಗಿದ್ದಾರೆ.
ಹಿಂದಿನ ಸರಕಾರಗಳಿಂದ ಬೇಸತ್ತು ಅಥವಾ ಮತಾಂಧತೆಯ ಉನ್ಮಾದ ತಲೆಗೇರಿ 2014 ರಲ್ಲಿ ಜನ ಇವರಿಗೆ ಅಧಿಕಾರ ನೀಡಿದರು.ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ಏನು ಭರವಸೆಯನ್ನು ನೀಡಿದ್ದರು? ಯಾವುದನ್ನು ಈಡೇರಿಸಿದರು ಎಂಬುದನ್ನು ಮರೆ ಮಾಚುತ್ತಲೇ ಬಂದ ಇವರು ದೇಶದ ಇಂದಿನ ಪರಿಸ್ಥಿತಿಗೆ ಮೊದಲ ಪ್ರಧಾನಿ ನೆಹರೂ ಕಾರಣ ಎಂದು ಹೇಳತೊಡಗಿದರು.ಹೀಗೆ ಹೇಳುತ್ತ ಮತ್ತೆ ಐದು ವರ್ಷ ಕಳೆದರು. ಮತ್ತೆ ಲೋಕಸಭಾ ಚುನಾವಣೆ ಬಂತು ಆಗಲೂ ನೆಹರೂ ನಿಂದನೆಯ ಇದೇ ಮಂತ್ರ ಪಠಿಸತೊಡಗಿದರು. ತಾವು ಅಧಿಕಾರಕ್ಕೆ ಬಂದು ಏನು ಮಾಡಿದೆವು ಎಂದು ಸಾಧನೆಗಳ ಪಟ್ಟಿಯನ್ನು ಜನರ ಮುಂದಿಡುವ ಬದಲಿಗೆ ಈಗಲೂ ಅರುವತ್ತು ವರ್ಷಗಳ ಹಿಂದೆ ಅಸುನೀಗಿದ ನೆಹರೂ ನಿಂದನೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಅಂದರೆ ಕಳೆದ ಶುಕ್ರವಾರ ಗುಜರಾತ್‌ನ ಏಕತಾ ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜಯಂತಿಯ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಸರ್ದಾರ್ ಪಟೇಲ್ ಬಯಸಿದ್ದರು,ಆದರೆ ನೆಹರೂ ಅವರು ಬಿಡಲಿಲ್ಲ ಹಾಗೂ ಪಟೇಲ್ ಪ್ರಧಾನಿಯಾಗಬೇಕಾಗಿತ್ತು ನೆಹರೂ ಬಿಟ್ಟು ಕೊಡಲಿಲ್ಲ ಎಂದು ಸುಳ್ಳಿನ ರೈಲು ಬಿಟ್ಟರು.ಸರ್ದಾರ್ ಪಟೇಲ್ ಅವರ ಜಯಂತಿಯನ್ನು ಕೂಡ ನೆಹರೂ ನಿಂದನೆಗೆ ಬಳಸಿಕೊಳ್ಳುವ ವ್ಯಕ್ತಿ ಮತ್ತು ಸಂಘಟನೆಗಳು ನೈಜ ಇತಿಹಾಸದ ಮೇಲೆ ಚಪ್ಪಡಿ ಕಲ್ಲು ಹಾಕುತ್ತಿವೆ. ಪ್ರಧಾನಿಯಾಗಿದ್ದಾರೆ.
ಪಂಡಿತ ಜವಾಹರಲಾಲ್ ನೆಹರೂ ಅಂದರೆ ಯಾರು? ದೇಶಕ್ಕೆ ಅವರ ಕೊಡುಗೆ ಏನು ಎಂಬುದು ದೇಶದ ಜನರಿಗೆ ಗೊತ್ತಿದೆ.ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ದೇಶಕ್ಕೆ ನೀಡಿದ ನೆಹರೂ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ತಮ್ಮ ಇಡೀ ಯೌವನವನ್ನು ಜೈಲು ವಾಸ ಮತ್ತು ಹೋರಾಟದಲ್ಲಿ ಕಳೆದರು.ಆದರೆ ಮೋದಿಯವರು ನೆಹರೂ ಅವರನ್ನು ಟೀಕಿಸುವ ಮೊದಲು ತಮ್ಮ ಪಕ್ಷಕ್ಕೆ ಸೈದ್ಧಾಂತಿಕ ಸ್ಫೂರ್ತಿಯಾದ ಸಂಘಟನೆ ಮತ್ತು ಅದರ ಸಿದ್ಧಾಂತದ ಅದರ ನಡೆಯ ಬಗ್ಗೆ ಉತ್ತರಿಸಬೇಕಾಗಿದೆ.1925 ರಲ್ಲೇ ಅಸ್ತಿತ್ವಕ್ಕೆ ಬಂದ ಆರೆಸ್ಸೆಸ್ ಸ್ವಾತಂತ್ರ್ಯ ಚಳವಳಿಯಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ? ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನ ರಚಿಸುವ ಸಾರಥ್ಯ ವಹಿಸಿದಾಗ ಅದರ ನಿಲುವು ಏನಾಗಿತ್ತು?
ಗಾಂಧಿ ಹತ್ಯೆಗೆ ಯಾರು ಕಾರಣ? ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ. ಈ ವರೆಗೆ ಉತ್ತರಿಸಿಲ್ಲ.
ನೆಹರೂ, ಗಾಂಧೀಜಿ ಅವರ ನಿಂದನೆಗೆ ವಲ್ಲಭಭಾಯಿ ಪಟೇಲ್ ಅವರನ್ನು ದುರ್ಬಳಕೆ ಮಾಡಿಕೊಳ್ಳುವವರು ಇತಿಹಾಸದ ಸತ್ಯ ಸಂಗತಿಗಳ ಮೇಲೆ ತಿಪ್ಪೆ ಸಾರಿಸಿ ತಮ್ಮ ಮೂಗಿನ ನೇರಕ್ಕೆ ಸುಳ್ಳಿನ ರೈಲು ಬಿಡುತ್ತಿದ್ದಾರೆ. ವಾಸ್ತವವಾಗಿ ನೆಹರೂ ಮತ್ತು ವಲ್ಲಭಭಾಯಿ ಪಟೇಲರು ಅತ್ಯಂತ ಆತ್ಮೀಯ ಸ್ನೇಹಿತರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಪಟೇಲರಿಗೆ 73 ವರ್ಷ, ನೆಹರೂ ಅವರಿಗೆ 58 ವರ್ಷ. ಜೊತೆಗೆ ಪಟೇಲರಿಗೆ ಆರೋಗ್ಯದ ತೀವ್ರ ಸಮಸ್ಯೆಗಳಿದ್ದವು.ಅವರ ಪತ್ನಿ ತೀರಿ ಕೊಂಡಿದ್ದರು,ಮಗಳು ಪಟೇಲರನ್ನು ನೋಡಿಕೊಳ್ಳುತ್ತಿದ್ದರು. ಆಗ ಪಟೇಲರು ಗಾಂಧೀಜಿ ಎದುರು ನಾನು ಪ್ರಧಾನಿಯಾಗುವುದಿಲ್ಲ ನನ್ನ ಆರೋಗ್ಯ ಸರಿಯಿಲ್ಲ, ನೆಹರೂ ಪ್ರಧಾನಿಯಾಗಲಿ ಎಂದು ಹೇಳಿದರು.ಆಗ ಗಾಂಧೀಜಿ ಒಪ್ಪಿದರು. ನೆಹರೂ ಹೆಸರು ಮುಂದೆ ಬಂತು. ಇದು ಇತಿಹಾಸ.ಆದರೆ ಪಟೇಲರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರಿಗೆ ನೈಜ ಇತಿಹಾಸ ಬೇಕಾಗಿಲ್ಲ. ಶಾಖಾಗಳಲ್ಲಿ ಹೇಳಿಕೊಟ್ಟ ತಳಬುಡವಿಲ್ಲದ ಕತೆಗಳೇ ಅವರು ತಿಳಿದ ಇತಿಹಾಸ.
ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ? ಸಂವಿಧಾನವನ್ನು ಯಾಕೆ ಒಪ್ಪಿಕೊಳ್ಳಲಿಲ್ಲ? ಹಾಗೂ ಸ್ವತಂತ್ರ ಭಾರತ ಅಂಗೀಕರಿಸಿದ ತ್ರಿವರ್ಣ ರಾಷ್ಟ್ರ ಧ್ವಜವನ್ನು ಯಾಕೆ ಗೌರವಿಸಲಿಲ್ಲ? ಈ ಪ್ರಶ್ನೆಗೆ ಈಗಲೂ ಅವರಿಂದ ಉತ್ತರಿಸಲು ಆಗಿಲ್ಲ. ಈಗ ತಡವಾದರೂ ಈಗಲೂ ಕಾಲ ಮಿಂಚಿಲ್ಲ . ಆರೆಸ್ಸೆಸ್‌ನವರು ಉತ್ತರಿಸಬೇಕು ,ತನ್ನ ಪಥ ಸಂಚಲನಗಳಲ್ಲಿ ಅದು ಲಾಠಿಯ ಬದಲಿಗೆ ಸಂವಿಧಾನದ ಪ್ರತಿಯನ್ನು ಹಾಗೂ ಕೇಸರಿ ಬಾವುಟ ಬದಲಾಗಿ ತ್ರಿವರ್ಣ ರಾಷ್ಟ್ರ ಧ್ವಜವನ್ನು ಯಾಕೆ ಹಿಡಿಯುವುದಿಲ್ಲ? ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಚಿತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನವನ್ನು ಸರಕಾರ ನಿರ್ಬಂಧಿಸಿದಾಗ ಕಲಬುರಗಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಗೆಳೆಯರು ಪಥ ಸಂಚಲನದಲ್ಲಿ ರಾಷ್ಟ್ರ ಧ್ವಜ ಮತ್ತು ಸಂವಿಧಾನವನ್ನು ಹಿಡಿದರೆ ನಮ್ಮ ತಕರಾರಿಲ್ಲ ಎಂದು ಹೇಳಿದರು.ಇದನ್ನು ಒಪ್ಪದ ಸಂಘದ ಪ್ರತಿನಿಧಿಗಳು ಸಭೆಯಿಂದ ಹೊರಗೆ ನಡೆದರು. ಮಚ್ಚು ಮತ್ತು ಚೂರಿಗಳಂತೆ ಲಾಠಿಯೂ ಒಂದು ಆಯುಧ. ಸ್ವಾತಂತ್ರ್ಯ ಹೋರಾಟದಲ್ಲಿ ವಿದೇಶಿ ಆಡಳಿತದ ವಿರುದ್ಧ ಲಾಠಿ ಹಿಡಿಯದವರು ,
ಸ್ವಾತಂತ್ರ್ಯ ನಂತರ ಈಗ ಲಾಠಿಯನ್ನು ಹಿಡಿದು ಪಥ ಸಂಚಲನ ಮಾಡುತ್ತಿರುವುದೇಕೆ?ಲಾಠಿಯಿಂದ ಯಾರನ್ನು ಥಳಿಸಲು ಹೊರಟಿದ್ದಾರೆ? ನಾಗರಿಕ ಸಮಾಜದಲ್ಲಿ ಪ್ರಜೆಗಳ ರಕ್ಷಣೆಗೆ ಸರಕಾರವಿದೆ. ಪೊಲೀಸರಿದ್ದಾರೆ,ಗಡಿ ರಕ್ಷಣೆಗೆ ಸೇನಾಪಡೆಗಳಿವೆ.ಇದೆಲ್ಲ ಇರುವಾಗ ಯಾರೊಂದಿಗೆ ಹೊಡೆದಾಡಲು ಇವರು ಲಾಠಿ ಹಿಡಿಯುತ್ತಾರೆ? ಹೋಗಲಿ ತಮ್ಮ ಸಂಘಟನೆಯನ್ನು ಇವರು ಯಾಕೆ ನೋಂದಣಿ ಮಾಡಿಸಿಲ್ಲ? ಎಂಬ ಪ್ರಶ್ನೆಗಳಿಗೆ ಈಗ ಉತ್ತರಬೇಕಾಗಿದೆ.
ಇಂದಿನ ಸಮಸ್ಯೆಗಳಿಗೆ ಅರುವತ್ತು ವರ್ಷಗಳ ಹಿಂದೆ ಅಸು ನೀಗಿದ ನೆಹರೂ ಹೇಗೆ ಕಾರಣರಾಗುತ್ತಾರೆ? ನೆಹರೂ ವಿಚಾರಗಳ ಬಗ್ಗೆ ಇವರೇಕೆ ಹೆದರಿದ್ದಾರೆ? ಇನ್ನು ಗಾಂಧೀಜಿ ಬಗ್ಗೆ ಇವರೇಕೆ ಚಿಕ್ಕ ಮಕ್ಕಳ ತಲೆಯಲ್ಲಿ ವಿಷವನ್ನು ತುಂಬುತ್ತಿದ್ದಾರೆ ,ಇದನ್ನು ಪ್ರತಿರೋಧಿಸಬೇಕಾದ ಕಾಂಗ್ರೆಸ್ ಯಾಕೆ ತೆಪ್ಪಗಿದೆ? ಇವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಹನ್ನೊಂದು ವರ್ಷಗಳಾದರೂ ಸಾಧಿಸಿದ್ದೇನು? ಸ್ವಾತಂತ್ರ್ಯಾ ನಂತರ ಅಪಾರ ಪರಿಶ್ರಮ ಮತ್ತು ಬದ್ಧತೆಯಿಂದ ಕಟ್ಟಿದ ಆಧುನಿಕ ಭಾರತದ ಅಪರೂಪದ ಸಾಧನೆಗಳನ್ನು ಒಂದೊಂದಾಗಿ ಮಣ್ಣು ಪಾಲು ಮಾಡುತ್ತ ಬಂದರು. ಸುಳ್ಳು ಹೇಳುವ ತಮ್ಮ ನಾಯಕನನ್ನು ವಿಜೃಂಭಿಸಲು ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್‌ಜವಾಹರಲಾಲ್ ನೆಹರೂ ಅವರನ್ನು ತಮ್ಮ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳ ಮೂಲಕ ತೇಜೋವಧೆ ಮಾಡುತ್ತ ಬಂದರು.ತಮ್ಮ ಈಗಿನ ವೈಫಲ್ಯಗಳನ್ನು ಮರೆ ಮಾಚಲು ನೆಹರೂ ಅವರತ್ತ ಬೆರಳು ತೋರಿಸತೊಡಗಿದರು. ಇತ್ತೀಚೆಗೆ ಲೋಕಸಭೆಯಲ್ಲಿ ಬೆಂಗಳೂರಿನಿಂದ ಲೋಕಸಭೆಗೆ ಚುನಾಯಿತನಾದ ಪಡ್ಡೆಯೊಬ್ಬ ನೆಹರೂ ಬಗ್ಗೆ ಸುಳ್ಳು ಹೇಳಲು ಹೋಗಿ ಶರದ್ ಪವಾರರ ರಾಷ್ಟ್ರ ವಾದಿ ಕಾಂಗ್ರೆಸ್ ಸಂಸದೆ ಸುಪ್ರಿಯಾ ಸುಳೆ ಮತ್ತು ಡಿ.ಎಂ.ಕೆ.ಯ ಕನಿಮೋಳಿ ಅವರಿಂದ ಉಗಿಸಿಕೊಂಡ ಕತೆ ಎಲ್ಲರಿಗೂ ಗೊತ್ತಿದೆ.ಕಾಂಗ್ರೆಸ್ ಸದಸ್ಯರಿಂದ ಬರಬೇಕಾಗಿದ್ದ ಪ್ರತಿರೋಧ ಇವರಿಂದ ಬಂತು. ಸಂಘ ಪರಿವಾರದ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದವರು ಅತ್ಯಂತ ವ್ಯವಸ್ಥಿತವಾಗಿ ನೆಹರೂ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ. ಆದರೆ ಇದನ್ನು ಪ್ರತಿಬಟಿಸಬೇಕಾದ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ,ಪ್ರಿಯಾಂಕ್ ಖರ್ಗೆ ,ಸಂತೋಷ್ ಲಾಡ್ ಅವರಂಥ ಕೆಲವರನ್ನು ಬಿಟ್ಟರೆ ಉಳಿದವರು ಮೌನವಾಗಿದ್ದಾರೆ. ನಯನಾ ಮೊಟಮ್ಮರಂಥವರ ಸಂಖ್ಯೆ ಹೆಚ್ಚಾಗಿರುವುದರಿಂದ ಅಂಥ ಪ್ರತಿಕ್ರಿಯೆ ಕಾಂಗ್ರೆಸ್‌ನವರಿಂದ ಬಂದಿಲ್ಲ, ಬರುವುದಿಲ್ಲ. ವಾಸ್ತವವಾಗಿ ನೆಹರೂ ಅವರಿಂದ ದೇಶಕ್ಕೆ ಯಾವ ಅನ್ಯಾಯವೂ ಆಗಿಲ್ಲ. ನೆಹರೂ ಕಾಲದಲ್ಲೇ ನಿಜಾಮರಿಂದ ಹೈದರಾಬಾದ್ ವಿಮೋಚನೆಯಾಯಿತು. 1961ರಲ್ಲಿ ಪೊರ್ಚುಗೀಸರಿಂದ ಸೇನಾ ಕಾರ್ಯಾಚರಣೆ ನಡೆಸಿ ಗೋವಾವನ್ನು ಮುಕ್ತಗೊಳಿಸಲಾಯಿತು. ಪಾಕಿಸ್ತಾನವನ್ನು ಎರಡು ಬಾರಿ ಹಿಮ್ಮೆಟ್ಟಿಸಲಾಯಿತು.
ಗಾಂಧಿ ಹತ್ಯೆಯಾದಾಗ ಇವರ ಮೇಲೆ ನಿರ್ಬಂಧ ಹೇರಿದವರು ಆಗಿನ ಗೃಹ ಮಂತ್ರಿ ವಲ್ಲಭಭಾಯಿ ಪಟೇಲರು.ಈ ನಿಷೇಧವನ್ನು ಹಿಂದೆೆಗೆದುಕೊಳ್ಳಲು ಪಟೇಲರು ತಯಾರಿರಲಿಲ್ಲ.ಆಗ ಪ್ರಧಾನಿ ನೆಹರೂ ಅವರೇ ಮಧ್ಯಪ್ರವೇಶ ಮಾಡಿ ನಾವು ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಟ್ಟಲು ಹೊರಟಿದ್ದೇವೆ.ಅದಕ್ಕಾಗಿ ನಿಷೇಧ ವಾಪಸ್ ಪಡೆಯೋಣ ಎಂದು ಪಟೇಲರ ಮನವೊಲಿಸಿದರು.ಕೊನೆಗೆ ಕೆಲವು ಷರತ್ತು ಗಳ ಮೇಲೆ ನಿಷೇಧ ವನ್ನು ವಾಪಸ್ ಪಡೆಯಲಾಯಿತು.ಆ ಷರತ್ತುಗಳನ್ನು ಒಪ್ಪಿ ಆಗಿನ ಸರಸಂಘಚಾಲಕ ಗೋಳ್ವ್ವಾಲರ್ ಅವರು ಬರೆದ ಪತ್ರ ಈಗಲೂ ಗೃಹ ಸಚಿವಾಲಯದಲ್ಲಿ ಇದೆ. ಅದನ್ನು ತಿಳಿದುಕೊಳ್ಳುವ ವ್ಯವಧಾನ ಬೇಕು. ವಿವಿಧ ಭಾಷೆ, ಸಂಸ್ಕೃತಿ,ಧರ್ಮ ಮತ್ತು ಯಾವುದೇ ಧರ್ಮಕ್ಕೆ ಸೇರದ ಬುಡಕಟ್ಟುಗಳಿರುವ ಭಾರತದಂಥ ನೂರಾ ನಲವತ್ತು ಕೋಟಿ ಜನಸಂಖ್ಯೆಯ ಬಹುತ್ವ ದೇಶದ ಸಾರಥ್ಯ ವಹಿಸಿದ ವ್ಯಕ್ತಿ ಹೇಗಿರಬೇಕು ಎಂಬುದಕ್ಕೆ ನೆಹರೂ ಮಾದರಿಯಾಗಿದ್ದಾರೆ. ಹೇಗಿರಬಾರದೆಂಬುದಕ್ಕೆ ಯಾರು ಮಾದರಿ ಎಂಬುದು ಎಲ್ಲರಿಗೂ ಗೊತ್ತಿದೆ. ಬ್ರಿಟಿಷರು ಬಿಟ್ಟು ಹೋದಾಗ ಒಂದು ದೇಶದ ಸ್ವರೂಪವನ್ನೇ ಪಡೆದಿರದಿದ್ದ ಭಾರತದ ನೆಲದ ಸಂಸ್ಥಾನಗಳನ್ನೆಲ್ಲ ಒಟ್ಟುಗೂಡಿಸಿ ಆಧುನಿಕ ಭಾರತವನ್ನು ಕಟ್ಟಿದವರು ಜವಾಹರಲಾಲ್ ನೆಹರೂ. ಅಂತರ್‌ರಾಷ್ಟ್ರೀಯವಾಗಿ ಭಾರತದ ಘನತೆ, ಪ್ರತಿಷ್ಠೆ ಹೆಚ್ಚಾಗಿದ್ದು ನೆಹರೂ ಕಾಲದಲ್ಲಿ. ಅಲಿಪ್ತ ಆಂದೋಲನವನ್ನು ಕಟ್ಟಿ ಅಮೆರಿಕದ ಸಾಮ್ರಾಜ್ಯಶಾಹಿಗೆ ಸವಾಲು ಹಾಕಿದವರು ನೆಹರೂ. ನೆಹರೂ ಕಾಲದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ವಿ. ಕೆ. ಕೃಷ್ಣ ಮೆನನ್ ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಭೆಯಲ್ಲಿ ಸುದೀರ್ಘ ಎಂಟು ತಾಸು ಮಾತಾಡಿ ಭಾರತದ ನಿಲುವನ್ನು ಸಮರ್ಥಿಸಿದ ದಾಖಲೆಯನ್ನು ಈ ವರೆಗೆ ಯಾರೂ ಮುರಿದಿಲ್ಲ. ಆದರೆ ಈಗ ಸದನದಲ್ಲಿ ಟ್ರಂಪ್ ಹೆಸರು ಹೇಳಲು ಹೆದರುವ ಪುಕ್ಕಲರಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು.? ಸಂಸತ್ತಿನ ಉಭಯ ಸದನಗಳ ಅಧಿವೇಶನ ನಡೆದಾಗ ಪ್ರಧಾನಿ ನೆಹರೂ ನಿತ್ಯವೂ ಸದನಕ್ಕೆ ಬಂದು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುತ್ತಿದ್ದರು. ಆದರೆ ಅಧಿವೇಶನ ನಡೆದಾಗ ವಿದೇಶಕ್ಕೆ ಜಿಗಿಯುವ ಹಾಗೂ ಸದನಕ್ಕೆ ಬರಲು ಹಿಂಜರಿಯುವವರನ್ನು ನೆಹರೂ ಅವರಿಗೆ ಹೋಲಿಕೆ ಮಾಡಲು ಹೇಗೆ ಸಾಧ್ಯ? ಎಂದೂ ಸುದ್ದಿಗೋಷ್ಠಿ ನಡೆಸದ, ಪ್ರಶ್ನೆಗಳನ್ನು ಎದುರಿಸಲಾಗದೇ ಪಲಾಯನ ಮಾಡುವ ಮಹಾಶಯರಿಗೆ ನೆಹರೂ ಅರ್ಥವಾಗುವುದಿಲ್ಲ. ಇವರ ದಿವಾಳಿಕೋರ ವಿದೇಶ ನೀತಿಯ ಪರಿಣಾಮವಾಗಿ ಭಾರತ ಇಂದು ಜಗತ್ತಿನಲ್ಲಿ ಒಂಟಿಯಾಗಿ ನಿಲ್ಲಬೇಕಾಗಿ ಬಂದಿದೆ.
ಭಾರತ ಪಾಕಿಸ್ತಾನ ನಡುವೆ ಘರ್ಷಣೆ ಆರಂಭವಾದಾಗ ಕದನ ವಿರಾಮ ಮಾಡಿಸಿದ್ದು ತಾನು ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಹಲವಾರು ಸಲ ಹೇಳಿದರೂ ಸದನದಲ್ಲಿ ಉತ್ತರಿಸುವಾಗ ಟ್ರಂಪ್ ಹೆಸರು ಹೇಳಲು ಹಿಂಜರಿದವರು ಯಾರು? ಜಾಗತಿಕವಾಗಿ ಭಾರತದ ಘನತೆ, ಪ್ರತಿಷ್ಠೆ ಇವರ ಕಾಲದಲ್ಲಿ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ವಿದೇಶಾಂಗ ನೀತಿ ಹಳ್ಳ ಹಿಡಿದಿದೆ. ಪಹಲ್ಗಾಮ್‌ನಲ್ಲಿ ಯಾತ್ರಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಅನೇಕರನ್ನು ಕೊಂದರು. ಅಲ್ಲಿ ಭದ್ರತಾ ವ್ಯವಸ್ಥೆಯನ್ನು ಯಾಕೆ ಮಾಡಿರಲಿಲ್ಲ? ಇದಕ್ಕೆಲ್ಲ ನೆಹರೂ ಕಾರಣರೇ?
ಸಂಸತ್ತಿನಲ್ಲಾಗಲಿ ಹೊರಗಡೆಯಾಗಲಿ ನೆಹರೂ ಮತ್ತು ಗಾಂಧೀಜಿ ಮೇಲೆ ಕೋಮುವಾದಿ ಶಕ್ತಿಗಳು, ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳು ಸುಳ್ಳು ಪ್ರಚಾರ ನಡೆಸುತ್ತಿರುವಾಗ ಕಾಂಗ್ರೆಸ್ ಸಂಸದರಾಗಲಿ, ಪಕ್ಷದ ನಾಯಕರಾಗಲಿ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಉದಾಹರಣೆಗಳು ಕಡಿಮೆ. ಸಂಸತ್ತಿನ ಉಭಯ ಸದನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ, ಜೈರಾಂ ರಮೇಶ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರೇನೋ ಮಾತಾಡುತ್ತಾರೆ. ಆದರೆ ಉಳಿದವರು ಗಪ್‌ಚುಪ್.
ಭಾರತ ಎಂಬುದು ವಿಭಿನ್ನ ಜನ ಸಮುದಾಯಗಳಿಗೆ, ಭಾಷೆಗಳಿಗೆ, ಧರ್ಮಗಳಿಗೆ, ಸಂಸ್ಕೃತಿಗಳಿಗೆ ಆಸರೆ ನೀಡಿದ ಭೂ ಪ್ರದೇಶ. ಸ್ವಾತಂತ್ರ್ಯಾನಂತರ ಒಂದು ದೇಶವಾಗಿ ಹೊರ ಹೊಮ್ಮಿದ ಇದರ ಬಹುತ್ವದ ಮಹತ್ವ ನೆಹರೂ ಅವರಿಗೆ ಗೊತ್ತಿತ್ತು. ಬ್ರಿಟಿಷರು ಹೋದ ಆನಂತರ ಇದನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಮಸಲತ್ತನ್ನು ಸಾವರ್ಕರ್, ಗೋಳ್ವಾಲ್ಕರ್ ಮಾಡಿದ್ದರು. ಇದಕ್ಕೆ ಪೂರಕವಾಗಿ ಭಾರತದ ವೇದ, ಪುರಾಣ, ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಸೇರಿದಂತೆ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಇಲ್ಲದ ಹಿಂದೂ ಎಂಬ ಪದದ ಸುತ್ತ ಒಂದು ಸಿದ್ದಾಂತವನ್ನು ರೂಪಿಸಿದರು. ಈ ಸಿದ್ಧಾಂತದ ಮೂಲ ಭಾರತವಲ್ಲ. ಜರ್ಮನಿ ಮತ್ತು ಇಟಲಿ. ನಾಗಪುರದ ಶಿವರಾಮ ಮುಂಜೆ ಇಟಲಿಗೆ ಹೋಗಿ ಮುಸ್ಸೋಲಿನಿಯನ್ನು ಭೇಟಿಯಾಗಿ ಅವನಿಂದ ಫ್ಯಾಶಿಸ್ಟ್ ಸಿದ್ದಾಂತವನ್ನು, ಜರ್ಮನಿಯಿಂದ ಹಿಟ್ಲರನ ಮೂಲಕ ನಾಝಿ ಸಿದ್ಧಂತವನ್ನು ಎರವಲು ತಂದು ಹಿಂದುತ್ವದ ಬೀಜ ನೆಟ್ಟರು.ಇದನ್ನು ನೆಹರೂ ಬಯಲಿಗೆಳೆಯುತ್ತಿದ್ದರು.
ಅಂತಲೇ ನೆಹರೂ ಮತ್ತು ಅವರ ಕುಟುಂಬದವರ ವಿರುದ್ಧ ನಿರಂತರ ಇವರು ಅಪಪ್ರಚಾರ ಮಾಡುತ್ತ ಬಂದರು. ಸ್ವಾತಂತ್ರ್ಯಾ ನಂತರದ ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಕೊಡುಗೆಯ ಬಗ್ಗೆ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಕೋಮುವಾದಿ ಗಳ ನಿರಂತರ ತೇಜೋವಧೆಯ ಅಬ್ಬರದಲ್ಲಿ ಸತ್ಯ ಹೊರಗೆ ಬಂದಿಲ್ಲ. ನೆಹರೂ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಕೂಡ ಮಾಡಲಿಲ್ಲ. ಖರ್ಗೆಯವರು ಹೇಳಿದಂತೆ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಸೇರಿದವರಿಗೆ ಸ್ವತಂತ್ರ ಭಾರತದ ಸಾಧನೆಗಳನ್ನು ಜನರಿಗೆ ವಿವರಿಸುವ ಆಸಕ್ತಿ ಇರಲಿಲ್ಲ. ಹಿಂದುತ್ವದ ಹಿನ್ನೆಲೆಯನ್ನು ಮೊದಲು ಗುರುತಿಸಿ ಖಡಾಖಂಡಿತವಾಗಿ ವಿರೋಧಿಸಿದವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ. ಅಂತಲೇ ಅವರು ಅಂದಿನಿಂದಲೇ ಈ ಷಡ್ಯಂತ್ರವನ್ನು ವಿರೋಧಿಸುತ್ತಾ ಬಂದರು. ಅವರನ್ನು ಕಂಡರೆ ಇವರಿಗೆ ಆಗುವುದಿಲ್ಲ.
ವಾಸ್ತವವಾಗಿ ಸ್ವಾತಂತ್ರ್ಯಾನಂತರ ಮೊದಲ ಹದಿನೇಳು ವರ್ಷಗಳ ಕಾಲಾವಧಿಯಲ್ಲಿ ನೆಹರೂ ಪ್ರಧಾನಿಯಾಗಿರದಿದ್ದರೆ ಭಾರತದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ನಮ್ಮ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿದ್ದರೆ ಅದರ ಶ್ರೇಯಸ್ಸು ನೆಹರೂ ಮತ್ತು ಅಂಬೇಡ್ಕರ್ ಅವರಿಗೆ ಸಲ್ಲಬೇಕು. ನರೇಂದ್ರ ಮೋದಿಯಂಥ ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ಪ್ರಧಾನಿಯಾಗುತ್ತಾರೆಂದರೆ ಅದು ಬಾಬಾಸಾಹೇಬರ ಸಂವಿಧಾನ ಮತ್ತು ನೆಹರೂ ಹಾಕಿದ ಜನತಾಂತ್ರಿಕ ಅಡಿಪಾಯ ಕಾರಣ.ಇದು ಮೋದಿಯವರಿಗೂ ಗೊತ್ತಿದೆ. ಆದರೆ ಅವರು ಒಪ್ಪಿ, ಆಯ್ಕೆ ಮಾಡಿಕೊಂಡ ರಾಜಕೀಯ ವಾಸ್ತವವನ್ನು ಒಪ್ಪಿಕೊಳ್ಳಲು ಬಿಡುವುದಿಲ್ಲ.
ವಾಸ್ತವವಾಗಿ ಭಾರತದ ಸಾರ್ವಜನಿಕ ಉದ್ಯಮಗಳು, ಅಣೆಕಟ್ಟುಗಳು, ಶಾಲೆ,ಕಾಲೇಜುಗಳು, ರೈಲು ಮಾರ್ಗಗಳು,ಆರೋಗ್ಯ ಕೇಂದ್ರಗಳು ,
ಸರಕಾರಿ ಆಸ್ಪತ್ರೆಗಳು , ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು, ರಾಷ್ಟ್ರೀಕೃತ ಬ್ಯಾಂಕುಗಳು ಇವೆಲ್ಲ 2014ರ ಆನಂತರ ಒಮ್ಮೆಲೇ ಧರೆಗಿಳಿದು ಬರಲಿಲ್ಲ. ಇವು ನೆಹರೂ ಪ್ರಧಾನಿಯಾದ ನಂತರ, ಹಂತಹಂತವಾಗಿ ಸಾಕಾರಗೊಂಡ ಸಾಧನೆಗಳು.
ನೆಹರೂ ಅವರನ್ನು ಕಾರಣವಿಲ್ಲದೇ ಟೀಕಿಸುವವರು ಅವರು ಬರೆದ ‘ಡಿಸ್ಕವರಿ ಆಫ್ ಇಂಡಿಯಾ’ ಮತ್ತು ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಪುಸ್ತಕಗಳನ್ನು ಓದಲಿ. ಕಾಂಗ್ರೆಸ್ ಪಕ್ಷವೂ ತನ್ನ ಕಾರ್ಯಕರ್ತರಿಗೆ ಈ ಪುಸ್ತಕಗಳ ಬಗ್ಗೆ ಅಧ್ಯಯನ ಶಿಬಿರಗಳನ್ನು ಏರ್ಪಡಿಸಲಿ. ಇದರ ಜೊತೆಗೆ ನೆಹರೂ ಅವರು ಜೈಲಿನಲ್ಲಿ ಇದ್ದಾಗ ಮಗಳು ಇಂದಿರಾ ಅವರಿಗೆ ಬರೆದ ಪತ್ರಗಳನ್ನು ಓದಲಿ. ಎಷ್ಟು ಸರಳವಾಗಿ ಜಗತ್ತಿನ, ಮನುಕುಲದ ಚರಿತ್ರೆಯನ್ನು ವಿವರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆಹರೂ ಅವರ ಸಾಹಿತ್ಯವನ್ನು ಕನ್ನಡದಲ್ಲಿ ಅನುವಾದ ಮಾಡಿಸಿ ಸರಕಾರದಿಂದ ಪ್ರಕಟಿಸಲಿ.
ಈಗಾಗಲೇ ಲೋಹಿಯಾ ಮತ್ತು ಡಾ. ಅಂಬೇಡ್ಕರ್ ಸಂಪುಟಗಳನ್ನು ಪ್ರಕಟಿಸಲಾಗಿದೆ. ಸಂಘ ಪರಿವಾರದ ಕಾರ್ಯಕರ್ತರು ತಮ್ಮ ವಿಚಾರಕ್ಕೆ ಭಿನ್ನವಾದ ಸಾಹಿತ್ಯವನ್ನು ಓದುವುದಿಲ್ಲ. ಹೀಗಾಗಿ ಅವರ ಬೌದ್ಧಿಕ ಮಟ್ಟ ಇದ್ದಲ್ಲೇ ಇದ್ದು ಭಕ್ತರೆಂದು ಲೇವಡಿಗೆ ಒಳಗಾಗುತ್ತಿದ್ದಾರೆ.
ನಮ್ಮ ಮಕ್ಕಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ವೈಚಾರಿಕ ಸಾಹಿತ್ಯವನ್ನು, ನೆಹರೂ ಮತ್ತು ಗಾಂಧೀಜಿಯವರ ಬರಹಗಳನ್ನು ಓದಲು ಕೊಡಬೇಕು. ಆಗ ಅವರು ಬದಲಾಗುತ್ತಾರೆ.
ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಜವಾಹರಲಾಲ್ ನೆಹರೂ ಗೌರವಿಸುತ್ತಿದ್ದರು. ತಮ್ಮ ಕಟು ಟೀಕಾಕಾರರಾಗಿದ್ದ ಡಾ. ರಾಮ ಮನೋಹರ ಲೋಹಿಯಾ ಅವರು ಸದನದಲ್ಲಿ ಇರಬೇಕೆಂದು ಬಯಸುತ್ತಿದ್ದ ನೆಹರೂ, ಅವರ ಮಾತುಗಳನ್ನು ಆಲಿಸುತ್ತಿದ್ದರು.ಕಮ್ಯುನಿಸ್ಟ್ ನಾಯಕರಾಗಿದ್ದ ಎಸ್.
ಎ.ಡಾಂಗೆ, ಭೂಪೇಶ್ ಗುಪ್ತ್ತಾ ಮತ್ತು ಎ.ಕೆ.ಗೋಪಾಲನ್ ಅವರ ಬಗ್ಗೆ ಕೂಡ ನೆಹರೂ ಅಪಾರ ಗೌರವ ಹೊಂದಿದ್ದರು. ಭೂಪೇಶ್ ಗುಪ್ತಾ ಸದನದಲ್ಲಿ ಮಾತಾಡುತ್ತಾರೆಂದರೆ ಆ ದಿನ ನೆಹರೂ ತಪ್ಪದೇ ಸದನಕ್ಕೆ ಬಂದು ಅವರ ಭಾಷಣವನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಅಂತಲೇ ಸೈದ್ಧಾಂತಿಕವಾಗಿ ನೆಹರೂ ಅವರ ಕಡು ವಿರೋಧಿಯಾದ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ನೆಹರೂ ಬಗ್ಗೆ ಗೌರವ ಹೊಂದಿದ್ದರು. 1977ರಲ್ಲಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಾಜಪೇಯಿ ಅವರು ವಿದೇಶ ಮಂತ್ರಿಯಾಗಿದ್ದಾಗ ಅವರ ಅಧಿಕೃತ ಕೊಠಡಿಯಲ್ಲಿ ಇದ್ದ ನೆಹರೂ ಅವರ ಪಟ ಮಾಯವಾಗಿತ್ತು. ಇದರಿಂದ ಕೋಪ ಗೊಂಡ ವಾಜಪೇಯಿ ನೆಹರೂ ಪಟ ತೆಗೆದವರನ್ನು ತರಾಟೆಗೆ ತೆಗೆದುಕೊಂಡರು. ನೆಹರೂ ಪಟವನ್ನು ಮತ್ತೆ ತರಿಸಿ ಗೋಡೆಗೆ ಹಾಕಿಸಿದರು.ಇದನ್ನು ಈಗಿನ ಸಂಘದ ಕಾರ್ಯಕರ್ತರು ಮತ್ತು ಭಕ್ತರು ತಿಳಿದುಕೊಳ್ಳಬೇಕು. ಇಂಥ ನೆಹರೂ ಬಗ್ಗೆ ತಲೆಯಲ್ಲಿ ಮೆದುಳಿಲ್ಲದ ಭಕ್ತರು ಅಸಭ್ಯವಾಗಿ ಮಾತಾಡುತ್ತಾರೆ. ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳಲ್ಲಿ ಅವರು ಪಡೆದ ತರಬೇತಿ ಅವರ ವಿವೇಕವನ್ನು ನಾಶ ಮಾಡಿದೆ. ಆದರೆ ಗಾಂಧಿ, ನೆಹರೂ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಏನಾಗಿದೆ? ಎಷ್ಟು ಜನ ಕಾಂಗ್ರೆಸ್ ಶಾಸಕರಿಗೆ ನೆಹರೂ ಬಗ್ಗೆ ಗೊತ್ತಿದೆ? ಇನ್ನಾದರೂ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಗಾಂಧಿ, ನೆಹರೂ, ಅಂಬೇಡ್ಕರ್ ಸಿದ್ಧಾಂತದ ಬಗ್ಗೆ ತಿಳುವಳಿಕೆ ನೀಡಲಿ.